ಸೋಮವಾರ, ಮಾರ್ಚ್ 1, 2021
29 °C

ಆರ್ಥಿಕ ಸಂಕಷ್ಟ; ಸಾಲಕ್ಕಾಗಿ ಉದ್ಯಾನವನ ಗಿರವಿ ಇಡಲು ಮುಂದಾದ ಪಾಕಿಸ್ತಾನ ಪ್ರಧಾನಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಸಂಕಷ್ಟದಲ್ಲಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಇಸ್ಲಾಮಾಬಾದ್‌ನ ಅತಿದೊಡ್ಡ ಉದ್ಯಾನವನವನ್ನು ಗಿರವಿ ಇಡಲು ಮುಂದಾಗಿದ್ದಾರೆ.

ಡಾನ್‌ ಪತ್ರಿಕೆಯ ವರದಿ ಪ್ರಕಾರ, ಸುಮಾರು 500 ಶತಕೋಟಿ ರೂಪಾಯಿ ಸಾಲ ಪಡೆಯಲು ಎಫ್-9 ಉದ್ಯಾನವನ್ನು ಅಡಮಾನ ಇಡುವ ಪ್ರಸ್ತಾಪವನ್ನು ಫೆಡರಲ್ ಕ್ಯಾಬಿನೆಟ್‌ನ ಮುಂದಿನ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಈ ಸಭೆಯು ಮಂಗಳವಾರ ನಡೆಯಲಿದೆ.

ಪ್ರಧಾನಿ ಖಾನ್‌ ಅವರು ತಮ್ಮ ನಿವಾಸದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆಗೆ ಹಾಜರಾಗಲಿದ್ದಾರೆ.

ಫಾತಿಮಾ ಜಿನ್ನಾ ಪಾರ್ಕ್‌ ಎಂದೂ ಕರೆಯಲಾಗುವ ಎಫ್‌–9 ಉದ್ಯಾನವನ ಸುಮಾರು 759 ಎಕರೆ ವಿಸ್ತೀರ್ಣವಿದ್ದು, ಇದು ಪಾಕಿಸ್ತಾನದ ಅತಿದೊಡ್ಡ ಹಸಿರು ಪ್ರದೇಶಗಳಲ್ಲಿ ಒಂದಾಗಿದೆ.

ವರದಿ ಪ್ರಕಾರ, ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಹಾಗೂ ವಿದೇಶಿ ವ್ಯವಹಾರದ ಅತಿದೊಡ್ಡ ಮೂಲಗಳಾದ ಸೌದಿ ಅರೇಬಿಯಾ ಮತ್ತು ಯುಎಇ ಜೊತೆಗಿನ ಸಂಬಂಧ ಕ್ಷೀಣಿಸುತ್ತಿರುವುದರಿಂದ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ತಾನು ನೀಡಿದ್ದ ಸುಮಾರು 21 ಸಾವಿರ ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸುವಂತೆ ಸೌದಿ ಅರೇಬಿಯಾ ಕಳೆದ ಆಗಸ್ಟ್‌ನಲ್ಲಿ ತಿಳಿಸಿತ್ತು. ತಕ್ಷಣವೇ ತನ್ನ ಸೇನಾಪಡೆಯ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವರನ್ನು ಸೌದಿಗೆ ಕಳುಹಿಸಿದ್ದ ಪಾಕ್,‌ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿತ್ತು. ಆದಾಗ್ಯೂ ಸೌದಿ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ವಿದೇಶಿ ವ್ಯವಹಾರದ ಎರಡನೇ ದೊಡ್ಡ ಮೂಲವಾಗಿರುವ ಯುಎಇ, ಇತ್ತೀಚೆಗೆ ಪಾಕಿಸ್ತಾನ ಉದ್ಯೋಗಿಗಳಿಗೆ ಕೆಲಸದ ವೀಸಾ ನೀಡುವುದನ್ನು ನಿಷೇಧಿಸಿದೆ. ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಇತ್ತೀಚೆಗೆ ಯುಎಇಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರಾದರೂ, ನಿಷೇದವನ್ನು ತೆಗೆದು ಹಾಕುವಂತೆ ಮಾಡಲು ಸಾಧ್ಯವಾಗಲಿಲ್ಲ. ಇವು ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ಹಿನ್ನಡೆಯುನ್ನುಂಟು ಮಾಡಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು