ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಕ್ ಮಾ ಉದ್ದೇಶಪೂರ್ವಕವಾಗಿಯೇ ಭೂಗತರಾಗಿದ್ದಾರಾ?

Last Updated 6 ಜನವರಿ 2021, 17:21 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಖ್ಯಾತ ಉದ್ಯಮಿ ಮತ್ತು ಅಲಿಬಾಬಾ ಗ್ರೂಪ್ ಆಫ್ ಕಂಪನಿ ಸ್ಥಾಪಕ ಜಾಕ್ ಮಾ ಕಳೆದ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಕೊಳ್ಳುತ್ತಿಲ್ಲ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ತಾವೇ ನಿರ್ಮಿಸುತ್ತಿರುವ ಆಫ್ರಿಕಾದ ಟ್ಯಾಲೆಂಟ್ ಶೋನ ಫೈನಲ್ ಎಪಿಸೋಡ್‌ನಲ್ಲೂ ಅವರು ಕಾಣಿಸಿಕೊಳ್ಳದಿದ್ದರಿಂದ ಚೀನಾದ ಹೈ ಪ್ರೊಫೈಲ್ ಉದ್ಯಮಿ ಎಲ್ಲಿ? ಎಂಬ ಪ್ರಶ್ನೆಗಳು ಎದ್ದಿದ್ದವು.

ಇದೀಗ, 56 ವರ್ಷದ ಚೀನಾ ಉದ್ಯಮಿಉದ್ದೇಶಪೂರ್ವಕವಾಗಿಯೇ ಭೂಗತರಾಗಿದ್ದಾರೆ. ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವುದರಿಂದ ಕೆಲ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಸೂಕ್ತವೆಂದು ಜಾಕ್ ಮಾಗೆ ಸಲಹೆ ನೀಡಲಾಗಿದೆ ಎಂದು ವರದಿಯಾಗಿದೆ. ಜಾಕ್ ಮಾ ಅಲಿಬಾಬಾ ಕಂಪನಿಯ ಪ್ರಧಾನ ಕಚೇರಿ ಇರುವ ಚೀನಾದ ಹ್ಯಾಂಗ್‌ ಝೋ ನಗರದಲ್ಲಿ ಇರಬಹುದು ಎಂದು ಸಿಎನ್‌ಬಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲಿಬಾ‌ಬಾ ಗ್ರೂಪ್‌ನ ಮಹತ್ವಾಕಾಂಕ್ಷಿ ಐಪಿಒ ಯೋಜನೆಗೆ ಚೀನಾ ತಡೆ ನೀಡಿದ ಬಳಿಕ ಚೀನಾದ ಟೆಕ್ ಉದ್ಯಮಿ ಜಾಕ್ ಮಾ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಸಿಎನ್ಎನ್ ಬಿಸಿನೆಸ್ ವರದಿ ಮಾಡಿದೆ.

ಜಾಕ್ ಮಾ ಭೂಗತವಾಗಿರುವುದೇಕೆ?

ನೇರ ನುಡಿಯ ವ್ಯಕ್ತಿತ್ವದಿಂದ ಹೆಸರಾದ ಜಾಕ್ ಮಾ, ಅದೊಂದು ದಿನ ಚೀನಾದ ಕಮ್ಯುನಿಸ್ಟ್ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಅಕ್ಟೋಬರ್ 24 ರಂದು ಶಾಂಘೈ ಸಮ್ಮೇಳನದಲ್ಲಿ ಚೀನಾದಲ್ಲಿ ನಾವಿನ್ಯತೆಯನ್ನು ನಿಗ್ರಹಿಸಲಾಗುತ್ತಿದೆ ಎಂದು ಟೀಕಿಸಿದ್ದರು. ಚೀನಾದ ಬ್ಯಾಂಕ್‌ಗಳು ಗಿರವಿ ಅಂಗಡಿಗಳಂತಾಗಿವೆ, ಹೆಚ್ಚು ಠೇವಣಿ ಇಟ್ಟವರಿಗೆ ಮಾತ್ರ ಸಾಲ ನೀಡಲಾಗುತ್ತಿದೆ ಎಂದು ಜರಿದಿದ್ದರು. ವಿಶ್ವದ ಅತಿ ದೊಡ್ಡ ಐಪಿಒ ಅನಾವರಣಗೊಳಿಸುವ ಯೋಜನೆಯಲ್ಲಿದ್ದ ಜಾಕ್ ಮಾ, ಇದಕ್ಕೂ ಒಂದು ತಿಂಗಳ ಮುಂಚೆ ಚೀನಾ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ಇದಾದ ಒಂದು ತಿಂಗಳ ಬಳಿಕ ಅಲಿಬಾಬಾ ಸಂಸ್ಥೆ ವಿರುದ್ಧ ಚೀನಾ ಸರ್ಕಾರ ಏಕಸ್ವಾಮ್ಯ ವಿರೋಧಿ ತನಿಖೆ ಆರಂಭಿಸಿತು. ಅಂದಿನಿಂದ ಚೀನಾ ಹೆಜ್ಜೆ ಹೆಜ್ಜೆಗೂ ಜಾಕ್ ಮಾ ಟೆಕ್ ಸಾಮ್ರಾಜ್ಯವನ್ನು ನಿಗ್ರಹಿಸುವ ಪ್ರಯತ್ನ ನಡೆಸಿದೆ. ಕೋವಿಡ್ ಕಾಲದಲ್ಲಿ ಅಧಿಕ ನಷ್ಟ ಅನುಭವಿಸಿದ್ದಅಲಿಬಾಬಾ ಗ್ರೂಪ್ಚೇತರಿಕೆಗೆ ಜಾಕ್ ಮಾ ಆಡಿದ ಮಾತುಗಳೇ ಮುಳುವಾಗಿವೆ. ಬಾಯಿ ಜಾರಿದ ಪದಗಳಿಂದಾಗಿ ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ನಿಗ್ರಹಿಸಿದ ಹಲವು ಉದಾಹರಣೆಗಳಿವೆ.ಹೀಗಾಗಿಯೇ ಅವರು ಉದ್ದೇಶಪೂರ್ವಕವಾಗಿ ಭೂಗತರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT