ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆ ಪೂರೈಕೆಗೆ ‘ಜಿ–7’ ಭರವಸೆ

Last Updated 13 ಜೂನ್ 2021, 15:41 IST
ಅಕ್ಷರ ಗಾತ್ರ

ಫಾಲ್‌ಮೌತ್‌ (ಇಂಗ್ಲೆಂಡ್): ಸಾಂಕ್ರಾಮಿಕ ರೋಗವಾದ ಕೋವಿಡ್‌ ಪಿಡುಗಿಗೆ ವಿಶ್ವದ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮತ್ತು ಜಾಗತಿಕ ತಾಪಮಾನ ವಿಷಯಕ್ಕೆ ಸಂಬಂಧಿಸಿದಂತೆ ‘ಜಿ–7’ ರಾಷ್ಟ್ರಗಳು ಬದ್ಧತೆ ಪ್ರದರ್ಶಿಸಿವೆ.

ಜಿ–7 ಶೃಂಗಸಭೆ ಭಾನುವಾರ ಮುಕ್ತಾಯವಾಗಿದ್ದು, ಅಮೆರಿಕ, ಬ್ರಿಟನ್‌, ಕೆನಡ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌ ದೇಶಗಳು ಈ ಕುರಿತು ವಾಗ್ದಾನಗಳ ಮೂಲಕ ಘೋಷಣೆ ಮಾಡಿವೆ.

ತುರ್ತಾಗಿ ಅಗತ್ಯವಿರುವ ಬಡ ಮತ್ತು ಮಧ್ಯಮ ದೇಶಗಳಿಗೆ ಕೋವಿಡ್‌ ಲಸಿಕೆಯನ್ನು ಹಂಚಿಕೊಳ್ಳೂವುದಾಗಿ ‘ಜಿ–7’ ನಾಯಕರು ಹೇಳಿದ್ದಾರೆ. ಅಂದಾಜು 100 ಕೋಟಿ ಡೋಸ್‌ಗಳನ್ನು ಈ ಗುಂಪಿನ ರಾಷ್ಟ್ರಗಳು ಒದಗಿಸಲಿವೆ. ಈ ಪೈಕಿ ಶೇ 50ರಷ್ಟು ಅಮೆರಿಕ ಪೂರೈಸಲಿದ್ದು, ಬ್ರಿಟನ್‌ 10 ಕೋಟಿ ಡೋಸ್‌ಗಳನ್ನು ಒದಗಿಸಲಿದೆ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತಿಳಿಸಿದರು.

ಎಲ್ಲಾ ಜಿ -7 ದೇಶಗಳು 2050ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿ ತಲುಪುವುದಾಗಿ ಹೇಳಿವೆ.

ಕೋವಿಡ್ ಉಗಮ–ಚರ್ಚೆ: ಶೃಂಗಸಭೆಯಲ್ಲಿ ವಿಶ್ವವನ್ನು ಕಾಡುತ್ತಿರುವ ಕೋವಿಡ್‌ ಪಿಡುಗಿನ ಉಗಮದ ಕುರಿತ ಚರ್ಚೆ ನಡೆದಿದ್ದು, ಚೀನಾದ ವುಹಾನ್ ನಗರದ ವೈರಾಲಜಿ ಪ್ರಯೋಗಾಲಯದಲ್ಲಿ ನಡೆದಿರಬಹುದಾದ ಸೋರಿಕೆಯ ಬಗ್ಗೆ ವಿಚಾರ ಮಂಥನ ನಡೆಸಿದ್ದಾರೆ.

ವುಹಾನ್‌ ಲ್ಯಾಬ್‌ನಿಂದ ಸೋರಿಕೆಯಾಗಿ ಕೊರೊನಾ ವೈರಸ್‌ ಹುಟ್ಟಿಕೊಂಡಿರಬಹುದು ಎಂಬುದರ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್‌ ರಾಬ್‌ ಆಗ್ರಹಿಸಿದ್ದಾರೆ. ಈ ಕುರಿತು ಇರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಚೀನಾಕ್ಕೆ ಹೋಗಿ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ‘ಸ್ಕೈ ನ್ಯೂಸ್‌’ಗೆ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

‘ಕೊರೊನಾ ವೈರಸ್‌ನ ಉಗಮದ ಕುರಿತು ಜಿ–7 ಶೃಂಗಸಭೆಯಲ್ಲಿ ಚರ್ಚೆಗಳು ನಡೆದಿವೆ. ಆದರೆ ಯಾವುದೇ ತೀರ್ಮಾನಕ್ಕೆ ಇನ್ನೂ ಬಂದಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌ ತಿಳಿಸಿದ್ದಾರೆ.

ಚೀನಾದ ಆರ್ಥಿಕ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಲು ಜಿ–7 ನಿರ್ಧಾರ: ಚೀನಾದ ಮಾರುಕಟ್ಟೆ ರಹಿತ ಆರ್ಥಿಕ ಅಭ್ಯಾಸಗಳನ್ನು ಪ್ರಶ್ನಿಸಿರುವ ‘ಜಿ–7’ ರಾಷ್ಟ್ರಗಳು ಚೀನಾದ ಈ ಸವಾಲನ್ನು ಒಗ್ಗಟ್ಟಿನಿಂದ ಎದುರಿಸಲು ನಿರ್ಧರಿಸಿವೆ. ಅಲ್ಲದೆ ಹಾಂಗ್‌ಕಾಂಗ್‌ನಲ್ಲಿ ಮಾನವ ಹಕ್ಕುಗಳನ್ನು ಗೌರವಿಸುವಂತೆ ಬೀಜಿಂಗ್‌ಗೆ ಹೇಳಿವೆ. ಉಯಿಘರ್ ಅಲ್ಪಸಂಖ್ಯಾತರ ವಿರುದ್ಧದ ಶೋಷಣೆಯನ್ನು ನಿಲ್ಲಿಸುವಂತೆ ಕರೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT