ಬುಧವಾರ, ಆಗಸ್ಟ್ 10, 2022
21 °C

ಕೋವಿಡ್‌ ಲಸಿಕೆ ಪಡೆದ ವ್ಯಕ್ತಿಗೆ ಅನಾರೋಗ್ಯ: ಪ್ರಯೋಗಕ್ಕೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕೋವಿಡ್‌ ವಿರುದ್ಧದ ಸಂಭಾವ್ಯ ಲಸಿಕೆಯ ಪ್ರಯೋಗವನ್ನು ಆಸ್ಟ್ರಾ ಜೆನೆಕಾ ಸಂಸ್ಥೆಯು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರಯೋಗದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರಲ್ಲಿ ಅನಿರೀಕ್ಷಿತ ಅಸ್ವಾಸ್ಥ್ಯ ಕಾಣಿಸಿದ್ದು ಇದಕ್ಕೆ ಕಾರಣ. 

ಕೋವಿಡ್‌ ವಿರುದ್ಧ ವಿವಿಧ ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸಿದ್ದು, ಆಸ್ಟ್ರಾ ಜೆನೆಕಾ ಕಂಪನಿಯ ಲಸಿಕೆಯು ಮುಂಚೂಣಿಯಲ್ಲಿದೆ.

ಲಸಿಕೆಯ ಸುರಕ್ಷತೆಯ ವಿಚಾರಗಳನ್ನು ಸ್ವತಂತ್ರ ಸಮಿತಿಯೊಂದು ಪರಿಶೀಲನೆಗೆ ಒಳಪಡಿಸಲಿದೆ. ಲಸಿಕೆಯು ಬಳಕೆಗೆ ದೊರೆಯಬಹುದಾದ ಸಮಯದ ಮೇಲೆ ಆಗುವ ಪರಿಣಾಮಗಳನ್ನು ಕನಿಷ್ಠಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಆಸ್ಟ್ರಾ ಜೆನೆಕಾ ಸಂಸ್ಥೆಯು ತಿಳಿಸಿದೆ. 

ಲಸಿಕೆ ಪ್ರಯೋಗದಲ್ಲಿ ಭಾಗಿಯಾದ ಬ್ರಿಟನ್‌ನ ವ್ಯಕ್ತಿಯೊಬ್ಬರಲ್ಲಿ ಬೆನ್ನುಹುರಿ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಇದು ವೈರಾಣು ಸೋಂಕಿನಿಂದ ಉಂಟಾಗುತ್ತದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಆದರೆ, ಆಸ್ಟ್ರಾ ಜೆನೆಕಾ ಸಂಸ್ಥೆಯು ಅಭಿವೃದ್ಧಿಪಡಿಸಿದ ಲಸಿಕೆ ಪ್ರಯೋಗದಲ್ಲಿ ಭಾಗಿಯಾದ ವ್ಯಕ್ತಿ ಇವರೇ ಹೌದೇ ಎಂಬುದು ಖಚಿತಪಟ್ಟಿಲ್ಲ. 

ಬ್ರಿಟನ್‌ನಲ್ಲಿ ಮೇ ತಿಂಗಳಲ್ಲಿಯೇ ಲಸಿಕೆ ಪ್ರಯೋಗ ಆರಂಭವಾಗಿದೆ. 5ರಿಂದ70 ವರ್ಷದೊಳಗಿನ 12 ಸಾವಿರ ಜನರಿಗೆ ಪ್ರಾಯೋಗಿಕವಾಗಿ ಲಸಿಕೆ ನೀಡಲಾಗುತ್ತಿದೆ. 

ಅಮೆರಿಕದಲ್ಲಿ 30 ಸಾವಿರ ಜನರಿಗೆ ಲಸಿಕೆ ನೀಡುವ ಪ್ರಯೋಗ ಕಳೆದ ವಾರ ಆರಂಭವಾಗಿದೆ. ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗವು ಅಂತಿಮ ಹಂತದಲ್ಲಿದೆ. ಜಗತ್ತಿನಾದ್ಯಂತ 50 ಸಾವಿರ ಮಂದಿಗೆ ಲಸಿಕೆ ನೀಡಿ ಪ್ರಯೋಗ ನಡೆಸುವ ಗುರಿಯನ್ನೂ ಆಸ್ಟ್ರಾ ಜೆನೆಕಾ ಹೊಂದಿದೆ. 

ಭಾರತದಲ್ಲಿನ ಪ್ರಯೋಗಕ್ಕೆ ತಡೆ ಇಲ್ಲ

ನವದೆಹಲಿ: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಬ್ರಿಟನ್‌–ಸ್ವೀಡನ್‌ನ ಔಷಧ ಕಂಪನಿ ಆಸ್ಟ್ರಾ ಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕೋವಿಡ್‌ ತಡೆ ಲಸಿಕೆಯ ಪ್ರಯೋಗವು ಭಾರತದಲ್ಲಿ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ ಎಂದು ಪುಣೆಯ ಸೆರಂ ಇನ್ಸ್‌ಟಿಟ್ಯೂಟ್‌ ಹೇಳಿದೆ. 

‘ಬ್ರಿಟನ್‌ನ ಪ್ರಯೋಗದ ಬಗ್ಗೆ ನಾವು ಏನನ್ನೂ ಹೇಳಲಾಗದು. ಆದರೆ, ಭಾರತದಲ್ಲಿನ ಪ್ರಯೋಗವು ಪ್ರಗತಿಯಲ್ಲಿದೆ ಮತ್ತು ಯಾವುದೇ ತೊಂದರೆ ಎದುರಾಗಿಲ್ಲ’ ಎಂದು ಸೆರಂ ಇನ್ಸ್‌ಟಿಟ್ಯೂಟ್‌ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು