ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವಿದೇಶಾಂಗ, ರಕ್ಷಣಾ ಖಾತೆ ಸಚಿವರನ್ನು ಬದಲಿಸಿದ ಬ್ರೆಜಿಲ್‌ ಅಧ್ಯಕ್ಷ

Last Updated 30 ಮಾರ್ಚ್ 2021, 6:08 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ: ಕೋವಿಡ್‌ ಲಸಿಕೆ ಸಂಗ್ರಹದಲ್ಲಿ ಹಿಂದುಳಿದ ಕಾರಣಗಳಿಂದ ಬ್ರೆಜಿಲ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಎರ್ನೆಸ್ಟೊ ಅರೌಜೊ ಭಾರಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೊ, ವಿದೇಶಾಂಗ ಖಾತೆ ಸೇರಿದಂತೆ ಸಂಪುಟ ಸಚಿವರ ಬದಲಾವಣೆ ಮಾಡಿದ್ದಾರೆ.

ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ತತ್ತರಿಸುವ ಬ್ರೆಜಿಲ್‌ನಲ್ಲಿ ಕೋವಿಡ್‌–19 ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಪರಿಸ್ಥಿತಿಯ ಸೂಕ್ತ ನಿರ್ವಹಣೆಗಾಗಿ ಅಧ್ಯಕ್ಷ ಬೊಲ್ಸೊನಾರೊ ಆಡಳಿತದಲ್ಲಿ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಸೋಮವಾರ ವಿದೇಶಾಂಗ, ರಕ್ಷಣಾ ಖಾತೆ ಸಚಿವರು, ಅಟಾರ್ನಿ ಜನರಲ್‌ ಹಾಗೂ ಸೇನಾ ಮುಖ್ಯಸ್ಥರನ್ನು ಬದಲಿಸಿದ್ದಾರೆ.

ನ್ಯಾಯಮೂರ್ತಿ, ಸಾರ್ವಜನಿಕ ಭದ್ರತಾ ಸಚಿವ ಹಾಗೂ ಸರ್ಕಾರದ ಕಾರ್ಯದರ್ಶಿ ಸ್ಥಾನಗಳಿಗೆ ಹೆಸರುಗಳನ್ನು ಬೊಲ್ಸೊನಾರೊ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಆದರೆ, ತರಲಾಗಿರುವ ಬದಲಾವಣೆಗೆ ಯಾವುದೇ ಕಾರಣವನ್ನು ಪ್ರಕಟಿಸಿಲ್ಲ.

ಬ್ರೆಜಿಲ್‌ನಲ್ಲಿ ಕೋವಿಡ್‌–19ನಿಂದ 3.14 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಬೊಲ್ಸೊನಾರೊ, ಮಾರ್ಚ್‌ ಮಧ್ಯದಲ್ಲಿ ಆರೋಗ್ಯ ಖಾತೆ ಸಚಿವರನ್ನು ಬದಲಿಸಿದ್ದರು. ಕೋವಿಡ್‌ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ವೈಫಲ್ಯ ಎದುರಾಗಿರುವುದಾಗಿ ವಿರೋಧ ಪಕ್ಷವು ವಿದೇಶಾಂಗ ಸಚಿವರನ್ನು ತೀವ್ರ ಟೀಕೆಗೆ ಗುರಿ ಮಾಡಿತ್ತು.

ಚೀನಾ, ಅಮೆರಿಕ, ಯುರೋಪಿಯನ್‌ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಬ್ರೆಜಿಲ್‌ ವಾಣಿಜ್ಯ ಸಂಬಂಧ ಹೊಂದಿದ್ದರೂ, ರಾಜಕೀಯವಾಗಿ ಸ್ನೇಹಿಪೂರ್ಣ ಬಾಂಧವ್ಯವಿಲ್ಲ. ಕೋವಿಡ್‌ ಪರಿಸ್ಥಿತಿಯಲ್ಲಿ ವಿದೇಶಾಂಗ ಸಚಿವರು ಜಾಗತಿಕವಾಗಿ ಸಹಕಾರ ಕೋರುವಲ್ಲಿ ವಿಫಲರಾಗಿರುವುದು ಎರ್ನೆಸ್ಟೊ ಅರೌಜೊ ವಿರುದ್ಧ ಮುಳುವಾಯಿತು ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕದಲ್ಲಿ ಟ್ರಂಪ್‌ ಆಡಳಿತವಿದ್ದಾಗ ಸಿದ್ಧಾಂತದ ಆಧಾರದ ಮೇಲೆ ನೀತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಎರ್ನೆಸ್ಟೊ ಅರೌಜೊ ವಿದೇಶದಲ್ಲಿ ಬ್ರೆಜಿಲ್‌ನ ಘನತೆಯನ್ನು ಕುಂದಿಸಿದ್ದಾರೆ ಎಂದು ಆರೋಪಿಸಿ 300 ಜನ ಅಧಿಕಾರಿಗಳ ಗುಂಪು ಅಧ್ಯಕ್ಷರಿಗೆ ಪತ್ರ ರವಾನಿಸಿತ್ತು. ಅರೌಜೊ ಅವರನ್ನು ವಿದೇಶಾಂಗ ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಕೋರಿತ್ತು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್‌ ಗೆಲುವನ್ನು ಪರಿಗಣಿಸಿದ ಕೊನೆಯ ರಾಷ್ಟ್ರ ಬ್ರೆಜಿಲ್‌. ಅದರೊಂದಿಗೆ ಅರೌಜೊ, ಉದ್ಘಾಟನಾ ಸಮಾರಂಭಕ್ಕೆ ಹಾಜರಾಗುವುದರಿಂದ ತಪ್ಪಿಸಿಕೊಂಡರು. ಅದೇ ಸಮಯದಲ್ಲಿ ರಜೆ ತೆಗೆದುಕೊಂಡಿದ್ದರು. ಅರೌಜೊ ಹಲವು ಸಂದರ್ಭಗಳಲ್ಲಿ ನೀಡಿರುವ ಹೇಳಿಕೆಗಳಿಂದಾಗಿ ಚೀನಾ ಸಹ ಬ್ರೆಜಿಲ್‌ ವಿರುದ್ಧ ಕಿಡಿ ಕಾರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT