ಮಂಗಳವಾರ, ಡಿಸೆಂಬರ್ 7, 2021
20 °C

ಒಂದು ರಾತ್ರಿ ಆಸ್ಪತ್ರೆಯಲ್ಲಿ ಕಳೆದ ಬ್ರಿಟನ್‌ ರಾಣಿ ಎಲಿಜಬೆತ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌ (95) ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದು ರಾತ್ರಿ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಪ್ರಾಥಮಿಕ ಆರೋಗ್ಯ ತಪಾಸಣೆಗಳ ಬಳಿಕ ಗುರುವಾರ ಅವರು ವಿಂಡ್ಸರ್‌ ಕೋಟೆಯ ಮನೆಗೆ ಮರಳಿರುವುದಾಗಿ ಅರಮನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಗತ್ತಿನ ಪ್ರಾಚೀನ ಮತ್ತು ಸುದೀರ್ಘ ಆಡಳಿತ ನಡೆಸಿರುವ ರಾಜಮನೆತನದ ರಾಣಿ ಎಲಿಜಬೆತ್‌, ಬುಧವಾರ ಉತ್ತರ ಐರ್ಲೆಂಡ್‌ನ ಅಧಿಕೃತ ಭೇಟಿ ರದ್ದುಪಡಿಸಿದ್ದರು. 'ಎಲಿಜಬೆತ್‌ ಅವರಿಗೆ ವಿಶ್ರಾಂತಿ ಪಡೆಯುವಂತೆ ಅವರ ವೈದ್ಯಕೀಯ ಸಿಬ್ಬಂದಿ ಸಲಹೆ ಮಾಡಿದ್ದರು ಹಾಗೂ ಅವರ ಅನಾರೋಗ್ಯವು ಕೋವಿಡ್–19ಗೆ ಸಂಬಂಧಿಸಿದಲ್ಲ' ಎಂದು ಅರಮನೆಯ ಪ್ರಕಟಣೆ ತಿಳಿಸಿದೆ.

'ಕೆಲವು ದಿನಗಳು ವಿಶ್ರಾಂತಿ ಪಡೆಯಬೇಕೆಂಬ ವೈದ್ಯಕೀಯ ಸಲಹೆಯ ಮೇರೆಗೆ ರಾಣಿ ಎಲಿಜಬೆತ್‌ ಬುಧವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೆಲವು ಪ್ರಾಥಮಿಕ ಆರೋಗ್ಯ ತಪಾಸಣೆಗಳಿಗೆ ಒಳಗಾದರು. ಗುರುವಾರ ಭೋಜನ ಸಮಯದ ವೇಳೆಗೆ ಅವರು ವಿಂಡ್ಸರ್‌ ಕೋಟೆಗೆ ಮರಳಿದರು ಹಾಗೂ ಉತ್ಸಾಹದಲ್ಲಿಯೇ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾದರು' ಎಂದು ಅರಮನೆಯ ಪ್ರಕಟಣೆಯಲ್ಲಿ ವಿವರಿಸಿದೆ.

ಮೂಲಗಳ ಪ್ರಕಾರ ಅವರು, ಸೆಂಟ್ರಲ್‌ ಲಂಡನ್‌ನ ಕಿಂಗ್‌ ಎಡ್ವರ್ಡ್‌ VII ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ.

ಬಿಲ್‌ ಗೇಟ್ಸ್‌ ಸೇರಿದಂತೆ ಕೋಟ್ಯಧಿಪತಿ ಉದ್ಯಮಿ ನಾಯಕರಿಗಾಗಿ ಗುರುವಾರ ರಾತ್ರಿ ವಿಂಡ್ಸರ್‌ನಲ್ಲಿ ಏರ್ಪಡಿಸಲಾದ ಪಾನೀಯ ಕೂಟದಲ್ಲಿ ಎಲಿಜಬೆತ್‌ ಭಾಗಿಯಾದರು. ಹವಾಮಾನ ಬದಲಾವಣೆ ಸಮಾವೇಶದ (ಸಿಒಪಿ26) ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು 'ಹಸಿರು ಹೂಡಿಕೆ ಸಮಾವೇಶ' ನಡೆಸಿದ್ದು, ಅಲ್ಲಿಗೆ ಉದ್ಯಮಿಗಳು ಆಗಮಿಸಿದ್ದಾರೆ.

ಇದನ್ನೂ ಓದಿ–

ರಾಣಿ ಎಲಿಜಬೆತ್‌ ಆರೋಗ್ಯ ಉತ್ತಮವಾಗಿದೆ, ಸಂತೋಷದಿಂದ ನಗುತ್ತ ಅತಿಥಿಗಳೊಂದಿಗೆ ಸಮಯ ಕಳೆದಿದ್ದಾರೆ. ರಾಣಿಯಾಗಿ ಅಧಿಕಾರವಹಿಸಿ ಮುಂದಿನ ವರ್ಷಕ್ಕೆ 70 ವರ್ಷ ಪೂರೈಸಲಿರುವ ಎಲಿಜಬೆತ್‌, 2013ರ ನಂತರ ಇದೇ ಮೊದಲ ಬಾರಿಗೆ ಒಂದು ರಾತ್ರಿ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. 2018ರಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ 2003ರಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯ ಸಂಬಂಧಿತ ವಿಚಾರಗಳನ್ನು ಅರಮನೆ ಆಡಳಿತವು ಖಾಸಗಿ ವಿಷಯವೆಂದು ಪರಿಗಣಿಸುತ್ತಿದ್ದು, ಹೆಚ್ಚು ಚರ್ಚೆ ಅಥವಾ ವಿವರಣೆ ನೀಡಿಲ್ಲ.

ಎಲಿಜಬೆತ್ ಅವರ ಪತಿ ಪ್ರಿನ್ಸ್ ಫಿಲಿ‍ಪ್ (99) ಇದೇ ವರ್ಷ ವಿಂಡ್ಸರ್‌ನಲ್ಲಿ ಮೃತಪಟ್ಟರು. ಅನಂತರವೂ ಎಲಿಜಬೆತ್‌ ಅಧಿಕೃತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಹೆಚ್ಚುವರಿ ಹೊಣೆಗಾರಿಕೆಯನ್ನು ಅವರ ಮಗ ಪ್ರಿನ್ಸ್‌ ಚಾರ್ಲ್ಸ್‌ ಅವರಿಗೆ ವಹಿಸಿದ್ದಾರೆ. ಇತ್ತೀಚೆಗೆ ಸಾರ್ವಜನಿಕವಾಗಿ ಓಡಾಟದಲ್ಲಿ ವಾಕಿಂಗ್‌ ಸ್ಟಿಕ್‌ ಬಳಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು