ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದೊಂದಿಗೆ ಚೀನಾ 'ಗಡಿ ಯುದ್ಧ'ದಲ್ಲಿ ತೊಡಗಿದೆ: ಸೆನೆಟರ್ ಕಾರ್ನಿನ್

Last Updated 17 ನವೆಂಬರ್ 2021, 4:44 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದೊಂದಿಗೆ ಚೀನಾ 'ಗಡಿ ಯುದ್ಧ'ದಲ್ಲಿ ತೊಡಗಿದ್ದು, ತನ್ನ ನೆರೆಯ ರಾಷ್ಟ್ರಗಳಿಗೆ ತೀವ್ರ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದ ಜಾನ್ ಕಾರ್ನಿನ್ ಹೇಳಿದ್ದಾರೆ.

ನವದೆಹಲಿ ಮತ್ತು ಆಗ್ನೇಯ ಏಷ್ಯಾಕ್ಕೆ ಭೇಟಿಯ ವರದಿಯನ್ನು ಅವರು ಅಮೆರಿಕ ಸೆನೆಟ್‌ಗೆ ಸಲ್ಲಿಸಿದ್ದು, ಈ ಪ್ರದೇಶದಲ್ಲಿನ ದೇಶಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿಸಿದ್ದಾರೆ.

ಭಾರತ ಕಾಕಸ್‌ನ ಸಹ-ಅಧ್ಯಕ್ಷರೂ ಆಗಿರುವ ಸೆನೆಟರ್ ಜಾನ್ ಕಾರ್ನಿನ್ ಮತ್ತು ಅವರ ಸಹೋದ್ಯೋಗಿಗಳನ್ನೊಳಗೊಂಡ ಕಾಂಗ್ರೆಸ್ ನಿಯೋಗವು ಇತ್ತೀಚೆಗೆ ಭಾರತ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಿಗೆ ಭೇಟಿ ನೀಡಿ ಹಿಂದಿರುಗಿದ್ದು, ಅಲ್ಲಿ ಚೀನಾ ಒಡ್ಡುತ್ತಿರುವ ಸವಾಲುಗಳ ನೇರ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

‘ಚೀನಾದ ಗಡಿಗಳಿಗೆ ಹತ್ತಿರವಿರುವ ದೇಶಗಳಿಗೆ ಅತ್ಯಂತ ಗಂಭೀರ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ’ ಎಂದು ಕಾರ್ನಿನ್ ಮಂಗಳವಾರ ಸೆನೆಟ್ ಸದಸ್ಯರಿಗೆ ತಿಳಿಸಿದ್ದಾರೆ.

‘ಕಳೆದ ವಾರ, ಆ ಪ್ರದೇಶದಲ್ಲಿನ ಬೆದರಿಕೆಗಳು ಮತ್ತು ಸವಾಲುಗಳ ಬಗ್ಗೆ ನೇರವಾಗಿ ತಿಳಿದುಕೊಳ್ಳಲು ಆಗ್ನೇಯ ಏಷ್ಯಾಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಿಯೋಗವನ್ನು ಮುನ್ನಡೆಸುವ ಅವಕಾಶ ನನಗೆ ಸಿಕ್ಕಿತ್ತು’ ಎಂದು ಅವರು ಹೇಳಿದ್ದಾರೆ.

‘ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ನೌಕಾಯಾನ ಸ್ವಾತಂತ್ರ್ಯಕ್ಕೆ ಚೀನಾ ಬೆದರಿಕೆ ಹಾಕುತ್ತಿದೆ ಮತ್ತು ಮುಸ್ಲಿಂ ಅಲ್ಪಸಂಖ್ಯಾತ ಉಯ್ಘರ್ ಸಮುದಾಯದಂತಹ ತನ್ನದೇ ದೇಶದ ಜನರ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆಯ ಅಪರಾಧವೆಸಗುತ್ತಿದೆ. ಭಾರತದೊಂದಿಗೆ ಗಡಿ ಯುದ್ಧದಲ್ಲಿ ತೊಡಗಿದೆ. ತೈವಾನ್ ಅನ್ನು ಆಕ್ರಮಿಸುವ ಬೆದರಿಕೆಯನ್ನು ಒಡ್ಡಿದೆ’ಎಂದು ಕಾರ್ನಿನ್ ಹೇಳಿದ್ದಾರೆ.

‘ಭಾರತಕ್ಕೆ ಭೇಟಿ ನೀಡಿದ್ದ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಯಾಬಿನೆಟ್ ಅಧಿಕಾರಿಗಳನ್ನು ಭೇಟಿ ಮಾಡಿ ಚೀನಾದಿಂದ ಎದುರಿಸುತ್ತಿರುವ ಬೆದರಿಕೆಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ’ ಎಂದು ಕಾರ್ನಿನ್ ಹೇಳಿದ್ದಾರೆ.

ಕಳೆದ ವರ್ಷ ಮೇ 5ರಂದು ಪ್ಯಾಂಗೊಂಗ್ ಸರೋವರದ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವಿನ ಗಡಿ ಬಿಕ್ಕಟ್ಟು ಭುಗಿಲೆದ್ದಿತ್ತು. ಎರಡೂ ಕಡೆಯಿಂದ ಸಾವಿರಾರು ಸೈನಿಕರು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಲಾಗಿತ್ತು.

ಬಳಿಕ,ಮಿಲಿಟರಿ ಮತ್ತು ರಾಜತಾಂತ್ರಿಕ ಸಭೆಗಳು ನಡೆದು ಉಭಯ ದೇಶಗಳು ಗಡಿಯಿಂದ ಸೇನೆ ಹಿಂತೆಗೆತಕ್ಕೆ ಒಪ್ಪಿಗೆ ಸೂಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT