ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ಕೋವಿಡ್‌ ಲಸಿಕೆ ತರಿಸಿ ಹಾಕಿಸಿಕೊಂಡ ಕಿಮ್‌ ಮತ್ತು ಕುಟುಂಬ?

Last Updated 1 ಡಿಸೆಂಬರ್ 2020, 8:15 IST
ಅಕ್ಷರ ಗಾತ್ರ

ಸೋಲ್‌: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್‌ ಉನ್ ಮತ್ತು ಅವರ ಕುಟುಂಬಕ್ಕೆ ಚೀನಾ ಪ್ರಾಯೋಗಿಕ ಕೋವಿಡ್‌ ಲಸಿಕೆ ನೀಡಿದೆ ಎಂದು ಜಪಾನಿನ ಎರಡು ಗುಪ್ತಚರ ಮೂಲಗಳ ಮಾಹಿತಿ ಉಲ್ಲೇಖಿಸಿ ಅಮೆರಿಕದ ವಿಶ್ಲೇಷಕರು ಮಂಗಳವಾರ ಹೇಳಿದ್ದಾರೆ.

ಕಿಮ್‌ ಕುಟುಂಬಸ್ಥರು ಮತ್ತು ಕೊರಿಯಾದ ಹಲವು ಹಿರಿಯ ಅಧಿಕಾರಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ವಾಷಿಂಗ್ಟನ್‌ನ 'ಸೆಂಟರ್ ಫಾರ್ ದಿ ನ್ಯಾಷನಲ್ ಇಂಟರೆಸ್ಟ್ ಥಿಂಕ್ ಟ್ಯಾಂಕ್‌'ನ ಉತ್ತರ ಕೊರಿಯಾದ ತಜ್ಞ ಹ್ಯಾರಿ ಕಾಜಿಯಾನಿಸ್ ಹೇಳಿದ್ದಾರೆ.

ಯಾವ ಕಂಪನಿ ತನ್ನ ಔಷಧಿಯನ್ನು ಕಿಮ್‌ ಕುಟುಂಬಕ್ಕೆ ಸರಬರಾಜು ಮಾಡಿದೆ ಮತ್ತು ಅದು ಸುರಕ್ಷಿತ ಎಂದು ಸಾಬೀತಾಗಿದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

'ಕಿಮ್ ಜಾಂಗ್‌ ಉನ್, ಕಿಮ್ ಕುಟುಂಬ ಮತ್ತು ಅಲ್ಲಿನ ಹಲವು ನಾಯಕರು, ಉನ್ನತ ಅಧಿಕಾರಿಗಳಿಗೆ ಕಳೆದ ಎರಡು ಮೂರು ವಾರಗಳಲ್ಲಿ ಕೋವಿಡ್‌ ಲಸಿಕೆ ಹಾಕಲಾಗಿದೆ, ಲಸಿಕೆ ಸರಬರಾಜು ಮಾಡಿದ ಚೀನಾ ಸರ್ಕಾರಕ್ಕೆ ಧನ್ಯವಾದಗಳು' ಎಂದು ಕಾಜಿಯಾನಿಸ್ '19ಫಾರ್ಟಿಫೈವ್‌' ಎಂಬ ವೆಬ್‌ಸೈಟ್‌ಗೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

'ಸಿನೋವಾಕ್ ಬಯೋಟೆಕ್ ಲಿಮಿಟೆಡ್', 'ಕ್ಯಾನ್ಸಿನೊ ಬಯೋ' ಮತ್ತು 'ಸಿನೊಫಾರ್ಮ್' ಸೇರಿದಂತೆ ಕನಿಷ್ಠ ಮೂರು ಚೀನೀ ಕಂಪನಿಗಳು ಕೋವಿಡ್‌ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಅಮೆರಿಕ ವೈದ್ಯಕೀಯ ವಿಜ್ಞಾನಿ ಪೀಟರ್ ಜೆ. ಹೊಟೆಜ್ ಅವರು ಹೇಳಿದ್ದಾರೆ.

ಆದರೆ, ಪ್ರಯೋಗಿಕ ಹಂತದಲ್ಲಿರುವ ಲಸಿಕೆಯನ್ನು ಕಿಮ್‌ ಪಡೆದಿರುವ ಸಾಧ್ಯತೆಗಳನ್ನು ಕೆಲ ಮಂದಿ ಅಲ್ಲಗೆಳೆದಿದ್ದಾರೆ.

'ಚೀನಾದ ಯಾವುದೇ ಲಸಿಕೆಯನ್ನು ಸದ್ಯ ಅನುಮೋದಿಸಿದ್ದರೂ, ಯಾವುದೇ ಔಷಧಿಯೂ ಈ ಹಂತದಲ್ಲಿ ಪರಿಪೂರ್ಣವಲ್ಲ. ಅಲ್ಲದೆ, ಪ್ರತ್ಯೇಕವಾಗಿರಲು ಸಾಕಷ್ಟು ಸೌಲಭ್ಯವಿರುವ ಕಿಮ್‌ ಜಾಂಗ್‌ ಉನ್‌ ಈ ಪ್ರಯೋಗಿಕ ಲಸಿಕೆಯನ್ನು ಪಡೆದಿರಲಾರರು,' ಎಂದು ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾಕ್ಕೆ 2012ರಲ್ಲಿ ಪಲಾಯನಗೊಂಡು ಬಂದ ಸಾಂಕ್ರಾಮಿಕ ರೋಗ ತಜ್ಞ ಚೋಯ್ ಜಂಗ್-ಹನ್ ಹೇಳಿದ್ದಾರೆ.

ಚೀನಾ ಸರಬರಾಜು ಮಾಡಿದ ಯೂರೋಪ್‌ ಮೂಲದ ಲಸಿಕೆಯನ್ನು ಮಾತ್ರ ಕಿಮ್‌ ಬಳಸುವ ಸಾಧ್ಯತೆಗಳಿವೆ ಎಂದು ಪರ್ತಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT