ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬಿಕ್ಕಟ್ಟು: ನೇಪಾಳಕ್ಕೆ ಚೀನಾ ತಂಡ

Last Updated 26 ಡಿಸೆಂಬರ್ 2020, 19:33 IST
ಅಕ್ಷರ ಗಾತ್ರ

ಕಠ್ಮಂಡು: ‘ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮನೆಮಾಡಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರವು ನಾಲ್ಕು ಸದಸ್ಯರ ತಂಡವೊಂದನ್ನು ಕಠ್ಮಂಡುಗೆ ಕಳುಹಿಸಲು ನಿರ್ಧರಿಸಿದೆ’ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

‘ಚೀನಾ ಕಮ್ಯುನಿಸ್ಟ್‌ ಪಕ್ಷದ (ಸಿಪಿಸಿ) ಅಂತರರಾಷ್ಟ್ರೀಯ ವಿಭಾಗದ ಉಪಾಧ್ಯಕ್ಷ ಗುವೊ ಯೆಜೊವೊ ನೇತೃತ್ವದ ತಂಡವು ಭಾನುವಾರ ಬೆಳಿಗ್ಗೆ ಕಠ್ಮಂಡು ತಲುಪಲಿದೆ. ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಲಿರುವ ತಂಡವು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಕ್ಷವು (ಎನ್‌ಸಿಪಿ) ಇಬ್ಭಾಗವಾಗದಂತೆ ತಡೆಯಲು ಪ್ರಯತ್ನಿಸಲಿದೆ. ಈ ವಿಷಯವನ್ನು ಎನ್‌ಸಿಪಿ ಮುಖಂಡರೇ ಖಾತರಿಪಡಿಸಿದ್ದಾರೆ’ ಎಂದು ಕಠ್ಮಂಡು ಪೋಸ್ಟ್‌ ದಿನಪತ್ರಿಕೆ ವರದಿ ಮಾಡಿದೆ.

‘ಗುವೊ ನೇತೃತ್ವದ ತಂಡವು ಕಠ್ಮಂಡುಗೆ ಭೇಟಿ ನೀಡುತ್ತಿರುವ ವಿಷಯವನ್ನು ನಮ್ಮ ಗಮನಕ್ಕೆ ತರಲಾಗಿದೆ’ ಎಂದು ಎನ್‌ಸಿಪಿಯ ಪುಷ್ಪ ಕಮಲ್‌ ದಹಾಲ್‌ (ಪ್ರಚಂಡ) ಬಣದ ನಾಯಕ ಹಾಗೂ ವಿದೇಶಾಂಗ ವ್ಯವಹಾರಗಳ ಇಲಾಖೆಯ ಉಪಾಧ್ಯಕ್ಷ ವಿಷ್ಣು ರಿಜಾಲ್‌ ತಿಳಿಸಿದ್ದಾರೆ.

ಈ ಸಂಬಂಧ ನೇಪಾಳದಲ್ಲಿರುವ ಚೀನಾದ ದೂತವಾಸ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹಾಗೂ ಹಾಗೂ ಪ್ರಚಂಡ ಅವರ ನಡುವೆ ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಒಲಿ ಅವರು ಹೋದ ಭಾನುವಾರ ಸಂಸತ್‌ ವಿಸರ್ಜಿಸುವಂತಹ ಅಚ್ಚರಿಯ ತೀರ್ಮಾನ ಕೈಗೊಂಡಿದ್ದರು. ಅವರ ನಡೆಯನ್ನು ಅನೇಕರು ಟೀಕಿಸಿದ್ದರು. ಈ ಸಂಬಂಧ ಲಿಖಿತ ವಿವರಣೆ ನೀಡುವಂತೆ ನೇಪಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ಷೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT