ಶನಿವಾರ, ಜುಲೈ 24, 2021
25 °C
ಚೀನಾ ಬೆಲ್ಟ್‌ ಆ್ಯಂಡ್‌ ರೋಡ್‌ ಯೋಜನೆಗೆ ಜಿ7 ರಾಷ್ಟ್ರಗಳ ಪ್ರತಿತಂತ್ರ

ಬಡ ರಾಷ್ಟ್ರಗಳಲ್ಲಿ ‘ಬಿ3ಡಬ್ಲ್ಯು’ ಯೋಜನೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಾರ್ಬಿಸ್‌ ಬೇ (ಯುಕೆ): ಚೀನಾದ ಬೆಲ್ಟ್‌ ಆ್ಯಂಡ್‌ ರೋಡ್‌ ಯೋಜನೆಗೆ ಪ್ರತಿಯಾಗಿ, ಪಾರದರ್ಶಕ ಸಹಭಾಗಿತ್ವದಲ್ಲಿ ಬಡ ರಾಷ್ಟ್ರಗಳಲ್ಲಿ ಮೂಲಸೌಲಭ್ಯಗಳನ್ನು ನಿರ್ಮಿಸುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಳ್ಳಲು ಜಿ7 ರಾಷ್ಟ್ರಗಳು ನಿರ್ಧರಿಸಿವೆ.

ಮಧ್ಯಮ ಮತ್ತು ಕಡಿಮೆ ಆದಾಯದ ರಾಷ್ಟ್ರಗಳಲ್ಲಿ ಮೂಲಸೌಲಭ್ಯದ ಭಾರಿ ಕೊರತೆಯನ್ನು ನಿವಾರಿಸಲು ಮತ್ತು ಚೀನಾದ ಸ್ಪರ್ಧೆಯನ್ನು ಎದುರಿಸುವ ಪರಿಣಾಮಕಾರಿ ಕಾರ್ಯತಂತ್ರದ ರೂಪದಲ್ಲಿ ಅಮೆರಿಕ ಪ್ರೇರಿತ ‘ಬಿಲ್ಡ್‌ ಬ್ಯಾಕ್‌ ಬೆಟರ್‌ ವರ್ಲ್ಡ್‌’ (ಬಿ3ಡಬ್ಲ್ಯು) ಯೋಜನೆ ರೂಪಿಸಲಾಗಿತ್ತು. ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಮತ್ತು ಇತರ ಮುಖಂಡರ ಭೇಟಿಯ ನಂತರ ಈ ಯೋಜನೆಗೆ ಅಂಗೀಕಾರ ನೀಡಲಾಗಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಲಕ್ಷ ಕೋಟಿ ಡಾಲರ್‌ ವೆಚ್ಚದ ಬೆಲ್ಟ್‌ ಆ್ಯಂಡ್‌ ರೋಡ್‌ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶದಿಂದ ಚೀನಾ, ಅಪಾರವಾದ ಸಾಲದಲ್ಲಿ ಮುಳುಗಿರುವ ಸಣ್ಣ ರಾಷ್ಟ್ರಗಳನ್ನು  ಶೋಷಿಸುತ್ತಿದೆ ಎಂದು ಜಿ7 ಶೃಂಗ ಸಭೆಯಲ್ಲಿ ಜಾಗತಿಕ ನಾಯಕರು ಟೀಕಿಸಿದ್ದಾರೆ.

‘ಜಿ7 ರಾಷ್ಟ್ರಗಳು ಕೈಗೆತ್ತಿಕೊಳ್ಳಲು ನಿರ್ಧರಿಸಿರುವ ಬಿ3ಡಬ್ಲ್ಯು ಯೋಜನೆಯು ಜಾಗತಿಕ ಸ್ವರೂಪದ್ದಾಗಿರುತ್ತದೆ. ಈ ಯೋಜನೆಯ ಮೂಲಕ ಬಡ ರಾಷ್ಟ್ರಗಳಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಸಾವಿರಾರು ಕೋಟಿ ಡಾಲರ್‌ ಹೂಡಿಕೆ ಮಾಡಲಾಗುವುದು’ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಲಸಿಕೆ ಅಭಿವೃದ್ಧಿ ಕೇಂದ್ರ ಸ್ಥಾಪನೆ: ಮಾನವರಿಗೆ ಪ್ರಾಣಿಗಳಿಂದ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರಾಣಿ ಲಸಿಕೆ ಅಭಿವೃದ್ಧಿ ಕೇಂದ್ರವನ್ನು ಬ್ರಿಟನ್ ಸ್ಥಾಪಿಸಲಿದೆ. ಜಿ–7 ವಿಶ್ವ ನಾಯಕರ ಜಾಗತಿಕ ಆರೋಗ್ಯ ಘೋಷಣೆಯ ಭಾಗವಾಗಿ ಈ ನಿರ್ಧಾರ ಹೊರಬೀಳಲಿದೆ.

ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ದೇಶಗಳು ಮೊದಲ 100 ದಿನಗಳ ಅವಧಿಯಲ್ಲಿ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ವಿನ್ಯಾಸಗೊಳಿಸಲಾದ ಕ್ರಮಗಳಿಗೆ ಬದ್ಧವಾಗಿರಬೇಕು ಎಂಬ ವಿಷಯವನ್ನು ‘ಕಾರ್ಬಿಸ್ ಬೇ ಘೋಷಣೆ’ ಒಳಗೊಂಡಿದೆ.

‘ಕಳೆದ 18 ತಿಂಗಳುಗಳಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ಮುಂದಿನ ಬಾರಿ ನಾವು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದರು.

ಬೈಡನ್ ಏಕಾಂಗಿ ಸುದ್ದಿಗೋಷ್ಠಿ

ಜೂನ್ 16ರಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಸಭೆ ನಡೆಯಲಿದ್ದು, ಭೇಟಿಯ ಬಳಿಕ ಬೈಡನ್ ಅವರು ಒಬ್ಬರೇ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಭಯ ನಾಯಕರ ನಡುವಿನ ಸಭೆಯು ಸರಳ ಮತ್ತು ನೇರವಾಗಿರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ‘ಸಭೆಯ ವಿಷಯಗಳನ್ನು ಮಾಧ್ಯಮಗಳೊಂದಿಗೆ ಸ್ಪಷ್ಟವಾಗಿ ಸಂವಹನ ಮಾಡಲು ಏಕವ್ಯಕ್ತಿ ಪತ್ರಿಕಾಗೋಷ್ಠಿಯು ಸೂಕ್ತವಾದ ಸ್ವರೂಪವಾಗಿದೆ’ ಎಂದಿದ್ದಾರೆ.

ಬೈಡನ್ ಅವರು ತಮ್ಮನ್ನು ಹಂತಕ ಎಂದು ಕರೆದಿರುವ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪುಟಿನ್‌ಗೆ ಪ್ರಶ್ನೆ ಕೇಳಲಾಗಿತ್ತು. ಇಂತಹ ಹತ್ತಾರು ಆರೋಪಗಳು ಬಂದಿವೆ ಎಂದು ಪುಟಿನ್ ಉತ್ತರಿಸಿದ್ದರು. ಈ ಬಳಿಕ ಉಭಯ ನಾಯಕರ ನಡುವೆ ವೈಮಸ್ಸು ಇದೆ ಎಂದು ಹೇಳಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು