ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ ಗುರಿಯಾಗಿಸಿ 11 ಖಂಡಾಂತರ ಕ್ಷಿಪಣಿ ಉಡಾಯಿಸಿದ ಚೀನಾ

ದ್ವೀಪದ ಸುತ್ತಲೂ ಸೇನಾ ತಾಲೀಮು, ಯುದ್ಧ ವಿಮಾನ, ಸಮರನೌಕೆ ನಿಯೋಜನೆ
Last Updated 4 ಆಗಸ್ಟ್ 2022, 16:27 IST
ಅಕ್ಷರ ಗಾತ್ರ

ಪಿಂಗ್‌ಟ್ಯಾನ್‌, ಚೀನಾ: ಅಮೆರಿಕದ ಸಂಸತ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ನೀಡಿದ ಭೇಟಿಯಿಂದ ವ್ಯಗ್ರಗೊಂಡು ಪ್ರತೀಕಾರಕ್ಕಿಳಿದಿರುವ ಚೀನಾ ಗುರುವಾರ ತೈವಾನ್‌ ದ್ವೀಪ ಗುರಿಯಾಗಿಸಿ ಸರಣಿ ಕ್ಷಿಪಣಿಗಳನ್ನು ಉಡಾಯಿಸಿದೆ.

‘ಪ್ರಚೋದನೆ ನೀಡುವ ದೇಶ ಅಮೆರಿಕ ತಕ್ಕಬೆಲೆ ತೆರಲಿದೆ’ ಎಂದು ಎಚ್ಚರಿಸಿದ್ದ ಚೀನಾ, ಗುರುವಾರದಿಂದ ತೈವಾನ್‌ ಸುತ್ತಲೂ ಸೇನಾ ತಾಲೀಮು ಮತ್ತು ಕ್ಷಿಪಣಿ ಪ್ರಯೋಗ ನಡೆಸುವುದಾಗಿ ಘೋಷಿಸಿತ್ತು. ತೈವಾನ್‌ ಮತ್ತು ಅದರ ನೆರವಿಗೆ ಬರುವ ಮಿತ್ರ ದೇಶವನ್ನು ನೇರ ಗುರಿಯಾಗಿಸಿಡಾಂಗ್‌ ಫೆಂಗ್‌ ದರ್ಜೆಯ 11 ಖಂಡಾಂತರ ಕ್ಷಿಪಣಿಗಳನ್ನು ಸ್ಥಳೀಯ ಕಾಲಮಾನ ಮಧ್ಯಾಹ್ನ 1.56ರಿಂದ ಸಂಜೆ 4ರ ನಡುವೆ ಪ್ರಯೋಗಿಸಿದೆ.

ತೈವಾನ್‌ ಭೂ ಪ್ರದೇಶಕ್ಕೆ ಅತೀ ಸನಿಹದಲ್ಲಿ ಜಪಾನ್‌ ಸಮುದ್ರದ ವಿಶೇಷ ಆರ್ಥಿಕ ವಲಯದ ಮೇಲೆ ಈ ಕ್ಷಿಪಣಿಗಳು ಬಿದ್ದಿವೆ. ನೀರಿನೊಳಗಿನಿಂದಲೂ 500 ಕಿ.ಮೀ ದೂರದ ಗುರಿ ಭೇದಿಸುವ ಈ ಕ್ಷಿಪಣಿಗಳು ತೈವಾನ್‌ನ ಈಶಾನ್ಯ ಮತ್ತು ನೈಋತ್ಯ ದಿಕ್ಕನ್ನೂ ತಲುಪಿವೆ ಎಂದು ಚೀನಾ ಸೇನೆ ಹೇಳಿದೆ.

‘ಕ್ಷಿಪಣಿಗಳ ನಿಖರತೆ ಮತ್ತು ಸಾಮರ್ಥ್ಯ ಪರೀಕ್ಷಿಸುವುದು ಮತ್ತು ಶತ್ರು ಪ್ರವೇಶ ತಡೆಯುವುದು ಅಥವಾ ಆ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಗುರಿ ಈ ಪ್ರಯೋಗದ ಉದ್ದೇಶವಾಗಿತ್ತು. ನಿರೀಕ್ಷಿತ ಫಲಿತಾಂಶ ಸಿಕ್ಕಿದೆ’ ಎಂದು ಚೀನಾ ಹೇಳಿದೆ.

ಯುದ್ಧ ವಿಮಾನಗಳು, ಸಮರ ನೌಕೆಗಳನ್ನು ನಿಯೋಜಿಸುವ ಮೂಲಕ ತೈವಾನ್‌ ಸುತ್ತಲೂ ದಿಗ್ಬಂಧನ ವಿಧಿಸುವಂತೆ ಅತಿ ದೊಡ್ಡ ಸೇನಾ ತಾಲೀಮನ್ನೂ ಚೀನಾ ನಡೆಸುತ್ತಿದೆ.

ತೈವಾನ್‌ ಖಂಡನೆ: ‘ಚೀನಾ ಸರಣಿಯಾಗಿ 11 ಕ್ಷಿಪಣಿಗಳನ್ನು ಉಡಾಯಿಸಿದೆ. ಇದು ಪ್ರಾದೇಶಿಕ ಶಾಂತಿ– ಸ್ಥಿರತೆಗೆ ಧಕ್ಕೆ ತರಲಿದೆ. ಇದು ಖಂಡನೀಯ’ ಎಂದು ತೈವಾನ್‌ ಪ್ರತಿಕ್ರಿಯಿಸಿದೆ.

ಚೀನಾ ಯುದ್ಧ ವಿಮಾನಗಳು ಹಾರಾಟ ಆರಂಭಿಸುವುದಕ್ಕೂ ಮುನ್ನ ಗುರುವಾರ ನಸುಕಿನಲ್ಲಿ ತೈವಾನ್‌ನ ವಾಯುಪಡೆ ಮಿರಾಜ್ 2000 ಮತ್ತು ಎಫ್ -5 ಫೈಟರ್ ಜೆಟ್‌ಗಳ ಹಾರಾಟ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದವು ಎಂದು ತೈವಾನ್ ಮಾಧ್ಯಮಗಳು ವರದಿ ಮಾಡಿವೆ.

ತೈವಾನ್‌– ಚೀನಾ ಸಂಘರ್ಷದಲ್ಲಿನ ಪ್ರಮುಖಾಂಶಗಳು

* ಚೀನಾ ಸರಣಿ ಕ್ಷಿಪಣಿ ಉಡಾಯಿಸಿ ಉತ್ತರ ಕೊರಿಯಾವನ್ನು ಅನುಕರಿಸುತ್ತಿದೆ– ತೈವಾನ್‌ ಕಿಡಿ

* ಜಪಾನ್‌ ತಲುಪಿರುವ ನ್ಯಾನ್ಸಿ ಪೆಲೋಸಿ ಅವರು ತೈವಾನ್‌– ಬೀಜಿಂಗ್‌ ನಡುವಿನ ಉದ್ವಿಗ್ನತೆ ಬಗ್ಗೆ ದಕ್ಷಿಣ ಕೊರಿಯಾ ಭೇಟಿ ವೇಳೆ ಯಾವುದೇ ಬಹಿರಂಗ ಹೇಳಿಕೆ ನೀಡಲಿಲ್ಲ

* ಚೀನಾಕ್ಕೆ ತೆರಳಬೇಕಿದ್ದ 40 ವಿಮಾನಗಳ ಸಂಚಾರವನ್ನುತೈವಾನ್‌ ರದ್ದುಗೊಳಿಸಿತು

* ಚೀನಾ ಸೇನೆಯು ತೈವಾನ್‌ ಬಳಿ ಅಣ್ವಸ್ತ್ರಸಜ್ಜಿತ ಜಲಾಂತರ್ಗಾಮಿ ನೌಕೆಯಿಂದಲೂ ತಾಲೀಮು ನಡೆಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT