ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ರಕ್ಷಣಾ ಇಲಾಖೆ ರಹಸ್ಯ ದಾಖಲೆ ಕಸದ ರಾಶಿಯಲ್ಲಿ ಪತ್ತೆ: ಅದರಲ್ಲೇನಿತ್ತು?

Last Updated 27 ಜೂನ್ 2021, 15:17 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟಿಷ್ ಯುದ್ಧನೌಕೆಯೊಂದರ ಕುರಿತ ವಿವರ ಮತ್ತು ಅದು ಕಪ್ಪು ಸಮುದ್ರದ ಮಾರ್ಗದಲ್ಲಿ ಹಾದು ಹೋಗಿದ್ದರ ಕುರಿತ ರಷ್ಯಾದ ಸಂಭಾವ್ಯ ಪ್ರತಿಕ್ರಿಯೆಯನ್ನು ಒಳಗೊಂಡ ಬ್ರಿಟನ್‌ ರಕ್ಷಣಾ ಇಲಾಖೆಯ ಅತ್ಯಂತ ಗೌಪ್ಯ ದಾಖಲೆಯು ದಕ್ಷಿಣ ಇಂಗ್ಲೆಂಡ್‌ನ ಬಸ್ ನಿಲ್ದಾಣದ ಕಸದ ರಾಶಿಯಲ್ಲಿ ಪತ್ತೆಯಾಗಿದೆ ಎಂದು ಬಿಬಿಸಿ ಭಾನುವಾರ ವರದಿ ಮಾಡಿದೆ.

‘ಬಸ್‌ನಿಲ್ದಾಣದ ಹಿಂದಿನ ಕಸದ ರಾಶಿಯಲ್ಲಿ 50 ಪುಟಗಳ ದಾಖಲೆಯು ವ್ಯಕ್ತಿಯೊಬ್ಬರಿಗೆ ಸಿಕ್ಕಿದೆ,‘ ಎಂದು ಬಿಬಿಸಿ ತನ್ನ ವರದಿಯಲ್ಲಿ ಹೇಳಿದೆ. ಘಟನೆ ಬಗ್ಗೆ ಮಾಹಿತಿ ಸಿಕ್ಕಿರುವುದಾಗಿ ಬ್ರಿಟನ್‌ನ ರಕ್ಷಣಾ ಸಚಿವಾಲಯ ಒಪ್ಪಿಕೊಂಡಿದೆ.

‘ ಮಾಹಿತಿ ಸುರಕ್ಷತೆ ವಿಷಯವನ್ನು ರಕ್ಷಣಾ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಈಗಿನ ಘಟನೆ ಸಂಬಂಧ ತನಿಖೆ ಆರಂಭಿಸಲಾಗಿದೆ. ದಾಖಲೆಗಳು ಕಣ್ಮರೆಯಾಗಿದ್ದ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿ ಮಾಹಿತಿ ನೀಡಿದ್ದರು. ಇನ್ನು ಹೆಚ್ಚಿನದ್ದನ್ನು ಹೇಳುವುದು ಸೂಕ್ತವಲ್ಲ,’ ಎಂದು ಇಲಾಖೆ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಪ್ರಮುಖ ದಾಖಲೆಗಳು ಬೀದಿಯಲ್ಲಿ ಸಾರ್ವಜನಿಕರಿಗೆ ಸಿಕ್ಕಿರುವುದು ಮಂತ್ರಿಗಳನ್ನು ಚಿಂತೆಗೆ ದೂಡುವಷ್ಟು ಮುಜುಗರ ಉಂಟು ಮಾಡಿದೆ,‘ ಎಂದು ಬ್ರಿಟನ್‌ನ ಪ್ರಮುಖ ವಿರೋಧ ಪಕ್ಷ ‘ಲೇಬರ್‌ ಪಾರ್ಟಿ‘ ಸರ್ಕಾರವನ್ನು ಅಣಕಿಸಿದೆ.

‘ದೇಶದ ಭದ್ರತೆ ದುರ್ಬಲವಾಗಿಲ್ಲ ಅಥವಾ ಭದ್ರತಾ ಕಾರ್ಯಾಚರಣೆಗೆ ಅಡ್ಡಿಯಾಗಿಲ್ಲ ಎಂಬುದನ್ನು ಸಂಬಂಧಪಟ್ಟ ಸಚಿವರು ಖಚಿತಪಡಿಸಬೇಕು,‘ ಎಂದು ಲೇಬರ್‌ ಪಕ್ಷದ ರಕ್ಷಣಾ ನೀತಿ ಮುಖ್ಯಸ್ಥ ಜಾನ್‌ ಹೀಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ದಾಖಲೆಯಲ್ಲಿದ್ದ ಮಾಹಿತಿಯೇ ದೊಡ್ಡ ಕತೆ!

ಬ್ರಿಟನ್‌ ನೌಕಾ ಪಡೆ ‘ರಾಯಲ್‌ ನೇವಿ’ಯ ಡೆಸ್ಟ್ರಾಯರ್‌ ಯುದ್ಧನೌಕೆ ‘ಎಚ್‌ಎಂಎಸ್ ಡಿಫೆಂಡರ್‌‘ಗೆ ಸಂಬಂಧಿಸಿದ ಇಮೇಲ್‌ಗಳು ಮತ್ತು ಪವರ್‌ಪಾಯಿಂಟ್ ಪ್ರೆಸೆಂಟೇಷನ್‌ಗಳು ಸದ್ಯ ಕಸದ ರಾಶಿಯಲ್ಲಿ ಸಿಕ್ಕಿರುವ ದಾಖಲೆಗಳಲ್ಲಿ ಇತ್ತು ಎನ್ನಲಾಗಿದೆ. ಡೆಸ್ಟ್ರಾಯರ್‌ ಯುದ್ಧನೌಕೆ ‘ಡಿಫೆಂಡರ್‌’ ಇದೇ ತಿಂಗಳು ಕ್ರಿಮಿಯನ್ ಪರ್ಯಾಯ ದ್ವೀಪದ ಮೂಲಕ ಹಾದು ಹೋಗಿತ್ತು. ‘ಡಿಫೆಂಡರ್‌’ ಹಾದು ಹೋಗಿರುವ ಈ ಜಲಪ್ರದೇಶವನ್ನು ರಷ್ಯಾ 2014ರಲ್ಲಿ ಉಕ್ರೇನ್‌ನಿಂದ ಸ್ವಾಧೀನಪಡಿಸಿಕೊಂಡಿದೆ. ಅದರ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುತ್ತಿದೆ. ತನ್ನ ನಿಯಂತ್ರಣದ ಪ್ರದೇಶದಲ್ಲಿ ಯುದ್ಧನೌಕೆಯೊಂದು ಹಾದು ಹೋಗಿರುವುದಕ್ಕೆ ಸಂಬಂಧಿಸಿದಂತೆ ರಷ್ಯಾ ಅತ್ಯಂತ ಆಕ್ರಣಕಾರಿಯಾಗಿ ಪ್ರತಿಕ್ರಿಯಸಬಹುದು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿತ್ತು.

ಬ್ರಿಟನ್‌ನ ಯುದ್ಧನೌಕೆ ತನ್ನ ಹಿಡಿತದ ಜಲಪ್ರದೇಶದಲ್ಲಿ ಸಾಗಿ ಹೋಗಿರುವುದಕ್ಕೆ ಸಂಬಂಧಿಸಿದಂತೆ ಬುಧವಾರ ಪ್ರತಿಕ್ರಿಯಿಸಿದ್ದ ರಷ್ಯಾ, ‘ಡೆಸ್ಟ್ರಾಯರ್‌ ನೌಕೆಗೆ ನಾವು ಎಚ್ಚರಿಕೆ ನೀಡಿದೆವು. ಅದರ ದಾರಿಯಲ್ಲಿ ಬಾಂಬುಗಳನ್ನು ಎಸೆಯಲಾಯಿತು. ಈ ಮೂಲಕ ನಮ್ಮ ಜಲಪ್ರದೇಶದಿಂದ ಹೊರಗಟ್ಟಲಾಯಿತು,’ ಎಂದು ಹೇಳಿತ್ತು. ಆದರೆ, ರಷ್ಯಾ ತನ್ನದು ಎಂದು ಹೇಳಿಕೊಳ್ಳುವ ಜಲಪ್ರದೇಶವನ್ನು ಬ್ರಿಟನ್‌ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಉಕ್ರೇನ್‌ನದ್ದು ಎಂದು ನಂಬಿವೆ.

ಈ ಘಟನೆಯನ್ನು ಬ್ರಿಟನ್‌ನ ಪ್ರಚೋದನೆ ಎಂದು ಕರೆದಿರುವ ರಷ್ಯಾ, ಮಾಸ್ಕೋದಲ್ಲಿನ ಬ್ರಿಟನ್‌ ರಾಯಭಾರಿಯನ್ನು ಕರೆದು ತರಾಟೆಗೆ ತೆಗೆದುಕೊಂಡಿದೆ.

ಆದರೆ, ನೌಕೆಗೆ ಎಚ್ಚರಿಕೆ ನೀಡಲಾಯಿತು ಎಂಬ ರಷ್ಯಾ ಹೇಳಿಕೆಯನ್ನು ಬ್ರಿಟನ್‌ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT