ಮಂಗಳವಾರ, ಜೂನ್ 28, 2022
26 °C

ಆಸ್ಟ್ರಾಜೆನಿಕಾ, ನೋವಾವ್ಯಾಕ್ಸ್‌, ಸನೋಫಿ ಲಸಿಕೆ ಮೇಲೆ ಹೇರಲಾಗಿದ್ದ ಡಿಪಿಎ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಅಮೆರಿಕದಲ್ಲಿ ಕೋವಿಡ್‌ ಲಸಿಕೆಯು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಜೋ ಬೈಡನ್‌ ಅವರು, ಆಸ್ಟ್ರಾಜೆನಿಕಾ, ನೋವಾವ್ಯಾಕ್ಸ್‌ ಮತ್ತು ಸನೋಫಿ ಲಸಿಕೆ ಮೇಲೆ ಹೇರಿದ್ದ ಡಿಫೆನ್ಸ್‌ ಪ್ರೊಡಕ್ಷನ್‌ ಆ್ಯಕ್ಟ್‌( ಡಿಪಿಎ) ಆದ್ಯತಾ ರೇಟಿಂಗ್‌ ಅನ್ನು ತೆಗೆದು ಹಾಕಿದ್ದಾರೆ’ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

‘ಡಿಪಿಎ ಮತ್ತು ಇತರೆ ಕಠಿಣ ಕ್ರಮಗಳಿಂದಾಗಿ ಈಗ ಅಮೆರಿಕನ್ನರಿಗೆ ಸಾಕಷ್ಟು ‍ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಲಭ್ಯವಿದೆ. ಈ ದೃಷ್ಟಿಯಿಂದ ಆಸ್ಟ್ರಾಜೆನಿಕಾ, ನೋವಾವ್ಯಾಕ್ಸ್‌ ಮತ್ತು ಸನೋಫಿ ಕಂಪನಿಗಳ ಮೇಲೆ ಹೇರಲಾಗಿದ್ದ ಡಿ‍ಪಿಎಯನ್ನು ತೆಗೆದು ಹಾಕಲಾಗಿದೆ. ಇದು ಕಂಪನಿಗಳಿಗೆ ಲಸಿಕೆ ಸಂಬಂಧಿಸದಂತೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಿದೆ’ ಎಂದು ಶ್ವೇತಭವನದ ಕೋವಿಡ್‌ ನಿರ್ವಹಣಾ ತಂಡದ ಸಂಯೋಜಕ ಜೆಫ್‌ ಜಿಂಟ್ಸ್‌ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಮೆರಿಕವು ಮೂರು ಕಾರ್ಯ ವಿಧಾನಗಳ ಮೂಲಕ ಲಸಿಕೆಯನ್ನು ಪೂರೈಕೆ ಮಾಡಲಿದೆ.

‘ಮೊದಲನೆಯದಾಗಿ ತನ್ನ ನಾಗರಿಕರಿಗೆ ಸಾಕಷ್ಟು ‍ಪ್ರಮಾಣದಲ್ಲಿ ಲಸಿಕೆ ‍ಪೂರೈಕೆ ಮಾಡಿದ ಬೆನ್ನಲ್ಲೇ ಇತರೆ ರಾಷ್ಟ್ರಗಳಿಗೆ ಲಸಿಕೆಗಳನ್ನು ವಿತರಣೆ ಮಾಡುವುದು. ಎರಡನೆಯದಾಗಿ, ವಿಶ್ವದ ಇತರ ಭಾಗಗಳಿಗೆ ಲಸಿಕೆ ಪೂರೈಕೆಯನ್ನು ಅಪಾರವಾಗಿ ಹೆಚ್ಚಿಸಲು ಲಸಿಕೆ ಉತ್ಪಾದನಾ ಕಂಪನಿಗಳನ್ನು ಉತ್ತೇಜಿಸುವುದು. ಮೂರನೆಯದಾಗಿ, ಪಾಲುದಾರ ರಾಷ್ಟ್ರ ಮತ್ತು ಔಷಧ ಕಂಪನಿಗಳೊಂದಿಗೆ ಸೇರಿ ಲಸಿಕೆ ಉತ್ಪಾದನೆ ಮಾಡುವುದು’ ಎಂದು ಅವರು ಮಾಹಿತಿ ನೀಡಿದರು.

‘ಅಮೆರಿಕವು ಈಗಾಗಲೇ 40 ಲಕ್ಷ ಆಸ್ಟ್ರಾಜೆನಿಕಾ ಲಸಿಕೆಯ ಡೋಸ್‌ಗಳನ್ನು ಕೆನಡಾ ಮತ್ತು ಮೆಕ್ಸಿಕೋಗೆ ನೀಡಿದೆ. ಜೂನ್‌ ಅಂತ್ಯದವರೆಗೆ 8 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ’ ಎಂದು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು