ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಬಂತೇ?: ಬೈಡೆನ್ ಮರುತನಿಖೆಗೆ ಚೀನಾ ಕಿಡಿಕಿಡಿ

Last Updated 28 ಮೇ 2021, 15:40 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಚೀನಾದ ಪ್ರಯೋಗಾಲಯದಿಂದ ಬಂದಿದೆ ಎಂಬುದರ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುವ ಅಮೆರಿಕದ ಪ್ರಯತ್ನಗಳನ್ನು ಚೀನಾ ಖಂಡಿಸಿದೆ.

ವೈರಾಣುವಿನ ಮೂಲಕ್ಕೆ ಸಂಬಂಧಿಸಿದ ಗುಪ್ತಚರ ವರದಿಗಳನ್ನು ಬಹಿರಂಗಪಡಿಸಲು ತಾವು ಇಚ್ಛಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುರುವಾರ ಹೇಳಿದ್ದರು.

ಅಮೆರಿಕದ ಅಧ್ಯಕ್ಷರ ಈ ನಡೆಗೆ ಆಕ್ರೋಶಗೊಂಡಿರುವ ಚೀನಾ, ಅಮೆರಿಕದ ವಿರುದ್ಧ ಕಿಡಿಕಿಡಿಯಾಗಿದೆ. ಅಮೆರಿಕವು 'ರಾಜಕೀಯ ಮಾಡುತ್ತಿದೆ ಮತ್ತು ಆಪಾದನೆ ಹೊರಿಸುತ್ತಿದೆ,' ಎಂದು ಚೀನಾ ವಿದೇಶಾಂಗ ಇಲಾಖೆಯು ಟೀಕಿಸಿದೆ. ಅಲ್ಲದೆ, ಕೊರೊನಾ ವೈರಸ್‌ನ ಮೂಲ ವುಹಾನ್‌ ನಗರದ ವೈರಾಣು ಲ್ಯಾಬ್‌ ಎಂಬ ವಾದಗಳನ್ನು ಚೀನಾ ನಿರಾಕರಿಸಿದೆ.

'ಚೀನಾದ ಪ್ರಯೋಗಾಲಯದಿಂದ ವೈರಸ್ ಹೊರಹೊಮ್ಮಿರಬಹುದು ಎಂಬುದಕ್ಕೆ ಪುರಾವೆಗಳು ಹೆಚ್ಚಾಗುತ್ತಿವೆ. ಬಹುಶಃ ಅದು ಆಕಸ್ಮಿಕವೂ ಇರಬಹುದು,' ಎಂದು ಅಮೆರಿಕದ ಮಾಧ್ಯಮಗಳು ಇತ್ತೀಚೆಗೆ ವರದಿ ಮಾಡಿವೆ.

ವುಹಾನ್‌ನ ಮಾಂಸದ ಮಾರುಕಟ್ಟೆಯಿಂದ ವೈರಾಣು ಜನರಿಗೆ ಪ್ರಸರಣಗೊಂಡಿರಬಹುದು ಎಂದು ಚೀನಾ ಈ ವರೆಗೆ ಹೇಳಿಕೊಂಡು ಬಂದಿದೆ. ಇದೇ ವಾದವನ್ನೇ ಜಗತ್ತಿನ ಬಹುತೇಕರು ಈ ವರೆಗೆ ನಂಬಿದ್ದಾರೆ. ಆದರೆ, ಅಮೆರಿಕ ಮಾಧ್ಯಮಗಳ ವರದಿಗಳು, ವೈರಸ್‌ನ ಮೂಲದ ಬಗೆಗಿನ ಪ್ರಶ್ನೆಗಳಿಗೆ ಹೊಸ ಆಯಾಮ ನೀಡಿವೆ.

ಉಗಮದ ವಿವಾದ ಈಗ ಏಕೆ?

'ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್‌ ಅವರು ಅಧಿಕಾರ ವಹಿಸಿಕೊಂಡಾಗ, ಕೊರೊನಾ ವೈರಸ್‌ ಮೂಲದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. 'ಸೋಂಕುಗೊಂಡ ಪ್ರಾಣಿಯಿಂದ ಮಾನವನಿಗೆ ವೈರಸ್‌ ಬಂದಿತೇ ಅಥವಾ ಲ್ಯಾಬ್‌ನಿಂದ ಹೊರ ಬಂದಿದ್ದೇ ಎಂಬುದರ ಕುರಿತು ವಿವರಣೆ ನೀಡುವಂತೆ ಅವರು ತಿಳಿಸಿದ್ದರು. ಇದರ ವರದಿಯನ್ನು ಇತ್ತೀಚೆಗೆ ಬೈಡನ್‌ ಅವರಿಗೆ ನೀಡಲಾಗಿದೆ. ಆದರೆ, ಬೈಡನ್‌ ಅವರು ಮತ್ತಷ್ಟು ಮಾಹಿತಿ ಕೇಳಿದ್ದಾರೆ,' ಎಂದು ಅಮೆರಿಕ ಬುಧವಾರ ಹೇಳಿಕೆ ಬಿಡುಗಡೆ ಮಾಡಿತ್ತು.

ವೈರಸ್‌ ಮೂಲದ ಬಗ್ಗೆ ಈಗ ಅಮೆರಿಕದ ಗುಪ್ತಚರ ಏಜೆನ್ಸಿಗಳಲ್ಲಿ ಎರಡು ವಾದಗಳಿವೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಗುರುವಾರ ಹೇಳಿದೆ. ಪ್ರಾಣಿಯಿಂದ ಮನುಷ್ಯರಿಗೆ ಪ್ರಸರಣೆಗೊಂಡಿದ್ದು ಒಂದು ವಾದವಾದರೆ, ವುಹಾನ್‌ ಲ್ಯಾಬ್‌ನಿಂದ ಕೊರೊನಾ ಹೊರ ಬಂದಿದೆ ಎಂಬುದು ಒಂದು ವಾದವಾಗಿದೆ. ಆದರೆ, ಒಂದಕ್ಕಿಂತಲೂ ಇನ್ನೊಂದು ಹೆಚ್ಚು ಸೂಕ್ತ ಎಂದು ನಿರ್ಣಯಿಸಲು ಸಾಕಷ್ಟು ಮಾಹಿತಿ ಇಲ್ಲ ಎಂದು ಗುಪ್ತಚರ ಇಲಾಖೆ ಹೇಳಿದೆ.

ಈ ಎರಡೂ ವಾದಗಳಲ್ಲಿ ಯಾವುದಾದರೂ ಒಂದು ವಾದದ ಪರವಾಗಿ ನಿರ್ಣಾಯ ತಗೆದುಕೊಳ್ಳಲು ಅನುಕೂಲವಾಗುವಂಥ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಪ್ರಯತ್ನ ಮಾಡಿ ಎಂದು ಬೈಡನ್‌ ಏಜೆನ್ಸಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ವರದಿಗಳನ್ನು ಬಿಡುಗಡೆ ಮಾಡಲು ತಾವು ಇಚ್ಛಿಸಿರುವುದಾಗಿಯೂ ಅವರು ಹೇಳಿಕೆ ನೀಡಿದ್ದಾರೆ.

ವೈರಸ್ ಮೂಲವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅಮೆರಿಕ ಮತ್ತು ಇತರ ದೇಶಗಳು ಕೈಗೊಳ್ಳುವ ಪ್ರಯತ್ನಗಳಿಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಗುರುವಾರ ಬೆಂಬಲ ವ್ಯಕ್ತಪಡಿಸಿದರು.

ಪ್ರಯೋಗಾಲಯದ ವಾದ

ಕೋವಿಡ್‌–19 ಸಾಂಕ್ರಾಮಿಕದ ಕುರಿತು ಚೀನಾ ಅಧಿಕೃತವಾಗಿ ಬಹಿರಂಗಪಡಿಸುವ ಕೆಲ ತಿಂಗಳ ಮೊದಲೇ ಚೀನಾದ ವುಹಾನ್‌ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಭಾನುವಾರ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ಅಮೆರಿಕದ ಗುಪ್ತಚರ ವರದಿಯನ್ನು ಆಧರಿಸಿ ಅದು ವರದಿ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಪ್ರಯೋಗಾಲಯದ ವಾದ ಮುನ್ನೆಲೆಗೆ ಬಂದಿದೆ.

ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಬಂದಿದೆ ಎಂದು ನಂಬಿರುವುದಾಗಿ ಅಧ್ಯಕ್ಷ ಬಿಡೆನ್ ಅವರ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ಅವರು ಈ ಹಿಂದೆ ಹೇಳಿದ್ದರು. ಆದರೆ, ಈಗ ಕೋವಿಡ್ -19 ಸ್ವಾಭಾವಿಕ ಎಂದು ತಾವು ನಂಬಿಲ್ಲ ಎಂದು ಹೇಳಿದ್ದಾರೆ.

ಹೀಗಿರುವಾಗಲೇ, ವೈರಾಣುವಿನ ಮೂಲದ ಬಗ್ಗೆ ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಕ್ಸೇವಿಯರ್ ಬೆಕೆರಾ ಅವರು ಒತ್ತಾಯಿಸಿದರು. ಅದರ ಮರುದಿನವೇ ಬೈಡನ್‌ ಅವರ ಎರಡನೇ ಹಂತದ ತನಿಖೆಯ ಆದೇಶವೂ ಹೊರಬಿದ್ದಿದೆ.

ಕೊರೊನಾ ಮಾನವ ಸೃಷ್ಟಿ ಎಂಬ ಪೋಸ್ಟ್‌ಗಳನ್ನು ಇನ್ನು ಡಿಲೀಟ್‌ ಮಾಡಲ್ಲ: ಫೇಸ್‌ಬುಕ್‌

ಏಕಾಏಕಿ ಮುನ್ನೆಲೆಗೆ ಬಂದಿರುವ ಪ್ರಯೋಗಾಲಯದ ವಾದ ಮತ್ತು ಅದರ ಮೇಲಿನ ಎರಡನೇ ಅಧ್ಯಯನಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಗುರುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಕೊರೊನಾ ವೈರಸ್‌ ಮಾನವನ ಸೃಷ್ಟಿ ಎಂದು ಹೇಳುವ ಪೋಸ್ಟ್‌ಗಳನ್ನು ಇನ್ನು ಮುಂದೆ ಡಿಲಿಟ್‌ ಮಾಡದೇ ಇರಲು ಫೇಸ್‌ಬುಕ್‌ ನಿರ್ಧರಿಸಿದೆ. ವೈರಾಣುವಿನ ಮೂಲದ ಬಗೆಗಿನ ಚರ್ಚೆಗಳಿಗೆ ಈಗಷ್ಟೇ ಹೊಸ ಆಯಾಮ ಸಿಕ್ಕಿರುವ ಹಿನ್ನೆಲೆಯಲ್ಲಿ ಫೇಸ್‌ಬಕ್‌ ಈ ನಿರ್ಧಾರ ಕೈಗೊಂಡಿದೆ.

'ವೈರಾಣುವಿನ ಮೂಲದ ಬಗ್ಗೆ ನಡೆಯುತ್ತಿರುವ ತನಿಖೆಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ' ಎಂದು ಇಮೇಲ್ ಹೇಳಿಕೆಯಲ್ಲಿ ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT