ಶುಕ್ರವಾರ, ಆಗಸ್ಟ್ 12, 2022
28 °C

PV Web Exclusive | ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ ಪರವೇ ಮೋದಿ?

ಹಮೀದ್‌ ಕೆ. Updated:

ಅಕ್ಷರ ಗಾತ್ರ : | |

Prajavani

ಬೇರೆ ದೇಶಗಳ ಆಂತರಿಕ ವಿಚಾರಗಳಲ್ಲಿ, ಚುನಾವಣೆಗಳಲ್ಲಿ ಅಮೆರಿಕ ಹಿಂದಿನಿಂದಲೂ ಹಸ್ತಕ್ಷೇಪ ನಡೆಸುವುದನ್ನು ರೂಢಿ ಮಾಡಿಕೊಂಡಿದೆ. 1947ರಲ್ಲಿ ಸ್ಥಾಪನೆಗೊಂಡ ಸಿಐಎ (ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ– ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ) ಅದರ ಮರುವರ್ಷವೇ ಇಟಲಿಯ ಚುನಾವಣೆಯಲ್ಲಿ ಕೈಯಾಡಿಸಿತ್ತು. ಅಮೆರಿಕ–ರಷ್ಯಾ ಶೀತಲ ಸಮರ ಕಾಲದಲ್ಲಿ, ವಿವಿಧ ದೇಶಗಳಲ್ಲಿ ತನ್ನ ಪರವಾಗಿರುವ ವ್ಯಕ್ತಿ ಅಥವಾ ಪಕ್ಷವನ್ನು ಅಧಿಕಾರಕ್ಕೆ ತರುವುದು ಅಮೆರಿಕದ ಈ ಹಸ್ತಕ್ಷೇಪದ ಉದ್ದೇಶ. ಅದಲ್ಲದೇ ಇದ್ದರೂ ಇತರರ ವ್ಯವಹಾರಗಳಲ್ಲಿ ತೂರಿಸುವುದಕ್ಕೆ ಅಮೆರಿಕದ ಮೂಗು ಯಾವಾಗಲೂ ಉದ್ದವೇ.

ಕಾಶ್ಮೀರ ವಿಚಾರ ದ್ವಿಪಕ್ಷೀಯವಾದುದು, ಅದರಲ್ಲಿ ಮೂರನೆಯವರ ಮಧ್ಯಸ್ಥಿಕೆ ಬೇಕಾಗಿಲ್ಲ ಎಂದು ಭಾರತವು ಸಾರಿ ಸಾರಿ ಹೇಳಿದ್ದರೂ, ಮಧ್ಯಸ್ಥಿಕೆ ವಹಿಸಿಬಿಡುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು ಹಲವು ಬಾರಿ. ಈಗ, ಭಾರತ–ಚೀನಾ ಗಡಿ ಬಿಕ್ಕಟ್ಟನ್ನು ಸಡಿಪಡಿಸುವುದಾಗಿಯೂ ಅವರು ಹೇಳುತ್ತಿದ್ದಾರೆ. 

ಮುಖ್ಯ ವಿಷಯ ಅದಲ್ಲ. ಬೇರೆ ದೇಶಗಳ ಚುನಾವಣೆಯಲ್ಲಿ ಮೂಗು ತೂರಿಸುವಿಕೆಯ ಚಟ ಅಮೆರಿಕಕ್ಕೆ ತಿರುಗುಬಾಣ ಆಯಿತೇ ಎಂಬುದು. 2016ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎಂಬುದು ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಯಿತು. ಈ ಬಗ್ಗೆ ಸುದೀರ್ಘವಾದ ವಿಚಾರಣೆಯೂ ನಡೆಯಿತು. ಡೊನಾಲ್ಡ್‌ ಟ್ರಂಪ್ ಮಗ ಜೂನಿಯರ್‌ ಟ್ರಂಪ್‌ ತನಿಖಾ ಸಮಿತಿಯ ಮುಂದೆ ಹೇಳಿಕೆಯನ್ನೂ ನೀಡಿದ್ದರು. ಕೊನೆಗೆ, ಹಸ್ತಕ್ಷೇಪ ನಡೆದಿಲ್ಲ ಎಂಬ ವರದಿಯನ್ನು ತನಿಖಾ ಸಮಿತಿಯು ನೀಡಿತು. ಸಮಿತಿಯ ಮುಂದೆ ಜೂನಿಯರ್‌ ಟ್ರಂಪ್‌ ಹೇಳಿದ್ದು ಸುಳ್ಳು ಎಂಬ ಆರೋಪವೂ ಈಗ ಕೇಳಿಬರುತ್ತಿದೆ. 

ಟ್ರಂಪ್‌ ವಿರುದ್ಧ ದೋಷಾರೋಪ ನಡೆಸಲಾಗಿತ್ತು. ಅಮೆರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸುವಂತೆ ಉಕ್ರೇನ್‌ ಮೇಲೆ ಟ್ರಂಪ್‌ ಒತ್ತಡ ಹೇರಿದ್ದರು ಎಂಬುದು ಮುಖ್ಯ ಆರೋಪ. ಬೈಡನ್‌ ಅಮೆರಿಕದ ಉಪಾಧ್ಯಕ್ಷರಾಗಿದ್ದಾಗ ಅವರ ಮಗ ಹಂಟರ್‌ ಅವರು ಉಕ್ರೇನ್‌ನ ಕಂಪನಿಯೊಂದಕ್ಕೆ ಕೆಲಸ ಮಾಡಿದ್ದರು. ಹಾಗಾಗಿ, ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಆಗಬಹುದಾದ ಜೋ ಬೈಡನ್‌ ವಿರುದ್ಧ ಗಂಭೀರ ಆರೋಪವೊಂದನ್ನು ಹೊರಿಸಿ, ಈ ಬಗ್ಗೆ ತನಿಖೆ ನಡೆಸುವುದಾಗಿ ಉಕ್ರೇನ್‌ ಸರ್ಕಾರ ಬಹಿರಂಗವಾಗಿ ಹೇಳಿಕೆ ನೀಡಬೇಕು ಎಂಬುದು ಟ್ರಂಪ್‌ ಬೇಡಿಕೆಯಾಗಿತ್ತು. 

ಆರೋಪಗಳೆಲ್ಲವೂ ಸತ್ಯವಲ್ಲ ಮತ್ತು ಎಲ್ಲವೂ ಸುಳ್ಳು ಅಲ್ಲ

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ಮೆರವಣಿಯೇ ಇದೆ ಎಂಬುದು ಈಗಾಗಲೇ ಕೇಳಿ ಬರುತ್ತಿರುವ ಮಾತು. ‘ಟ್ರಂಪ್‌ ಅವರನ್ನು ರಷ್ಯಾ ಬೆಂಬಲಿಸುತ್ತಿದೆ, ಬೈಡನ್‌ಗೆ ಚೀನಾ ಬೆಂಬಲವಿದೆ ಮತ್ತು ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಗೊಂದಲದ ಗೂಡಾಗಿಸುವುದು ಇರಾನ್‌ನ ಗುರಿ’ ಎಂದು ಶುಕ್ರವಾರ ಹೇಳಿಕೆ ಕೊಟ್ಟವರು ಅಮೆರಿಕದ ನ್ಯಾಷನಲ್‌ ಕೌಂಟರ್‌ ಇಂಟೆಲಿಜೆನ್ಸ್‌ ಎಂಡ್‌ ಸೆಕ್ಯುರಿಟಿ ಸೆಂಟರ್‌ನ ನಿರ್ದೇಶಕ ವಿಲಿಯಂ ಇವಾನಿಯಾ. 2016ರ ಚುನಾವಣೆಯಲ್ಲಿ ಕೂಡ ಟ್ರಂಪ್‌ ಪರವಾಗಿ ರಷ್ಯಾ ಕೆಲಸ ಮಾಡಿತ್ತು; ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ಗೆ ಭಾರಿ ಹಾನಿ ಆಗುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಕೆಲಸ ಮಾಡಿತ್ತು ಎಂಬ ಆಪಾದನೆ ಇತ್ತು. ಅಧಿಕಾರಕ್ಕೆ ಬಂದ ಬಳಿಕ ಟ್ರಂಪ್‌ ಅವರ ಕೆಲವು ನೇಮಕಗಳು ಇದಕ್ಕೆ ಪುಷ್ಟಿ ನೀಡುವಂತೆ ಇದ್ದವು ಎಂಬ ಹಲವು ವಿಶ್ಲೇಷಣೆಗಳು ಬಂದಿವೆ. 

‘ಟ್ರಂಪ್‌ ಅಂಥವರನ್ನು ಅಧ್ಯಕ್ಷರನ್ನಾಗಿಸಲು ನೆರವಾಗುವ ಮೂಲಕ ಅಮೆರಿಕದ ವ್ಯವಸ್ಥೆಯೇ ಕುಸಿದುಬೀಳುವಂತೆ ಮಾಡುವುದು ರಷ್ಯಾದ ಉದ್ದೇಶ. ಇದು ಶೀತಲ ಸಮರ ಭಾಗ 2.0’ ಎಂಬ ವಿಶ್ಲೇಷಣೆಯೂ ರಷ್ಯಾ ಹಸ್ತಕ್ಷೇಪದ ಬಗ್ಗೆ ಕೇಳಿ ಬಂದಿದೆ. 

ಕಳೆದ ವರ್ಷ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಹ್ಯೂಸ್ಟನ್‌ನಲ್ಲಿ ‘ಹೌಡಿ ಮೋದಿ’ ಎಂಬ ಭಾರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೋದಿ–ಟ್ರಂಪ್‌ ಕೈ ಕೈ ಹಿಡಿದು ಈ ಕಾರ್ಯಕ್ರಮದಲ್ಲಿ ಮಾತನಾಡಿ ಸಂಭ್ರಮಿಸಿದ್ದರು. 50 ಸಾವಿರಕ್ಕೂ ಹೆಚ್ಚು ಭಾರತ ಮೂಲದ ಅಮೆರಿಕನ್ನರು ‘ಹೌಡಿ ಮೋದಿ’ ಸಮಾರಂಭಕ್ಕೆ ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ. ಮೋದಿ ಅವರ ತವರು ರಾಜ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಫೆಬ್ರುವರಿಯಲ್ಲಿ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮ ನಡೆದಿತ್ತು. ಇಲ್ಲಿ ಲಕ್ಷಕ್ಕೂ ಹೆಚ್ಚು ಭಾರತೀಯರು ಮೋದಿ–ಟ್ರಂಪ್‌ ಭಾಷಣ ಕೇಳಿದ್ದರು ಎನ್ನಲಾಗಿದೆ. ‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್‌’ಗಳೆರಡೂ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ನೆರವಾಗುವುದಕ್ಕಾಗಿಯೇ ನಡೆಸಿದ ಪ್ರಚಾರ ಕಾರ್ಯಕ್ರಮ ಎಂದು ವಿಮರ್ಶಿಸಲಾಗಿದೆ. ತೀರಾ ಇತ್ತೀಚೆಗೆ, ಟ್ರಂಪ್‌ ಅವರು ಅಮೆರಿಕದ ಚುನಾವಣಾ ಕದನ ಕಣಕ್ಕೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಎಳೆದೊಯ್ದಿದ್ದಾರೆ. ಭಾರತೀಯರು ಮತ್ತು ಪ್ರಧಾನಿ ಮೋದಿ ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. 

ಈ ಬಗ್ಗೆ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ

ದೇಶವೊಂದರ ಚುನಾವಣಾ ಪ್ರಕ್ರಿಯೆಯಲ್ಲಿ ಬೇರೊಂದು ದೇಶವು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ನಡೆಸುವುದನ್ನು ಪ್ರಜಾಸತ್ತಾತ್ಮಕವಾಗಿ ಯೋಚಿಸುವ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾಯಕರು ಪರಸ್ಪರ ಒ‍ಪ‍್ಪಿಕೊಂಡು ಅಥವಾ ಪ್ರತ್ಯುಪಕಾರದ ಭರವಸೆಯ ಮೇಲೆ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದಾದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹ ಅಲ್ಲವೇ? ಪ್ರಜಾಪ್ರಭುತ್ವ ಎಂದರೆ ಪ್ರಜೆಗಳು ಆರಿಸುವವರಿಗೆ ಆಳ್ವಿಕೆ ನಡೆಸುವ ಅವಕಾಶ ಮತ್ತು ಅದು ಅಷ್ಟಕ್ಕೆ ಸೀಮಿತ. ‍ಪ್ರಜಾಪ‍್ರಭುತ್ವ ದೇಶಗಳ ನಾಯಕರಿಗೆ ಇಷ್ಟಾದರೂ ಅರಿವಿರಬೇಕು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು