ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮೆನ್‌ನಲ್ಲಿ ಹೆಚ್ಚುತ್ತಿರುವ ದಂಗೆ: ಭಾರತ ಕಳವಳ

Last Updated 17 ಮಾರ್ಚ್ 2021, 5:47 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಯೆಮೆನ್‌ನ ಅನೇಕ ಭಾಗಗಳಲ್ಲಿ ದಂಗೆಗಳು ಹೆಚ್ಚುತ್ತಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

‘ಈ ಪರಿಸ್ಥಿತಿಯು ಅಲ್‌ಕೈದಾ ಮತ್ತು ಇಸ್ಲಾಮಿಕ್ ಸ್ಟೇಟ್‌ನಂತಹ ಉಗ್ರ ಸಂಘಟನೆಗಳಿಗೆ ತಮ್ಮ ಚಟುವಟಿಕೆಗಳನ್ನು ಹರಡಲು ಅವಕಾಶ ನೀಡುತ್ತದೆ ಎಂಬುದು ಆತಂಕಕಾರಿ ವಿಷಯಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮಾಸಿಕ ಸಭೆಯು ಈಚೆಗೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ (ಉಪ) ಕೆ.ನಾಗರಾಜ ನಾಯ್ಡು ಅವರು,‘ತೈಜ್, ಅಲ್ ಜಾವ್ಫ್ ಮತ್ತು ಸನಾದಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷಗಳು ಆತಂಕವನ್ನುಂಟು ಮಾಡಿದೆ. ಈ ಸಂಘರ್ಷದಿಂದಾಗಿ ಸಾವು–ನೋವು ಉಂಟಾಗಿದೆ. ಆಸ್ತಿಗಳಿಗೆ ಹಾನಿಯಾಗಿದೆ. ಅಲ್ಲದೆ ಹಲವಾರು ನಾಗರಿಕರನ್ನು ಸ್ಥಳಾಂತರಿಸುವ ಪರಿಸ್ಥಿತಿ ಎದುರಾಗಿದೆ’ ಎಂದರು.

‘ಪ್ರಸ್ತುತ ‍ಪರಿಸ್ಥಿತಿಯು ಅಲ್‌ಕೈದಾ, ಇಸ್ಲಾಮಿಕ್‌ ಸ್ಟೇಟ್‌ನಂತಹ ಉಗ್ರ ಸಂಘಟನೆಗೆ ಯೆಮೆನ್‌ನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಅವಕಾಶ ಮಾಡಿಕೊಟ್ಟಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯ’ ಎಂದು ಅವರು ತಿಳಿಸಿದರು.

ಈ ವೇಳೆ ನಾಯ್ಡು ಅವರು, ಸೌದಿ ಅರೇಬಿಯಾದ ಮೇಲೆ ಅನ್ಸರಲ್ಲಾ ಬೆಂಬಲಿಗರು ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್‌ ದಾಳಿಯನ್ನು ಖಂಡಿಸಿದರು. ‌

‘ನಾಗರಿಕ ಮತ್ತು ಇಂಧನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈ ವಿಷಯದ ಕುರಿತಂತೆ ರಾಜಕೀಯ ಇತ್ಯರ್ಥಕ್ಕಾಗಿ ಎಲ್ಲಾ ಪಕ್ಷಗಳು ಮಾತುಕತೆ ನಡೆಸಿ, ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಅವರು ಹೇಳಿದರು.

‘ಸೌದಿ ಅರೇಬಿಯಾದ ನಾಗರಿಕರು ಮತ್ತು ವಾಣಿಜ್ಯ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. 10 ಲಕ್ಷಕ್ಕೂ ಹೆಚ್ಚು ಜನರನ್ನು ಆಂತರಿಕವಾಗಿ ಸ್ಥಳಾಂತರಿಸಲಾಗಿದೆ’ ಎಂದು ಯೆಮೆನ್‌ನ ವಿಶೇಷ ರಾಯಭಾರಿ ಮಾರ್ಟಿನ್‌ ಗ್ರಿಫಿತ್ಸ್ ಅವರು ಮಾಹಿತಿ ನೀಡಿದರು.

‘ರಾಜಕೀಯ ಪ್ರಕ್ರಿಯೆಯನ್ನು ಪುನರಾರಂಭಿಸಲು ಯಾವುದೇ ಪೂರ್ವಭಾವಿ ಷರತ್ತುಗಳು ಇರಬಾರದು. ಈ ಪರಿಸ್ಥಿತಿಯನ್ನು ಎದುರಿಸಲು ವಿಶ್ವಸಂಸ್ಥೆಯೊಂದಿಗೆ ಎಲ್ಲಾ ಹಂತಗಳಲ್ಲಿ ನಿರಂತರವಾಗಿ ಮತ್ತು ಗಂಭೀರವಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT