ಶುಕ್ರವಾರ, ಫೆಬ್ರವರಿ 26, 2021
32 °C

ಹಿನ್ನೋಟ-2020: ಜಾಗತಿಕ ವಿದ್ಯಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಡನ್ ಆಯ್ಕೆ
ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾದರು. ಇವರು 2021ರ ಜನವರಿ 20ರಂದು ಶ್ವೇತಭವನ ಪ್ರವೇಶಿಸಲಿದ್ದಾರೆ.

ಅಮೆರಿಕದ ಚುನಾವಣಾ ಸಂದರ್ಭದಲ್ಲಿ ಕೆಲವು ಗೊಂದಲಗಳೂ ಸೃಷ್ಟಿಯಾಗಿದ್ದವು. ‘ನಾನು ಗೆದ್ದಿದ್ದೇನೆ’ ಎಂದು ಟ್ರಂಪ್, ಫಲಿತಾಂಶಕ್ಕೂ ಮುನ್ನ ಘೋಷಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಟ್ರಂಪ್ ಬೆಂಬಲಿಗರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿದ್ಯಮಾನವೂ ನಡೆಯಿತು.

ಜನಾಂಗೀಯ ಹಿಂಸಾಚಾರ
2019ರ ಜೂನ್‌ನಲ್ಲಿ ಅಮೆರಿಕ ಮತ್ತೊಮ್ಮೆ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ, ಜಾರ್ಜ್ ಫ್ಲಾಯ್ಡ್ ಎಂಬುವರನ್ನು ಪೊಲೀಸರು ನಡೆಸಿಕೊಂಡ ರೀತಿ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ರಸ್ತೆಯಲ್ಲಿ ಫ್ಲಾಯ್ಡ್ ಕುತ್ತಿಗೆಯನ್ನು ಬೂಟುಗಾಲಿನಿಂದ ಒತ್ತಿಹಿಡಿದ ಶ್ವೇತವರ್ಣೀಯ ಪೊಲೀಸರು ಜನಾಕ್ರೋಶಕ್ಕೆ ತುತ್ತಾದರು.

ಮಿನ್ನೆಪೊಲೀಸ್‌ನಲ್ಲಿ ನಡೆದ ಈ ಘಟನೆ ಕಾಳ್ಗಿಚ್ಚಿನಂತೆ ಅಮೆರಿಕದಾದ್ಯಂತ ಹಬ್ಬಿತು. ಕಪ್ಪುವರ್ಣೀಯರು ಹಿಂಸಾಚಾರಕ್ಕೆ ಇಳಿದರು. ಅಂಗಡಿ, ಮಾಲ್‌ಗಳನ್ನು ಧ್ವಂಸ ಮಾಡಿದರು. ಪ್ರತಿಮೆಗಳು ನೆಲಕ್ಕುರುಳಿದವು. ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಗುಂಡಿಗೆ ಪ್ರತಿಭಟನಕಾರರು ಬಲಿಯಾದರು. ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಿದರೂ ಜನರ ಸಿಟ್ಟು ತಣಿಯಲಿಲ್ಲ. ವಾಷಿಂಗ್ಟನ್‌ವರೆಗೂ ಪ್ರತಿಭಟನೆ ಹಬ್ಬಿದ್ದರಿಂದ ಅಧ್ಯಕ್ಷ ಟ್ರಂಪ್ ಅವರು ಕೆಲಕಾಲ ಶ್ವೇತಭವನದ ನೆಲಮಾಳಿಗೆಯಲ್ಲಿ ಆಶ್ರಯ
ಪಡೆಯಬೇಕಾಯಿತು.

ಸುಲೇಮಾನಿ ಹತ್ಯೆ


ಸುಲೇಮಾನಿ

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಕುದ್ಸ್‌ ಪಡೆಯ ಮುಖ್ಯಸ್ಥರಾಗಿದ್ದ ಜನರಲ್‌ ಸುಲೇಮಾನಿ ಅವರನ್ನು ಅಮೆರಿಕ ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿತು. ಈ ಘಟನೆ ಅಮೆರಿಕ ಮತ್ತು ಇರಾನ್ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಯಿತು. ಇರಾನ್‌ನ ಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ ಅವರು ‘ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಶಪಥ ಮಾಡಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆಗಾಗಿ ಇರಾನ್‌ ₹ 575 ಕೋಟಿ ಬಹುಮಾನ ಘೋಷಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದವು. ‘ಮಧ್ಯಪ್ರಾಚ್ಯದಲ್ಲಿ ಕಳೆದ 20 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಸುಲೇಮಾನಿ ತೊಡಗಿಸಿಕೊಂಡಿದ್ದ. ಇತ್ತೀಚೆಗೆ ಒಂದು ಸಾವಿರಕ್ಕೂ ಹೆಚ್ಚು ನಾಗರಿಕರು ಸರ್ಕಾರದ ಕಿರುಕುಳದಿಂದ ಮೃತಪಟ್ಟಿದ್ದಾರೆ’ ಎಂದು ಸುಲೇಮಾನಿ ಹತ್ಯೆಯನ್ನು ಟ್ರಂಪ್ ಸಮರ್ಥಿಸಿಕೊಂಡರು.

ಒಕ್ಕೂಟದಿಂದ ಹೊರಬಂದ ಬ್ರಿಟನ್
ಐರೋಪ್ಯ ಒಕ್ಕೂಟಕ್ಕೆ ಬ್ರಿಟನ್ 2020ರ ಜನವರಿ 31ರಂದು ವಿದಾಯ ಹೇಳಿತು. ಯುರೋಪ್ ಖಂಡದ ನೆರೆಹೊರೆಯ ದೇಶಗಳೊಂದಿಗೆ ಬ್ರಿಟನ್ 4 ದಶಕಗಳಿಂದ ಬೆಳೆಸಿಕೊಂಡಿದ್ದ ಆಪ್ತ ಆರ್ಥಿಕ, ರಾಜಕೀಯ ಮತ್ತು ಕಾನೂನಾತ್ಮಕ ಒಪ್ಪಂದಗಳ ನಂಟನ್ನು ಕಡಿದುಕೊಂಡಿದೆ. 2020ರ ಡಿ. 31ರಂದು ಒಪ್ಪಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ.

‘2021 ಜನವರಿ 1ರಿಂದ ಬ್ರಿಟನ್‌ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರಲಿದೆ’ ಎಂದು ಪ್ರಧಾನಿ ಕಚೇರಿಯು ಘೋಷಿಸಿದೆ.

ರಾಜಮನೆತನ ತೊರೆದ ಮೇಘನ್– ಹ್ಯಾರಿ
ಬ್ರಿಟನ್‌ನ ಯುವರಾಜ ಹ್ಯಾರಿ ಮತ್ತು ಅವರ ಪತ್ನಿ ಮೇಘನ್‌ ಮರ್ಕೆಲ್‌ ಅವರು ರಾಜಮನೆತನದ ಹೊಣೆಗಾರಿಕೆಗಳಿಂದ ಹೊರಬಂದಿದ್ದಾರೆ. ಅವರಿಗೆ ರಾಜಮನೆತನದ ಸೌಲಭ್ಯ, ಗೌರವಗಳು ಇನ್ನುಮುಂದೆ ಸಿಗುವುದಿಲ್ಲ ಎಂದು ಬಂಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ. ಅರಮನೆಯ ಐಷಾರಾಮಿ ಜೀವನ ತೊರೆದು, ಗೌರವಪೂರ್ವಕ ರಾಜ, ರಾಣಿ ಪದವಿ ತ್ಯಜಿಸುವುದಾಗಿ ದಂಪತಿ ಪ್ರಕಟಿಸಿದ್ದರು. ದಂಪತಿ ಕೆನಡಾದಲ್ಲಿ ಮುಂದಿನ ಜೀವನ ಸಾಗಿಸಲಿದ್ದು, ಆಗಾಗ್ಗೆ ಬ್ರಿಟನ್‌ಗೂ ಭೇಟಿ ನೀಡಲಿದ್ದಾರೆ.

ಇರಾನ್ ಪರಮಾಣು ವಿಜ್ಞಾನಿ ಹತ್ಯೆ
ಇರಾನ್‌ನ ಉನ್ನತ ಮಟ್ಟದ ಪರಮಾಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆ ಅವರನ್ನು ಹತ್ಯೆ ಮಾಡಲಾಯಿತು. ಈ ಹತ್ಯೆ ವ್ಯವಸ್ಥಿತ ಹಾಗೂ ತಂತ್ರಜ್ಞಾನಾಧಾರಿತ ದಾಳಿ ಎನ್ನಲಾಗಿದೆ. ಉಪಗ್ರಹ ನಿಯಂತ್ರಿತ ಸ್ಮಾರ್ಟ್ ವ್ಯವಸ್ಥೆ ಇರುವ ಮೆಷಿನ್ ಗನ್ ಬಳಸಿ ಕೊಲ್ಲಲಾಯಿತು. ಮೆಷಿನ್ ಗನ್ ಅನ್ನು ಟ್ರಕ್‌ನಲ್ಲಿ ಇರಿಸಿ, ಅದನ್ನು ಉಪಗ್ರಹದಿಂದ ನಿಯಂತ್ರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದರು.

ಮೊಹ್ಸೆನ್ ಫಖ್ರಿಜಾದೆ ಅವರು ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯ ಅಭಿವೃದ್ಧಿಪಡಿಸುವ ಇರಾನಿನ ರಹಸ್ಯ ಕಾರ್ಯಕ್ರಮದ ಮಾಸ್ಟರ್ ಮೈಂಡ್ ಆಗಿದ್ದರು. ಹತ್ಯೆಗೆ ಇಸ್ರೇಲ್ ಕಾರಣ ಎಂದು ಇರಾನ್ ನೇರ ಆರೋಪ ಮಾಡಿದೆ. ಹತ್ಯೆಯಲ್ಲಿ ತನ್ನ ಕೈವಾಡವನ್ನು ಇಸ್ರೇಲ್ ಒಪ್ಪಿಯೂ ಇಲ್ಲ, ನಿರಾಕರಿಸಿಯೂ ಇಲ್ಲ.


ಕಿಮ್ ಜಾಂಗ್ ಉನ್

ಕಿಮ್ ಜಾಂಗ್ ಉನ್ ಸಾವಿನ ವದಂತಿ
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಸಾವಿನ ವದಂತಿಯು 2020ರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕಿಮ್‌ಗೆ ಕೋವಿಡ್ ತಗುಲಿದೆ, ಚೀನಾದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂಬಿತ್ಯಾದಿ ವದಂತಿಗಳು ಸಹ ಹರಡಿದ್ದವು. ಮೇ ಮೊದಲ ವಾರದಲ್ಲಿ ಕಿಮ್ ಅವರು ಕಾರ್ಖಾನೆಯೊಂದನ್ನು ಉದ್ಘಾಟಿಸುತ್ತಿರುವ ಚಿತ್ರವನ್ನು ಸರ್ಕಾರ ಬಿಡುಗಡೆ ಮಾಡಿದ ಬಳಿಕ ವದಂತಿಗೆ ತೆರೆಬಿದ್ದಿತು.

ಭಾರತಕ್ಕೆ ತಾತ್ಕಾಲಿಕ ಸದಸ್ಯತ್ವ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಎರಡು ವರ್ಷಗಳ ಅವಧಿಯ ತಾತ್ಕಾಲಿಕ ಸದಸ್ಯತ್ವಕ್ಕೆ (ನಾನ್ ಪರ್ಮನೆಂಟ್) ಭಾರತ ಆಯ್ಕೆಯಾಗಿದೆ. ಭಾರತದ ಆಯ್ಕೆಗೆ ಚೀನಾ, ಪಾಕಿಸ್ತಾನ ಸೇರಿದಂತೆ 55 ರಾಷ್ಟ್ರಗಳ ಏಷ್ಯಾ–ಪೆಸಿಫಿಕ್ ಒಕ್ಕೂಟ ಅನುಮೋದನೆ ನೀಡಿದೆ. ಭದ್ರತಾ ಮಂಡಳಿಯ ಶಾಶ್ವತ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಹಾಗೂ ಅಮೆರಿಕ ಇವೆ.

193 ಸದಸ್ಯರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ 5 ತಾತ್ಕಾಲಿಕ ಸದಸ್ಯ ರಾಷ್ಟ್ರಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತದೆ. ಸದಸ್ಯತ್ವದ ಅವಧಿ 2 ವರ್ಷ ಮಾತ್ರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು