ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಹುಲ್ ಚೋಕ್ಸಿ ಅಪಹರಣದ ಆರೋಪ ನಿರಾಕರಿಸಿದ ಗುರ್ಜಿತ್ ಭಂಡಾಲ್

Last Updated 10 ಜೂನ್ 2021, 4:27 IST
ಅಕ್ಷರ ಗಾತ್ರ

ನವದೆಹಲಿ: ಆಂಟಿಗುವಾ, ಬಾರ್ಬುಡಾದಿಂದ ಮೆಹುಲ್ ಚೋಕ್ಸಿ ಅವರನ್ನು ಅಪಹರಿಸಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಗುರ್ಜಿತ್ ಭಂಡಾಲ್, ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಸ್ಪಷ್ಟನೆ ನೀಡಿರುವ ಭಂಡಾಲ್, ಕೆರೆಬಿಯನ್ ದ್ವೀಪದಿಂದ ಮೇ 23ರಂದು ಬೆಳಗ್ಗೆ ವಿಹಾರ ನೌಕೆಯ ಮೂಲಕ ಹೊರಟಿದ್ದೆ ಎಂದು ಹೇಳಿದ್ದಾರೆ. ಇದನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಂಟಿಗುವಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಚೋಕ್ಸಿ, ಮೇ 23ರಂದು ಪ್ರೇಯಸಿ ಹಾಗೂ ಪ್ರಕರಣದ ಮತ್ತೊರ್ವ ಆರೋಪಿ ಬಾರ್ಬರಾ ಜರಾಬಿಕಾ ಅವರು ತಂಗಿದ್ದ ಸ್ಥಳಕ್ಕೆ ತೆರಳಿದ್ದಾಗ ಅಪಹರಣಕ್ಕೊಳಗಾಗಿದ್ದೇನೆ ಎಂದು ಆರೋಪಿಸಿದ್ದರು.

ಈ ಕೃತ್ಯದ ಹಿಂದೆ ಗುರ್ಮಿತ್ ಸಿಂಗ್, ನರೇಂದರ್ ಸಿಂಗ್, ಜರಾಬಿಕಾ ಮತ್ತು ಇನ್ನಿತರ ಅಪರಿಚಿತ ವ್ಯಕ್ತಿಗಳ ಹೆಸರುಗಳನ್ನು ಹೆಸರಿಸಿದ್ದರು.

ಬ್ರಿಟನ್, ಮಿಡ್‌ಲ್ಯಾಂಡ್‌ನಲ್ಲಿ ರಿಯಲ್ ಎಸ್ಟೇಟ್‌ನಲ್ಲಿತೊಡಗಿಸಿಕೊಂಡಿರುವ ಭಂಡಾಲ್, ಎಪ್ರಿಲ್-ಮೇ ತಿಂಗಳಲ್ಲಿ ತನ್ನ ಗೆಳೆಯ ಗುರ್ಮಿತ್ ಸಿಂಗ್ ಅವರೊಂದಿಗೆ ಕೆರೆಬಿಯನ್‌ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು 'ರೈಟ್‌ಅಪ್ಸ್24' ಡಾಟ್ ಕಾಮ್ ವರದಿ ಮಾಡಿದೆ.

ಚೋಕ್ಸಿ ಅವರನ್ನು ಅಪಹರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಭಂಡಾಲ್, ಪೊಲೀಸರ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಆಂಟಿಗುವಾ ಪೊಲೀಸರು ತಮ್ಮನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದಿದ್ದಾರೆ.

ಇದನ್ನೂ ಓದಿ:

ವೆಬ್‌ಸೈಟ್‌ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮೇ 23ರಂದು ತಾವು ಸಿಂಗ್ ಜೊತೆ ಆಂಟಿಗುವಾದ ಇಂಗ್ಲಿಷ್ ಹಾರ್ಬರ್‌ನಲ್ಲಿದ್ದೆವು ಎಂಬುದನ್ನು ಖಚಿತಪಡಿಸಿದ್ದಾರೆ. ಬಳಿಕ ವಲಸೆ ದಾಖಲೆ ಪರಿಶೀಲಿಸಿದ ಬಳಿಕ ಡೊಮಿನಿಕಾಗೆ ತೆರಳಿರುವುದಾಗಿ ತಿಳಿಸಿದ್ದಾರೆ.

ಅಪಹರಣ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಚೋಕ್ಸಿಯ ಪ್ರೇಯಸಿ ಜರಾಬಿಕಾ ಬಗ್ಗೆ ಕೇಳಿದಾಗ, ಆಕೆಯ ಪರಿಚಯ ತನಗಿಲ್ಲ. ಕೆರೆಬಿಯನ್‌ಗೆ ಪ್ರಯಾಣಿಸುವಾಗ ನೂರಾರು ಮಂದಿಯನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.

ಕೆರೆಬಿಯನ್‌ಗೆ ವಾರದಲ್ಲಿ 21 ವಿಮಾನಗಳು ಹಾರಾಡುತ್ತಿದ್ದವು. ಕೋವಿಡ್ ಆಗಿದ್ದರಿಂದ ಈಗ ವಾರದಲ್ಲಿ ಕೇವಲ ಎರಡು ವಿಮಾನಗಳು ಪ್ರಯಾಣಿಸುತ್ತವೆ. ಆದ್ದರಿಂದ ನಾವುಪದೇ ಪದೇ ಅದೇ ಜನರೊಂದಿಗೆ ತೆರಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು ₹13,500 ಕೋಟಿ ವಂಚಿಸಿದ ಆರೋಪ ಹೊತ್ತಿರುವ ಚೋಕ್ಸಿ, ಆಂಟಿಗುವಾ, ಬಾರ್ಬುಡಾಗೆ ಪರಾರಿಯಾಗಿ 2018ರಲ್ಲಿ ಅಲ್ಲಿನ ಪೌರತ್ವ ಪಡೆದಿದ್ದರು. ಮೇ 23ರಂದು ಅಲ್ಲಿಂದ ತಪ್ಪಿಸಿಕೊಂಡು ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಪೊಲೀಸರು ಬಂಧಿಸಿದ್ದರು. ಚೋಕ್ಸಿಯನ್ನು ಭಾರತಕ್ಕೆ ಕರೆ ತರಲು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT