ಶನಿವಾರ, ಸೆಪ್ಟೆಂಬರ್ 18, 2021
26 °C

ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಕಾಳ್ಗಿಚ್ಚು; ರಾಜ್ಯದಾದ್ಯಂತ ಬಿಸಿ ವಾತಾವರಣ

ಎಪಿ Updated:

ಅಕ್ಷರ ಗಾತ್ರ : | |

Prajavani

ಗ್ರೀನ್‌ವಿಲ್ಲೆ (ಅಮೆರಿಕ): ಉತ್ತರ ಕ್ಯಾಲಿಫೋರ್ನಿಯಾದ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಮೂರು ವಾರಗಳ ಕಾಲ ಸತತವಾಗಿ ಹೊತ್ತಿ ಉರಿದಿದ್ದ ಕಾಳ್ಗಿಚ್ಚು, ಈಗ ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಇದರಿಂದ ರಾಜ್ಯದಾದ್ಯಂತ ಬಿಸಿ ಮತ್ತು ಶುಷ್ಕ ವಾತಾವರಣ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯಾದ ಪ್ಲುಮಾಸ್‌ ಮತ್ತು ಬಟ್ಟಿ ಕೌಂಟಿ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಜೊತೆಗೆ, ಪ್ಲುಮಾಸ್ ರಾಷ್ಟ್ರೀಯ ಅರಣ್ಯದ ಸಮೀಪವಿರುವ ಗೀನ್‌ವಿಲ್ಲೆಯ ವ್ಯಾಪ್ತಿಯಲ್ಲಿರುವ ಜನರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.

ಪ್ಲುಮಾಸ್‌ ಮತ್ತು ಬಟ್ಟಿ ಕೌಂಟಿಯ 1,024 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ವ್ಯಾಪಿಸಿದೆ. ‘ಅರಣ್ಯದಲ್ಲಿ ಹೊತ್ತಿಕೊಂಡ ಬೆಂಕಿ ಗ್ರೀನ್‌ವಿಲ್ಲೆ ಕಡೆಗೆ ಚಲಿಸುತ್ತಿದ್ದಂತೆ, ಅಗ್ನಿಶಾಮಕ ಸಿಬ್ಬಂದಿ ಜನರನ್ನು ರಕ್ಷಿಸುವುದಕ್ಕಾಗಿ ಬೇರೆ ಕಡೆಗಳಲ್ಲಿದ್ದ ಬೆಂಕಿ ನಂದಿಸುವ ಉಪಕರಣಗಳನ್ನು ಗ್ರೀನ್‌ವಿಲ್ಲೆ ಕಡೆಗೆ ಸಾಗಿಸಿ ತಂದಿದ್ದಾರೆ‘ ಎಂದು ರಾಜ್ಯ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಕಾಳ್ಗಿಚ್ಚು ಉಂಟಾಗಿರುವ ಪ್ರದೇಶದಲ್ಲಿರುವ ಪ್ರಸಿದ್ಧ ರೆಸಾರ್ಟ್‌ ಲೇಕ್‌ ಅಲ್ಮನೋರ್‌ನಲ್ಲಿದ್ದ ಸುಮಾರು ಒಂದು ಸಾವಿರ ಮಂದಿಯನ್ನು ಸ್ಥಳಾಂತರಿಸಲು ಸರ್ಕಾರ ಆದೇಶಿಸಿದೆ. ಕಾಳ್ಗಿಚ್ಚಿನ 3 ಸಾವಿರ ಮನೆಗಳು ಅಪಾಯ ಎದುರಿಸುತ್ತಿವೆ. ಸುಮಾರು 67 ಮನೆಗಳು ನಾಶವಾಗಿವೆ.

ಗ್ರೀಸ್‌ ವರದಿ: ಅಥೆನ್ಸ್‌ ನಗರದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚು, ವಸತಿ ಪ್ರದೇಶಗಳಿಗೂ ನುಗ್ಗಿದ ಪರಿಣಾಮ, ಬೆಂಕಿಯಿಂದ ರಕ್ಷಿಸಿಕೊಳ್ಳಲು ಸಾವಿರಾರು ಮಂದಿ ಬಲವಂತವಾಗಿ ಮನೆಬಿಟ್ಟು ಹೊರ ನಡೆಯುವಂತಾಯಿತು.

500 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ರಾತ್ರಿಯಿಡೀ ಕಾಳ್ಗಿಚ್ಚು ನಂದಿಸಲು ಪ್ರಯತ್ನಿಸಿದರು. ಕಳೆದ 24 ಗಂಟೆಗಳಲ್ಲಿ ಗ್ರೀಸ್‌ನಲ್ಲಿ ಸಂಭವಿಸಿದ 81 ಕಾಳ್ಗಿಚ್ಚುಗಳಲ್ಲಿ, ಇದು ಅತ್ಯಂತ ಕಠಿಣವಾದ ಸವಾಲನ್ನು ಒಡ್ಡಿದ ಕಾಳ್ಗಿಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು