ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಕ್ರೇನ್‌ನಲ್ಲಿ ನೋಡಿದ್ದು ಬಂಕರ್‌ ಮಾತ್ರ’: ಮರಳಿದ ಬಂದವರ ಮರುಗುವ ಕಥನಗಳು

ಒಂದೇ ಕ್ಲಾಸ್‌ಗೆ ಹಾಜರಾಗಿದ್ದೆ ಯುದ್ಧ ಶುರು ಆಯ್ತು
Last Updated 8 ಮಾರ್ಚ್ 2022, 20:36 IST
ಅಕ್ಷರ ಗಾತ್ರ

ನವದೆಹಲಿ: ‘ವೈದ್ಯಕೀಯ ವ್ಯಾಸಂಗಕ್ಕಾಗಿ ಫೆಬ್ರುವರಿ 10 ರಂದು ಭಾರತ ದಿಂದ ಉಕ್ರೇನ್‌ಗೆ ಹೋಗಿದ್ದೆ. ಅಲ್ಲಿ ಯಾವ ಸ್ಥಳಗಳನ್ನೂ ನೋಡಲಾಗಲಿಲ್ಲ. ನೋಡಿದ್ದು ಬರೀ ಬಂಕರ್‌ ಮಾತ್ರ’

ಉಕ್ರೇನ್‌ನ ಹಾರ್ಕಿವ್‌ನಿಂದ ಮಂಗಳವಾರ ನವದೆಹಲಿಗೆ ವಾಪಸಾದ ಕರ್ನಾಟಕದ ವಿಜಯಪುರದ ಯುವಕ, ಮೊದಲ ವರ್ಷಕ್ಕೆ ಪ್ರವೇಶ ಪಡೆದಿದ್ದ ಹರ್ಷ ನ್ಯಾಮಗೊಂಡ ಯುದ್ಧಪೀಡಿತ ನಗರದಲ್ಲಿ ಕಳೆದ ಆತಂಕದ ದಿನಗಳ ಅನುಭವವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಹಾರ್ಕಿವ್‌ಗೆ ತೆರಳಿ, ಕಾಲೇಜು ಮತ್ತು ಹಾಸ್ಟೆಲ್‌ ಪ್ರವೇಶದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುತ್ತಲೇ ವಾರ ಕಳೆಯಿತು. ನಂತರ ಒಂದೇ ದಿನ, ಅದೂ ಒಂದೇ ಒಂದು ಕ್ಲಾಸ್‌ (ತರಗತಿ)ಗೆ ಹಾಜರಾಗಿದ್ದೆ. ಮಾರನೇ ದಿನದಿಂದಲೇ ಯುದ್ಧ. ಹೊರಗೆ ಎಲ್ಲೂ ಸುತ್ತಿರಲಿಲ್ಲ. ಯಾರ ಪರಿಚಯವೂ ಆಗಲಿಲ್ಲ. ಸುರಕ್ಷತೆಯ ಕಾರಣದಿಂದ ನಮ್ಮನ್ನು ಹಾಸ್ಟೆಲ್‌ನಿಂದ ಬಂಕರ್‌ಗೆ ಕಳುಹಿಸಲಾಯಿತು. ಹಾಗಾಗಿ ಹಲವು ಬಂಕರ್‌ಗಳನ್ನು ಮಾತ್ರ ನೋಡಿದ್ದಾಯಿತು’ ಎಂದರು.

‘ಸತತವಾಗಿ ಬಂಕರ್‌ಗಳಲ್ಲೇ ಇದ್ದೆವು. ಹೊಟ್ಟೆತುಂಬ ಊಟ– ತಿಂಡಿ, ಕುಡಿಯುವ ನೀರು ಸಿಗಲೇ ಇಲ್ಲ. ಪ್ರತಿ ಕ್ಷಣವೂ ಆತಂಕ, ಕ್ಷಿಪಣಿ, ಶೆಲ್‌, ಬಾಂಬ್‌ ದಾಳಿಯ ಸದ್ದು, ಗುಂಡಿನ ಮೊರೆತ ಕೇಳುತ್ತಿದ್ದುದರಿಂದ ಜೀವಂತ ವಾಪಸ್‌ ಬರುತ್ತೇವೆ ಎಂಬ ನಂಬಿಕೆ ಇರಲಿಲ್ಲ’ ಎಂದು ಅವರು ಹೇಳಿದರು.

‘ಸಂಜೆ 6ರೊಳಗೆ ಹಾರ್ಕಿವ್‌ ನಗರ ತೊರೆಯುವಂತೆ ಕಳೆದ ವಾರ ಸರ್ಕಾರದಿಂದ ಸೂಚನೆ ದೊರೆತಿದ್ದೇ ತಡ, ಬ್ಯಾಗ್‌ ಹೊತ್ತುಕೊಂಡು ರೈಲು ನಿಲ್ದಾಣದತ್ತ ತೆರಳಿದೆವು. 15 ಕಿಲೋ ಮೀಟರ್‌ ನಡೆದು ಹೋದರೂ ರೈಲುಗಳಲ್ಲಿ ಜಾಗ ಸಿಗಲಿಲ್ಲ. ಅಲ್ಲಿಂದ ಮತ್ತೆ 10ರಿಂದ 15 ಕಿಲೋ ಮೀಟರ್‌ ನಡೆದು ಹಾರ್ಕಿವ್‌ ಹೊರವಲಯದ ಪಿಸೋಚಿನ್‌ ತಲುಪಿದೆವು. ಅಲ್ಲಿ ಮತ್ತೆ ನಮ್ಮನ್ನು ಸುರಕ್ಷಿತ ತಾಣದಲ್ಲಿ 4 ದಿನ ಇರಿಸಲಾಯಿತು’ ಎಂದು ಅನುಭವ ಹಂಚಿಕೊಂಡರು.

‘ಮೊದಲ ಒಂದು ವಾರ ಹಾರ್ಕಿವ್‌ನ ಬಂಕರ್‌ಗಳಲ್ಲಿ ನರಕಯಾತನೆ. ನಂತರದ ನಾಲ್ಕು ದಿನವೂ ಅದೇ ಅನುಭವ. ಕುಡಿಯಲು ನೀರು, ಊಟ ಸಿಗಲಿಲ್ಲ. ಅಲ್ಲೂ ಪ್ರಾಣಭೀತಿ. ಕೊನೆಗೆ ರೊಮೇನಿಯಾ ಗಡಿ ತಲುಪಿದೆವು. ಅಲ್ಲಿಂದ ಸಾಲ್ಸಿಯಾ ನಗರದ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದ್ದ ವಿಮಾನದಲ್ಲಿ ಮರಳಿದೆವು’ ಎಂದು ಅವರು ಹೇಳಿದರು.

ಸೂಪ್‌ ಕುಡಿದು ಕಾಲ ತಳ್ಳಿದೆವು: ಮೊದಲ ವರ್ಷದ ವೈದ್ಯಕೀಯ ವ್ಯಾಸಂಗಕ್ಕೆಂದು ಒಂದು ತಿಂಗಳ ಹಿಂದಷ್ಟೇ ನಾನು ಹಾರ್ಕಿವ್‌ಗೆ ತೆರಳಿದ್ದೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಷ್ಟರಲ್ಲೇ ಯುದ್ಧ ಶುರುವಾಯಿತು. ನಮ್ಮ ಕಾಲೇಜಿನ ನೆಲಮಾಳಿಗೆ, ಮೆಟ್ರೋ ನಿಲ್ದಾಣ ಮತ್ತು ಬಂಕರ್‌ಗಳು ನಂತರ ಪಿಸೋ ಚಿನ್‌ನಲ್ಲಿನ ಬಂಕರ್‌ಗಳಲ್ಲಿ ಕಾಲ ಕಳೆದೆವು’ ಎಂದು ಬೆಂಗಳೂರಿನ ಎಂ.ಕೆ. ತೇಜಸ್ವಿನಿ ಕರಾಳ ಅನುಭವ ಹಂಚಿಕೊಂಡರು.

ಪಿಸೋಚಿನ್‌ನಲ್ಲಿ ಮೊದಲ ದಿನ ತಿನ್ನಲು ಸಿಕ್ಕಿದ್ದು ಬರೀ ಚಿಕನ್‌ ಸೂಪ್‌. ಶಾಖಾಹಾರಿಯಾದ ನಾನು ಕುಡಿಯಲಿಲ್ಲ. ಮಾರನೇ ದಿನದಿಂದ ವೆಜ್‌ ಸೂಪ್‌ ದೊರೆಯಿತು. ನಾಲ್ಕನೇ ದಿನ ಅನ್ನ ಮತ್ತು ಸ್ವಲ್ಪ ತರಕಾರಿ ನೀಡಿದರು. ಹೇಗೋ ಉಪವಾಸ ಇರಬಹುದು. ಆದರೆ, ಜೀವ ಉಳಿಸಿ ಕೊಳ್ಳೋದೇ ದೊಡ್ಡ ಸವಾಲಾಗಿತ್ತು. ಸ್ನೇಹಿತರು ಮತ್ತು ಸರ್ಕಾರದ ನೆರವಿನಿಂದ ತಾಯ್ನಾಡಿಗೆ ಮರಳಿದೆವು’ ಎಂದು ತಿಳಿಸಿದರು.

ಉಕ್ರೇನ್‌ನ ವಿವಿಧ ಭಾಗಳಿಂದ ಇದುವರೆಗೆ ಒಟ್ಟು 506 ಜನ ಕನ್ನಡಿಗರು ವಾಪಸಾಗಿದ್ದು, ಹಾರ್ಕಿವ್‌ ಮತ್ತು ಕೀವ್‌ನಲ್ಲಿ ಸಿಲುಕಿದ್ದ ಎಲ್ಲರೂ ಮರಳಿದಂತಾಗಿದೆ. ಸುಮಿಯಲ್ಲಿ ಸಿಲು ಕಿರುವ ಕೆಲವರು ಬುಧವಾರ ಮರಳುವ ಸಾಧ್ಯತೆ ಇದೆ.

‘ಸ್ವಾಗತ ಕೋರಿದ್ದ ನವೀನ್‌’

ನವದೆಹಲಿ: ‘ರಷ್ಯಾ ಪಡೆಗಳ ದಾಳಿಯಲ್ಲಿ ಮೃತಪಟ್ಟ ನವೀನ್ ನಮ್ಮನ್ನು ಉತ್ಸಾಹದಿಂದ ಸ್ವಾಗತಿಸಿ ಸಿಹಿ ನೀಡಿದ್ದರು. ಮಾರ್ಚ್‌ 1ರಂದು ಬೆಳಿಗ್ಗೆ ಆಹಾರ ತರಲು ಹೋದವರು ವಾಪಸ್‌ ಬರಲಿಲ್ಲ’ ಎಂದು ಹರ್ಷ ದುಃಖಿಸಿದರು.

‘ಅವರು ಬಹಳ ಹೊತ್ತಾದರೂ ವಾಪಸಾಗದಿದ್ದಾಗ ಸ್ನೇಹಿತರು ಕರೆ ಮಾಡಿದ್ದರು. ಕರೆ ಸ್ವೀಕರಿಸದ್ದರಿಂದ ಗಾಬರಿಯಾಗಿತ್ತು. ಕೊನೆಗೆ ಮಹಿಳೆಯೊಬ್ಬರು ಕರೆ ಸ್ವೀಕರಿಸಿ ನವೀನ್‌ ಸಾವಿಗೀಡಾಗಿದ್ದಾಗಿ ವಿಷಾದದಿಂದಲೇ ಹೇಳಿದರು. ವಿಡಿಯೋ ಕಾಲ್‌ ಮಾಡಿ ಖಚಿತಪಡಿಸಿದರು. ಶೆಲ್‌ ದಾಳಿಯಲ್ಲಿ ಮೃತಪಟ್ಟ ನವೀನ್‌ ಶರೀರಕ್ಕೆ ಹೆಚ್ಚು ಧಕ್ಕೆ ಆಗಿಲ್ಲ ಎಂಬುದೂ ಆಗಲೇ ತಿಳಿಯಿತು. ಅವರ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲು ಸರ್ಕಾರ ಯತ್ನಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT