ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಸಂಸತ್ತಿನ ಉಪಚುನಾವಣೆ: ಎಲ್ಲ 33 ಕ್ಷೇತ್ರಗಳಲ್ಲಿ ಇಮ್ರಾನ್ ಖಾನ್ ಸ್ಪರ್ಧೆ

Last Updated 30 ಜನವರಿ 2023, 2:28 IST
ಅಕ್ಷರ ಗಾತ್ರ

ಲಾಹೋರ್: ಮಾರ್ಚ್‌ನಲ್ಲಿ ನಡೆಯಲಿರುವ ಪಾಕಿಸ್ತಾನದ ಸಂಸತ್ತಿನ ಎಲ್ಲ 33 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಒಬ್ಬರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಅವರ ಪಕ್ಷ ಘೋಷಿಸಿದೆ.

ಭಾನುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಪಾಕಿಸ್ತಾನ್ ತೆಹ್ರೀಕ್ ಇ ಇನ್‌ಸಾಫ್(ಪಿಟಿಐ) ಪಕ್ಷದ ಉಪಾಧ್ಯಕ್ಷ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ, ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

‘ಎಲ್ಲ 33 ಕ್ಷೇತ್ರಗಳಲ್ಲಿ ಇಮ್ರಾನ್ ಖಾನ್ ಪಕ್ಷದ ಏಕೈಕ ಅಭ್ಯರ್ಥಿಯಾಗಲಿದ್ದಾರೆ. ಭಾನುವಾರ ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ಪಾಕಿಸ್ತಾನದ ಚುನಾವಣಾ ಆಯೋಗವು ರಾಷ್ಟ್ರೀಯ ಸಂಸತ್ತಿನ 33 ಕ್ಷೇತ್ರಗಳ ಉಪಚುನಾವಣಾ ದಿನಾಂಕವನ್ನು ಘೋಷಿಸಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೋತು ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡಿದ್ದರು. ಬಳಿಕ ಅವರ ಪಕ್ಷದ ಎಲ್ಲ ಸಂಸದರು ರಾಜೀನಾಮೆ ನೀಡಿದ್ದರು.

ಆದರೆ, ಸ್ಪೀಕರ್ ರಾಜಾ ಪರ್ವೇಜ್ ಅಶ್ರಫ್, ಸಂಸದರ ರಾಜೀನಾಮೆಗಳನ್ನು ಅಂಗೀಕರಿಸಿರಲಿಲ್ಲ. ತಮ್ಮ ಸ್ವಂತ ಇಚ್ಛೆಯಿಂದಲೇ ಸಂಸದರು ರಾಜೀನಾಮೆ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದರು.

ಈ ನಡುವೆ, ಕಳೆದ ತಿಂಗಳು ಪಿಟಿಐನ 35 ಸಂಸದರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT