ಮಂಗಳವಾರ, ಮಾರ್ಚ್ 2, 2021
19 °C

ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸ್ಥಾನ: ಬೈಡನ್‌ ಸರ್ಕಾರದ ನಿಲುವೇನು?

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯ ಸ್ಥಾನ ನೀಡುವುದರ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕಿದೆ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿರುವ ಲಿಂಡಾ ಥಾಮಸ್‌–ಗ್ರೀನ್‌ಫೀಲ್ಡ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್‌ ಅವರು ಅಧಿಕಾರ ವಹಿಸಿಕೊಂಡ ನಂತರ ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿ ಲಿಂಡಾ ಥಾಮಸ್‌–ಗ್ರೀನ್‌ಫೀಲ್ಡ್‌ ಅವರನ್ನು ನೇಮಿಸಲಾಗಿದೆ. ಅವರಿಗೆ ಅಮೆರಿಕ ಸಚಿವ ಸಂಪುಟ ಸದಸ್ಯರ ಸ್ಥಾನಮಾನವಿದೆ.

ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತ ಬಂದಿರುವ ಭಾರತವನ್ನು ಈ ಹಿಂದಿನ ಅಮೆರಿಕದ ಸರ್ಕಾರಗಳು ಬೆಂಬಲಿಸಿದ್ದವು. ಜಾರ್ಜ್‌ ಬುಷ್‌, ಬರಾಕ್‌ ಒಬಾಮ ಮತ್ತು ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಆಡಳಿತಗಳು ಭಾರತದ ಬೇಡಿಕೆಗೆ ಅಮೆರಿಕದ ಬೆಂಬಲ ಇರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದವು.

'ಭಾರತ, ಜರ್ಮನಿ, ಜಪಾನ್ ದೇಶಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವದ ಬಗ್ಗೆ ನಿಮ್ಮ ನಿಲುವೇನು?' ಎಂದು ಒರೆಗಾನ್‌ ಸೆನೆಟರ್ ಜೆಫ್ ಮೆರ್ಕ್ಲೆ ಕೇಳಿದ ಪ್ರಶ್ನೆಗೆ ಲಿಂಡಾ ಥಾಮಸ್‌–ಗ್ರೀನ್‌ಫೀಲ್ಡ್‌ ಪ್ರತಿಕ್ರಿಯಿಸಿದ್ದಾರೆ.

'ಭಾರತ, ಜರ್ಮನಿ, ಜಪಾನ್ ದೇಶಗಳಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ನೀಡಬೇಕೆಂಬ ವಾದಗಳಿವೆ. ಆದರೆ, ಆ ವಾದಗಳಿಗೆ ಪ್ರಬಲ ಪ್ರತಿವಾದಗಳೂ ಇವೆ' ಎಂದು ಅವರು ಹೇಳಿದ್ದಾರೆ.

'ಆ ಪ್ರದೇಶಗಳನ್ನು ಪ್ರತಿನಿಧಿಸುತ್ತಿರುವ ಕೆಲ ಜನರು ತಮ್ಮ ಪ್ರತಿನಿಧಿತ್ವವನ್ನು ಒಪ್ಪುವುದಿಲ್ಲ ಎಂಬುದು ನನ್ನ ಅರಿವಿಗೆ ಬಂದಿದೆ' ಎಂದು ಲಿಂಡಾ ಥಾಮಸ್‌ ಪ್ರತಿಪಾದಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಗೊಂಡಿರುವ ಭಾರತದ ಅಧಿಕಾರಾವಧಿ ಜನವರಿ 1ರಂದು ಆರಂಭವಾಗಿದೆ.

ಅಧಿಕಾರಾವಧಿ ಎರಡು ವರ್ಷ ಇರಲಿದೆ. ಕಳೆದ ಜೂನ್‌ 18ರಂದು ನಡೆದ ಚುನಾವಣೆಯಲ್ಲಿ ಭಾರತ ಈ ಸ್ಥಾನಕ್ಕೆ ಆಯ್ಕೆಯಾಗಿತ್ತು. ಭಾರತದೊಂದಿಗೆ ನಾರ್ವೆ, ಕೀನ್ಯಾ, ಐರ್ಲೆಂಡ್‌ ಹಾಗೂ ಮೆಕ್ಸಿಕೊ ರಾಷ್ಟ್ರಗಳು ಸಹ ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳಾಗಿ ಆಯ್ಕೆಗೊಂಡಿದ್ದು, ಅವುಗಳ ಅಧಿಕಾರಾವಧಿ ಸಹ ಆರಂಭವಾಯಿದೆ.

ಭಾರತ ಈ ಹಿಂದೆ ಹಲವು ಭಾರಿ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶವಾಗಿ ಆಯ್ಕೆಯಾಗಿತ್ತು. 1950-1951, 1967-1968, 1972-1973, 1977-1978, 1984-1985, 1991-1992 ಮತ್ತು ಇತ್ತೀಚೆಗೆ 2011-2012ರಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭದ್ರತಾ ಮಂಡಳಿಗೆ ಪ್ರವೇಶಿಸಿತ್ತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತಕ್ಕೆ ಎಲ್ಲ ಅರ್ಹತೆಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು