ಶನಿವಾರ, ಜನವರಿ 16, 2021
24 °C

ಕೋವಿಡ್‌ ನಂತರದ ಸಹಕಾರಕ್ಕೆ ಭಾರತ–ಶ್ರೀಲಂಕಾ ಚಿತ್ತ: ಎಸ್‌.ಜೈಶಂಕರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ಕೊರೊನಾ ಪಿಡುಗಿನಿಂದಾಗಿ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಯಾವುದೇ ಹಾನಿಯಾಗಿಲ್ಲ. ಕೊರೊನಾ ನಂತರದ ಸಹಕಾರಕ್ಕೆ ಇದೀಗ ಎರಡೂ ರಾಷ್ಟ್ರಗಳು ಮುಂದೆ ನೋಡುತ್ತಿವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದರು. 

ಶ್ರೀಲಂಕಾದ ವಿದೇಶಾಂಗ ಸಚಿವ ದಿನೇಶ್‌ ಗುಣವರ್ಧನ ಅವರ ಜೊತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್‌, ‘ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವ ಅವಕಾಶವನ್ನು ಕೊರೊನಾ ಪಿಡುಗು ಎರಡೂ ರಾಷ್ಟ್ರಗಳಿಗೆ ನೀಡಿದೆ. ಕಳೆದೊಂದು ವರ್ಷದಲ್ಲಿ ಉನ್ನತ ಮಟ್ಟದ ಮಾತುಕತೆಯನ್ನು ಎರಡೂ ರಾಷ್ಟ್ರಗಳು ನಿಭಾಯಿಸಿದ್ದು, ಪ್ರಧಾನಿಗಳ ವರ್ಚುವಲ್‌ ಶೃಂಗಸಭೆಯು ನಮ್ಮ ಸಂಬಂಧದ ಸಾಕ್ಷ್ಯ’ ಎಂದರು. 

ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಜೊತೆಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ, ಬಂಡವಾಳ ಹೂಡಿಕೆ, ವಾಣಿಜ್ಯಕ್ಕೆ ಸಂಬಂಧಿಸಿದ ವಿಷಯಗಳ ಒಪ್ಪಂದವನ್ನು ಮತ್ತಷ್ಟು ವಿಸ್ತರಿಸಲಾಗಿತ್ತು. ಇದಾದ ಮೂರು ತಿಂಗಳ ಬಳಿಕ ಜೈಶಂಕರ್‌ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ.

‘ಭಾರತದಿಂದ ಕೋವಿಡ್‌–19 ಲಸಿಕೆಯನ್ನು ಖರೀದಿಸಲು ಶ್ರೀಲಂಕಾ ಆಸಕ್ತಿ ತೋರಿದೆ. ಈ ವಿಷಯವನ್ನು ನಾನು ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದು ಜೈಶಂಕರ್‌ ಹೇಳಿದರು. ಸಭೆಯಲ್ಲಿ ಕೋವಿಡ್‌–19 ಲಸಿಕೆಯನ್ನು ಪಡೆಯಲು ಭಾರತದ ನೆರವನ್ನು ಶ್ರೀಲಂಕಾವು ಕೋರಿದೆ. 

‘ಶ್ರೀಲಂಕಾದ ಏಕತೆ ಹಾಗೂ ಪ್ರಾದೇಶಿಕ ಸಮಗ್ರತೆಗೆ ಭಾರತವು ಬದ್ಧವಾಗಿದೆ. ಶ್ರೀಲಂಕಾದಲ್ಲಿ ಸಾಮರಸ್ಯ ತರುವ ಪ್ರಕ್ರಿಯೆಗೆ ಭಾರತದ ಬೆಂಬಲವು ಹಿಂದಿನಿಂದಲೂ ಮುಂದುವರಿದಿದೆ. ಅಲ್ಪಸಂಖ್ಯಾತರಾಗಿರುವ ತಮಿಳು ಜನರ ನಿರೀಕ್ಷೆಗಳಾದ ಸಮಾನತೆ, ನ್ಯಾಯ, ಶಾಂತಿ ಹಾಗೂ ಘನತೆಯನ್ನು ಪೂರೈಸುವುದು ಶ್ರೀಲಂಕಾದ ಸ್ವಯಂ ಹಿತಾಸಕ್ತಿಗೆ ಪೂರಕವಾಗಲಿದೆ’ ಎಂದು ಜೈಶಂಕರ್‌ ಹೇಳಿದರು. 

ಇದೇ ವೇಳೆ ಶ್ರೀಲಂಕಾದಲ್ಲಿ ಬಂಧನಕ್ಕೆ ಒಳಗಾಗಿರುವ ಮೀನುಗಾರರ ಬಿಡುಗಡೆಗೂ ಜೈಶಂಕರ್‌ ಮೀನುಗಾರಿಕಾ ಸಚಿವ ಡಾಗ್ಲಸ್‌ ದೇವಾನಂದ ಅವರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು