ಸೋಮವಾರ, ಜೂನ್ 27, 2022
24 °C
ಪ್ರತಿ ಇಬ್ಬರಲ್ಲಿ ಒಬ್ಬರಿಗೆ ಜನಾಂಗೀಯ ಕಿರುಕುಳ

ಆಳ–ಅಗಲ: ಭಾರತೀಯ ಅಮೆರಿಕನ್ನರಿಗೆ ತಾರತಮ್ಯದ ಕಿರಿಕಿರಿ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದಲ್ಲಿರುವ ಪ್ರತಿ ಇಬ್ಬರು ಭಾರತೀಯ ಅಮೆರಿಕನ್ನರಲ್ಲಿ ಒಬ್ಬರು ತಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯ ತಾರತಮ್ಯವನ್ನು ಎದುರಿಸುತ್ತಿದ್ದಾರೆ. 2020ರಲ್ಲಿ ನಡೆಸಿದ ಭಾರತೀಯ ಅಮೆರಿಕನ್ನರ ನಡೆನುಡಿ ಸಮೀಕ್ಷೆಯ (ಐಎಎಎಸ್‌)ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಮೂಲದೇಶ, ಭಾಷೆ, ಉಡುಗೆ, ಧರ್ಮ, ಚರ್ಮದ ಬಣ್ಣವನ್ನು ಗುರಿಯಾಗಿಸಿಕೊಂಡು ತಮ್ಮನ್ನು ತಾರತಮ್ಯಕ್ಕೆ ಗುರಿಮಾಡಲಾಗುತ್ತದೆ ಎಂದು ಭಾರತೀಯ ಅಮೆರಿಕನ್ನರು ಈ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. 

ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗ ಆಧಾರಿತ ಹಲ್ಲೆ ಮತ್ತು ದಾಳಿಗಳು ನಡೆಯುತ್ತಲೇ ಇರುತ್ತವೆ. ಇದೇ ಏಪ್ರಿಲ್ 26ರಂದು ಅಮೆರಿಕದ ಆಸ್ಟ್ರೋರಿಯಾದಲ್ಲಿ ಸಿಖ್ ಯುವಕನ ಮೇಲೆ ಕರಿಯ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ‘ನಿನ್ನ ಬಣ್ಣ, ನನ್ನ ಬಣ್ಣದಂತಿಲ್ಲ. ನಿನ್ನನ್ನು ಕಂಡರೆ ನನಗಾಗುವುದಿಲ್ಲ’ ಎಂದು ದಾಳಿಕೋರ ಕಿರುಚಿದ್ದ ಎಂದು ಸಿಖ್ ಯುವಕ ಹೇಳಿಕೆ ನೀಡಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಜನಾಂಗದ ಆಧಾರದಲ್ಲಿಯೇ ನಡೆದ ದಾಳಿ ಎಂಬ ತೀರ್ಮಾನಕ್ಕೆ ಬರಲಾಗಿದೆ. ಮಾರ್ಚ್‌ ತಿಂಗಳಿನಲ್ಲಿಯೂ ಅಮೆರಿಕದ ಇಂಡಿಯಾನ ಪೊಲೀಸ್‌ನಲ್ಲಿರುವ ಫೆಡ್‌ಎಕ್ಸ್‌ ಕ್ಯಾಂಪಸ್‌ನಲ್ಲಿ ವಿದೇಶಿಯರನ್ನು ಗುರಿಯಾಗಿಸಿಕೊಂಡು ಅಮೆರಿಕನ್ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ್ದ. ದಾಳಿಯಲ್ಲಿ 8 ವಿದೇಶಿಯರು ಮೃತಪಟ್ಟಿದ್ದರು. ಅವರಲ್ಲಿ ನಾಲ್ವರು ಸಿಖ್ಖರು.

ತಮ್ಮ ವಿರುದ್ಧ ನಡೆಯುವ ತಾರತಮ್ಯದ ಬಗ್ಗೆ ಭಾರತೀಯ ಅಮೆರಿಕನ್ನರು ಸಮೀಕ್ಷೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅತ್ಯಂತ ದೊಡ್ಡ ವಿದೇಶಿ ಸಮುದಾಯಗಳಲ್ಲಿ ಭಾರತೀಯ ಅಮೆರಿಕನ್ನರಿಗೆ ಎರಡನೇ ಸ್ಥಾನವಿದೆ. ಅವರ ವಿರುದ್ಧದ ತಾರತಮ್ಯದ ಪ್ರಮಾಣವೂ ದೊಡ್ಡದೇ ಆಗಿದೆ. ಹೀಗಾಗಿ ಭಾರತೀಯ ಅಮೆರಿಕನ್ನರಲ್ಲಿ ಕೆಲವರು ತಾವು ಭಾರತೀಯ ಅಮೆರಿಕನ್ನರು ಎಂದು ಗುರುತಿಸಿಕೊಳ್ಳುವುದಿಲ್ಲ. ಬದಲಿಗೆ ಅಮೆರಿಕನ್ನರು ಎಂದು ಹೇಳಿಕೊಳ್ಳುತ್ತೇವೆ. ಅಮೆರಿಕನ್ನರೇ ಆಗಿದ್ದೇವೆ ಎಂದೂ ಸಮೀಕ್ಷೆಯಲ್ಲಿ ಉತ್ತರಿಸಿದ್ದಾರೆ.

ಯಾರಿಂದ ತಾರತಮ್ಯ?

ಧರ್ಮ, ಲಿಂಗ, ದೇಶ, ಬಣ್ಣ ಹಾಗೂ ಜಾತಿಯ ಕಾರಣಕ್ಕೆ ತಾವು ತಾರತಮ್ಯ ಎದುರಿಸಿದ್ದೇವೆ ಎಂಬುದನ್ನು ಭಾರತೀಯ ಅಮೆರಿಕನ್ನರು ಒಪ್ಪಿಕೊಂಡಿದ್ದಾರೆ. ಯಾರಿಂದ ಹೆಚ್ಚಾಗಿ ತಾರತಮ್ಯ ಎದುರಾಗಿದೆ ಎಂಬ ಪ್ರಶ್ನೆಗೆ ‘ಭಾರತೀಯರಲ್ಲದ ವ್ಯಕ್ತಿಗಳಿಂದ’ ಎಂಬ ಉತ್ತರ ಸಿಕ್ಕಿದೆ. ಭಾರತೀಯರಲ್ಲದ ವ್ಯಕ್ತಿಗಳಿಂದಲೇ ಮುಕ್ಕಾಲು ಭಾಗ ತಾರತಮ್ಯ ಎದುರಾಗಿದೆ.

ಬಹುತೇಕ ಭಾರತೀಯ ಅಮೆರಿಕನ್ನರಿಗೆ ತಮ್ಮ ದೇಶ ಹಾಗೂ ಚರ್ಮದ ಬಣ್ಣ ಯಾವುದು ಎಂಬ ಕಾರಣಕ್ಕೆ ತಾರತಮ್ಯ ಎದುರಿಸುವ ಪ್ರಸಂಗ ಬಂದಿದೆ. ಲಿಂಗ ಮತ್ತು ಪ್ರಾದೇಶಿಕತೆ ವಿಚಾರದಲ್ಲೂ ಹೀಗೆಯೇ ಆಗಿದೆ. ಯಾವ ದೇಶಕ್ಕೆ ಸೇರಿದವರು ಎಂಬ ವಿಚಾರದಲ್ಲಿ ಭಾರತೀಯರಲ್ಲದವರಿಂದ ಶೇ 76ರಷ್ಟು ಮಂದಿ, ಚರ್ಮದ ಬಣ್ಣದ ವಿಚಾರಕ್ಕೆ ಶೇ 71ರಷ್ಟು ಭಾರತೀಯ ಅಮೆರಿಕನ್ನರು ಕಿರುಕುಳ ಎದುರಿಸಿದ್ದಾರೆ.

ಸಮುದಾಯದಲ್ಲಿ ವೈವಿಧ್ಯ: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದಲ್ಲಿ ವೈವಿಧ್ಯ ನೆಲೆಸಿದೆ. ಭಾಷೆ, ಪ್ರದೇಶ, ಧರ್ಮ ಇತ್ಯಾದಿ ವಿಚಾರಗಳು ಅವರನ್ನು ಬೆಸೆದಿವೆ. ತಮ್ಮ ಭಾಷೆಯನ್ನಾಡುವ, ತಮ್ಮ ರಾಜ್ಯಕ್ಕೆ ಸೇರಿದ, ತಮ್ಮ ಜಾತಿಗೆ ಸೇರಿದ ಜನರ ಭೇಟಿಯಿಂದ ಸಾಮಾಜಿಕ ಸಂಪರ್ಕ ಬಲಗೊಂಡಿದೆ. ಬಹುತೇಕ ಸ್ನೇಹಿತರು ಅವರ ಧಾರ್ಮಿಕ ವಿಚಾರವನ್ನು ತಮ್ಮ ಜೊತೆ ಹಂಚಿಕೊಂಡಿದ್ದಾರೆ ಎಂದು ಶೇ 48ರಷ್ಟು ಭಾರತೀಯ ಅಮೆರಿಕನ್ನರು ಹೇಳಿದ್ದಾರೆ. ಸ್ನೇಹಿತರ ಪೈಕಿ ಒಂದಿಷ್ಟು ಮಂದಿ ತಮ್ಮದೇ ಧರ್ಮಕ್ಕೆ ಸೇರಿದವರು ಎಂದು ಶೇ 36ರಷ್ಟು ಜನರು ಹೇಳಿದ್ಧಾರೆ. ತಮ್ಮ ಕೆಲವು ಸ್ನೇಹಿತರು ಅವರ ಧರ್ಮದ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ ಎಂದು ಶೇ 12ರಷ್ಟು ಭಾರತೀಯ ಅಮೆರಿಕನ್ನರು ಹೇಳಿದ್ದಾರೆ.

ಐಎಎಎಸ್ ಮಾಹಿತಿಯ ಪ್ರಕಾರ, ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ 54ರಷ್ಟು ಜನರು ಹಿಂದೂ,  ಶೇ 13ರಷ್ಟು ಮುಸ್ಲಿಂ, ಶೇ 11ರಷ್ಟು ಕ್ರೈಸ್ತ ಮತ್ತು ಶೇ 7ರಷ್ಟು ಬೌದ್ಧ ಮತ್ತು ಸಿಖ್ ಧರ್ಮಕ್ಕೆ ಸೇರಿದವರು.

ಪ್ರದೇಶ ಕುರಿತು ಕೇಳಿದ ಪ್ರಶ್ನೆಗೆ ಭಾರತೀಯ ಅಮೆರಿಕನ್ನರು ಉತ್ತರಿಸಿದ್ದಾರೆ. ತಮ್ಮ ಸ್ನೇಹಿತರೆಲ್ಲರೂ ಭಾರತ ಮೂಲದವರು ಎಂಬುದಾಗಿ ಶೇ 29ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಜೊತೆಗಿರುವ ಕೆಲವರು ಭಾರತೀಯರು ಎಂಬುದಾಗಿ ಶೇ 42ರಷ್ಟು ಜನರ ಹೇಳಿದ್ದರೆ, ತಮ್ಮ ಜೊತೆಗೆ ಯಾವ ಭಾರತೀಯರೂ ಇಲ್ಲ ಎಂದು ಶೇ 23ರಷ್ಟು ಭಾರತೀಯ ಅಮೆರಿಕನ್ನರು ಹೇಳಿದ್ದಾರೆ.

ತಮ್ಮ ಸ್ನೇಹಿತರು ಯಾವ ಜಾತಿಗೆ ಸೇರಿದ್ದಾರೆ ಎಂಬುದು ತಿಳಿದಿಲ್ಲ ಎಂದವರು ಕಾಲು ಭಾಗದಷ್ಟು ಜನ. ಇದರರ್ಥ, ‘ಭಾರತೀಯ ಅಮೆರಿಕನ್ನರ ನಡೆನುಡಿಸಮೀಕ್ಷೆ’ಯಲ್ಲಿ ಭಾಗಿಯಾಗಿದ್ದವರು ಜಾತಿಗೆ ಅಷ್ಟಾಗಿ ಮಹತ್ವ ನೀಡಿಲ್ಲ.

ಭಾಷಾ ವೈವಿಧ್ಯ: ಭಾರತೀಯ ಅಮೆರಿಕನ್ ಸಮುದಾಯವು ಭಾಷೆಯ ವಿಚಾರದಲ್ಲಿ ವೈವಿಧ್ಯದಿಂದ ಕೂಡಿದೆ. ಶೇ 19ರಷ್ಟು ಜನರು ಹಿಂದಿ ಭಾಷೆಯನ್ನು ತಮ್ಮ ಮಾತೃಭಾಷೆ ಎಂದು ಹೇಳಿದ್ಧಾರೆ. ಇದರ ಬಳಿಕ ಗುಜರಾತಿ, ಇಂಗ್ಲಿಷ್, ತೆಲುಗು, ತಮಿಳು, ಪಂಜಾಬಿ, ಬಂಗಾಳಿ, ಮರಾಠಿ ಹಾಗೂ ಕನ್ನಡ ಭಾಷೆಗಳಿವೆ.

ಮದುವೆ ಯಾರನ್ನು ಆಗುತ್ತೀರಿ?

ಭಾರತೀಯ ಅಮೆರಿಕನ್ನರಲ್ಲಿ ವಿವಾಹ ವಿಚ್ಚೇದನ ಪ್ರಮಾಣ ಕಡಿಮೆ ಎಂಬ ಅಂಶ ಸಮೀಕ್ಷೆಯಲ್ಲಿ ಕಂಡುಬಂದಿದೆ. ಭಾಗವಹಿಸಿದ್ದವರ ಪೈಕಿ ಶೇ 66ರಷ್ಟು ಮಂದಿ ಮದುವೆಯಾಗಿದ್ದಾರೆ ಅಥವಾ ಸಂಗಾತಿ ಜೊತೆ ಒಟ್ಟಿಗಿದ್ದಾರೆ. ತಮ್ಮ ಸಮುದಾಯದೊಳಗೆ ಮದುವೆಯಾಗುವ ಪ್ರವೃತ್ತಿ ಭಾರತೀಯ ಅಮೆರಿಕನ್ನರಲ್ಲಿ ಇದೆ. ಸಮುದಾಯದ ಹೊರಗೆ ಮದುವೆಯಾಗುವವರು ಎರಡನೇ ತಲೆಮಾರಿನಲ್ಲಿ ಕಂಡುಬಂದಿದ್ದಾರೆ. ತಮಗೆ ಭಾರತ ಮೂಲದ ಸಂಗಾತಿ ಜೊತೆಯಾಗಿದ್ದಾರೆ ಎಂದು 10ರಲ್ಲಿ 8 ಮಂದಿ ಉತ್ತರ ನೀಡಿದ್ದಾರೆ. ಅಂದರೆ ಶೇ 77ರಷ್ಟು ಮಂದಿ ಭಾರತೀಯ ಮೂಲದವರನ್ನೇ ಮದುವೆಯಾಗಿದ್ದಾರೆ. ಆದರೆ ಹೊಸ ತಲೆಮಾರಿನ ಜನರಿಗೆ ಅಮೆರಿಕದಲ್ಲಿ ಹುಟ್ಟಿದ ಭಾರತ ಮೂಲದ ಸಂಗಾತಿ ಬೇಕು.

ಅಮೆರಿಕದಲ್ಲೇ ಜನಿಸಿದ್ದರೂ ಹೆಚ್ಚು ತಾರತಮ್ಯ

'ಭಾರತೀಯ ಅಮೆರಿಕನ್ನರಲ್ಲಿ, ಅಮೆರಿಕದಲ್ಲಿ ಜನಿಸಿದವರಿಗಿಂತ ಭಾರತದಿಂದ ಅಲ್ಲಿಗೆ ವಲಸೆ ಹೋದವರು ಹೆಚ್ಚು ತಾರತಮ್ಯಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಅಭಿಪ್ರಾಯವಿತ್ತು. ಅಮೆರಿಕದಲ್ಲೇ ಜನಿಸಿದ ಭಾರತೀಯ ಅಮೆರಿಕನ್ನರ ಉಡುಗೆ, ವರ್ತನೆ, ಸಾಮಾಜಿಕ ಜೀವನ ಅಮೆರಿಕದ ಜೀವನಶೈಲಿಗೆ ಹತ್ತಿರವಾಗಿರುತ್ತದೆ. ಹೀಗಾಗಿ ಅವರು ತಾರತಮ್ಯಕ್ಕೆ ಗುರಿಯಾಗುವ ಸಾಧ್ಯತೆ ಕಡಿಮೆ ಎಂದು ಭಾವಿಸಲಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ, ಅಮೆರಿಕದಲ್ಲಿ ಜನಿಸಿದ ಭಾರತೀಯ ಅಮೆರಿಕನ್ನರೇ ಹೆಚ್ಚು ತಾರತಮ್ಯಕ್ಕೆ ಗುರಿಯಾಗುತ್ತಾರೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ' ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

* ಅಮೆರಿಕದಲ್ಲಿ ಜನಿಸಿದ ಭಾರತೀಯ ಅಮೆರಿಕನ್ನರು ಚರ್ಮದ ಬಣ್ಣದ ಕಾರಣಕ್ಕೆ ಹೆಚ್ಚು ತಾರತಮ್ಯವನ್ನು ಎದುರಿಸುತ್ತಾರೆ. ಭಾರತದಿಂದ ವಲಸೆ ಹೋದ ಭಾರತೀಯ ಅಮೆರಿಕನ್ನರು ಎದುರಿಸುವ ಈ ಸ್ವರೂಪದ ತಾರತಮ್ಯದ ಪ್ರಮಾಣ ಕಡಿಮೆ ಇದೆ

* ಭಾರತದಿಂದ ವಲಸೆ ಬಂದ ಭಾರತೀಯ ಅಮೆರಿಕನ್ನರಿಗಿಂತ ಅಮೆರಿಕದಲ್ಲಿ ಜನಿಸಿದ ಭಾರತೀಯ ಅಮೆರಿಕನ್ನರು ಲಿಂಗದ ಕಾರಣಕ್ಕೆ ಎರಡುಪಟ್ಟು ಹೆಚ್ಚು ತಾರತಮ್ಯವನ್ನು ಎದುರಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ

* ಧರ್ಮಾಧಾರಿತ ತಾರತಮ್ಯಕ್ಕೆ ಗುರಿಯಾಗುವ ಭಾರತೀಯ ಅಮೆರಿಕನ್ನರಲ್ಲಿ, ಅಮೆರಿಕದಲ್ಲೇ ಜನಿಸಿದವರು ಹೆಚ್ಚು ಗುರಿಯಾಗುತ್ತೇವೆ ಎಂದು ಹೇಳಿಕೊಂಡಿದ್ದಾರೆ

* ಭಾರತದಲ್ಲಿ ಜನಿಸಿ, ಅಮೆರಿಕಕ್ಕೆ ವಲಸೆ ಹೋಗಿರುವ ಭಾರತೀಯ ಅಮೆರಿಕನ್ನರು ತಮ್ಮ ಜನನದ ಸ್ಥಳದ ಕಾರಣಕ್ಕೆ ಹೆಚ್ಚು ತಾರತಮ್ಯವನ್ನು ಎದುರಿಸಬೇಕಿದೆ. ಅಮೆರಿಕದಲ್ಲೇ ಜನಿಸಿದ ಭಾರತೀಯ ಅಮೆರಿಕನ್ನರೂ ಈ ಕಾರಣಕ್ಕೇ ತಾರತಮ್ಯ ಎದುರಿಸುತ್ತಾರೆ. ಆದರೆ ಸ್ವಲ್ಪ ಕಡಿಮೆ ಅಷ್ಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು