ಮಂಗಳವಾರ, ಜನವರಿ 19, 2021
17 °C

ನ್ಯೂಜಿಲೆಂಡ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಸಂಸದ

ಪಿಟಿಐ Updated:

ಅಕ್ಷರ ಗಾತ್ರ : | |

ಗೌರವ್‌ ಶರ್ಮಾ

ಮೆಲ್ಬರ್ನ್: ನ್ಯೂಜಿಲೆಂಡ್ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಡಾ.ಗೌರವ್ ಶರ್ಮಾ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹಿಮಾಚಲ ಪ್ರದೇಶದ ಹಮಿರ್‌ಪುರ್‌ ಮೂಲದ ಗೌರವ್‌ ಶರ್ಮಾ (33) ನ್ಯೂಜಿಲೆಂಡ್‌ನ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರು. ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್‌ ವೆಸ್ಟ್‌ ಪ್ರಾಂತ್ಯದಿಂದ ಲೇಬರ್‌ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರವ್ ಸಂಸದರಾಗಿ ಆಯ್ಕೆಯಾಗಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಭಾರತದ ರಾಯಭಾರಿಯಾಗಿರುವ ಮುಕ್ತೇಶ್‌ ಪರ್ದೇಶಿ ಬುಧವಾರ ಟ್ವೀಟ್‌ ಮಾಡಿದ್ದು, 'ಗೌರವ್ ಶರ್ಮಾ ಮೊದಲು ನ್ಯೂಜಿಲೆಂಡ್‌ನ ಪ್ರಾದೇಶಿಕ  ಮೌರಿ ಭಾಷೆಯಲ್ಲಿ ಹಾಗೂ ಬಳಿಕ ಭಾರತದ ಶಾಸ್ತ್ರೀಯ ಭಾಷೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ಚೀಕರಿಸಿದರು. ಇದರೊಂದಿಗೆ ಭಾರತ ಮತ್ತು ನ್ಯೂಜಿಲೆಂಡ್‌ ಎರಡೂ ರಾಷ್ಟ್ರಗಳ ಸಾಂಸ್ಕೃತಿಕ ಪಾರಂಪರಗೆ ಗೌರವ ನೀಡಿದರು' ಎಂದಿದ್ದಾರೆ.

ಗೌರವ್ ಆಕ್ಲಾಂಡ್‌ನಲ್ಲಿ ಎಂಬಿಬಿಎಸ್‌ ಹಾಗೂ ವಾಷಿಂಗ್ಟನ್‌ನಲ್ಲಿ ಎಂಬಿಎ ಪೂರೈಸಿದ್ದು, ಹ್ಯಾಮಿಲ್ಟನ್‌ನಲ್ಲಿ ಜನರಲ್‌ ಪ್ರ್ಯಾಕ್ಟೀಷನರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸಾರ್ವಜನಿಕ ಆರೋಗ್ಯ, ನೀತಿ, ಔಷಧಗಳಿಗೆ ಸಂಬಂಧಿಸಿದಂತೆ ಸ್ಪೇನ್‌, ಅಮೆರಿಕ, ನೇಪಾಳ, ವಿಯೆಟ್ನಾಂ, ಮಂಗೋಲಿಯಾ, ಸ್ವಿಡ್ಜರ್ಲೆಂಡ್‌, ಭಾರತ ಹಾಗೂ ನ್ಯೂಜಿಲೆಂಡ್‌ನಲ್ಲಿ ಕಾರ್ಯಾಚರಿಸಿದ್ದಾರೆ.

ಹಿಂದಿಯಲ್ಲಿ ಏಕೆ ಪ್ರಮಾಣ ವಚನ ಸ್ವೀಕರಿಸಲಿಲ್ಲ ಎಂಬ ಟ್ವೀಟಿಗರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಗೌರವ್, 'ಪ್ರಮಾಣಿಕವಾಗಿ ಹೇಳುವುದಾದರೆ ನಾನು ಆ ಬಗ್ಗೆ ಯೋಚಿಸಿಯೇ ಇರಲಿಲ್ಲ, ಆದರೆ ನನ್ನ ಮಾತೃ ಭಾಷೆ ಪಹಾರಿಯಲ್ಲಿ ಅಥವಾ ಪಂಜಾಬಿಯಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುವ ಯೋಚನೆ ಇತ್ತು. ಎಲ್ಲರನ್ನೂ ಸಂತುಷ್ಟಗೊಳಿಸುವುದು ಕಷ್ಟ. ಭಾರತದ ಎಲ್ಲ ಭಾಷೆಗಳಿಗೆ ಮೂಲವಾಗಿರುವ ಸಂಸ್ಕೃತ ಬಳಸುವುದು ಸರಿ ಎಂದು ತೋರಿತು' ಎಂದು ಹೇಳಿದ್ದಾರೆ.

ಗೌರವ್‌ ಶರ್ಮಾ 2017ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.

ಇತ್ತೀಚೆಗಷ್ಟೇ ಪ್ರಿಯಾಂಕಾ ರಾಧಾಕೃಷ್ಣನ್‌ (41) ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂದಾ ಅರ್ಡರ್ನ್ ಅವರ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಅವರು ನ್ಯೂಜಿಲೆಂಡ್‌ ಸಚಿವರಾಗಿರುವ ಮೊದಲ ಭಾರತೀಯ ಮೂಲದ ವ್ಯಕ್ತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು