ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯಾಗಿದೆ ಎಂದು ಸುಳ್ಳು ಹೇಳಿ ಬಾರ್‌ಗೆ ಹೋದ ಭಾರತ ಮೂಲದ ವ್ಯಕ್ತಿಗೆ ಜೈಲು

Last Updated 28 ಏಪ್ರಿಲ್ 2022, 7:36 IST
ಅಕ್ಷರ ಗಾತ್ರ

ಸಿಂಗಾಪುರ: ಭಾರತ ಮೂಲದ ಹಿರಿಯ ನಾಗರಿಕರೊಬ್ಬರು ಕೋವಿಡ್‌ ಲಸಿಕೆ ಪಡೆದಿರುವ ಬಗ್ಗೆ ಸುಳ್ಳು ದಾಖಲೆ ತೋರಿಸಿ ಮದ್ಯದಂಗಡಿ ಪ್ರವೇಶಿಸಿ, ಜೈಲು ಸೇರಿದ ಘಟನೆ ಸಿಂಗಾಪುರದಲ್ಲಿ ವರದಿಯಾಗಿದೆ.

ಕಳೆದ ವರ್ಷ ಕೋವಿಡ್‌-19 ಸೋಂಕು ವಿಪರೀತ ಏರಿಕೆ ಕಂಡುಬಂದ ಸಂದರ್ಭ 65 ವರ್ಷದ ಉದಯಕುಮಾರ್‌ ನಲ್ಲತಂಬಿ ಎಂಬುವವರು ಮತ್ತೊಬ್ಬರ ಲಸಿಕೀಕರಣದ ದಾಖಲೆಯನ್ನು ತೋರಿಸುವ ಮೂಲಕ ಬಾರ್‌ಗೆ ಪ್ರವೇಶ ಪಡೆದಿದ್ದರು ಎಂದು ಬುಧವಾರ 'ದಿ ಸ್ಟ್ರೈಟ್‌ ಟೈಮ್ಸ್‌ ನ್ಯೂಸ್‌ಪೇಪರ್‌' ವರದಿ ಮಾಡಿದೆ.

ಜೊತೆಗೆ ಉದಯಕುಮಾರ್‌ಗೆ ಸಹಾಯ ಮಾಡಿದ ಮತ್ತೊಬ್ಬ ಭಾರತೀಯ ಮೂಲದ ಮಲೇಷಿಯಾದ ಪ್ರಜೆ, 37 ವರ್ಷದ ಕಿರಣ್‌ ಸಿಂಗ್‌ ರಘುಬಿರ್‌ ಸಿಂಗ್‌ ಎಂಬುವವರು ಈಗಾಗಲೇ ಫೆಬ್ರುವರಿ ತಿಂಗಳಲ್ಲಿ 5 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.

'ಟ್ರೇಸ್‌ ಟುಗೆದರ್‌ ಆ್ಯಪ್‌'ನಲ್ಲಿ ಉದಯಕುಮಾರ್‌ ಸುಳ್ಳು ದಾಖಲೆ ತೋರಿಸಿ ಮದ್ಯದಂಗಡಿ ಪ್ರವೇಶಿಸಿರುವುದು ದಾಖಲಾಗಿತ್ತು. ಮದ್ಯದಂಗಡಿ ಪ್ರವೇಶಕ್ಕೆ ಲಸಿಕೀಕರಣ ಕಡ್ಡಾಯವಾಗಿತ್ತು. ತನಿಖೆ ನಡೆದಾಗ ಕಿರಣ್‌ ಸಿಂಗ್‌ ಅವರ ಲಸಿಕೀಕರಣದ ದಾಖಲೆ ತೋರಿಸಿ ಬಾರ್‌ ಪ್ರವೇಶಿಸಿರುವುದು ಖಾತರಿಯಾಗಿತ್ತು.

ನಡೆದಿದ್ದೇನು?
ವಿಚಾರಣೆ ವೇಳೆ ಕಿರಣ್‌ ಸಿಂಗ್‌ ಕೋರ್ಟ್‌ ಮುಂದೆ ಹೇಳಿದ ಸಂಗತಿಯನ್ನು ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶೆನ್‌ ವಾಂಕ್ವಿನ್‌ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಸೆಪ್ಟಂಬರ್‌ 9ರಂದು ಕಿರಣ್‌ ಸಿಂಗ್‌ ಅವರು ತಮ್ಮ ಗೆಳತಿಯೊಂದಿಗೆ ಸೆಂಟೊಸಾದ ಐಲೆಂಡ್‌ ರೆಸಾರ್ಟ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಉದಯಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ನಂತರ 'ಬಿಕಿನಿ ಬಾರ್‌'ಗೆ ಹೋಗಲು ಮೂವರು ನಿರ್ಧರಿಸಿದ್ದಾರೆ. ಆದರೆ ಲಸಿಕೆ ಪಡೆಯದ ಕಾರಣ ಉದಯಕುಮಾರ್‌ ಅವರಿಗೆ ಬಿಕಿನಿ ಬಾರ್‌ನ ಸಹಾಯಕ ಮ್ಯಾನೇಜರ್‌ ಪ್ರವೇಶವನ್ನು ನಿರಾಕರಿಸಿದ್ದಾರೆ.

ಈ ವೇಳೆ ಸಿಂಗ್‌ ಅವರು ತನ್ನ ಟ್ರೇಸ್‌ ಟುಗೆದರ್‌ ಆ್ಯಪ್‌ ಬಳಸಿ ಬಾರ್‌ ಪ್ರವೇಶಿಸುವಂತೆ ಉದಯಕುಮಾರ್‌ ಅವರಿಗೆ ಸಲಹೆ ನೀಡಿದ್ದಾರೆ. ಒಪ್ಪಿದ ಉದಯಕುಮಾರ್‌ ಅವರು ಸಿಂಗ್‌ ಅವರ ಜೊತೆಗಿದ್ದ ಮಹಿಳೆಯ ಜೊತೆ ಬೇರೊಂದು ಬಾರ್‌ಗೆ ಹೋಗಿದ್ದಾರೆ. ಈ ವೇಳೆ ಸಿಂಗ್‌ ಹೊರಗೆ ಕಾದು ನಿಂತಿದ್ದಾರೆ.

ಉದಯಕುಮಾರ್‌ ಅವರು ಮತ್ತೊಂದು ಬಾರ್‌ ಪ್ರವೇಶಿಸಿ ಮದ್ಯ ಹೀರುತ್ತಿರುವ ಬಗ್ಗೆ ಬಿಕಿನಿ ಬಾರ್‌ನ ಸಹಾಯಕ ಮ್ಯಾನೇಜರ್‌ಗೆ ಆ್ಯಪ್‌ ಮೂಲಕ ಮಾಹಿತಿ ಸಿಕ್ಕಿದೆ. ಕೋವಿಡ್‌ ಲಸಿಕೆ ಪಡೆಯದ ಕಾರಣ ಉದಯಕುಮಾರ್‌ ಅವರಿಗೆ ತಮ್ಮ ಬಾರ್‌ನಲ್ಲಿ ಪ್ರವೇಶ ನಿರಾಕರಿಸಿದ್ದ ಮಾಹಿತಿಯನ್ನು ತಕ್ಷಣ ರವಾನಿಸಿದ್ದಾರೆ.

ಈ ಸುಳಿವು ಸಿಗುತ್ತಿದ್ದಂತೆ ಸಿಬ್ಬಂದಿ ಉದಯಕುಮಾರ್‌ ಅವರನ್ನು ಸಂಪರ್ಕಿಸಿದಾಗ ಸಿಂಗ್‌ ಅವರ ಹೆಸರಲ್ಲಿ ಬಾರ್‌ ಪ್ರವೇಶಿಸಿರುವುದು ಖಚಿತವಾಗಿದೆ. ತಕ್ಷಣ ಸೆಂಟೊಸಾ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ಗೆ ದೂರು ನೀಡಿದ್ದಾರೆ.

ಉದಯಕುಮಾರ್‌ ಅವರಿಗೆ ತನ್ನ ಹೆಸರಲ್ಲಿ ಬಾರ್‌ ಪ್ರವೇಶಿಸಲು ಅನುವು ಮಾಡಿಕೊಟ್ಟ ಬಗ್ಗೆ ತಪ್ಪೊಪ್ಪಿಕೊಂಡ ಸಿಂಗ್‌ ಅವರು ಫೆಬ್ರುವರಿ ತಿಂಗಳಲ್ಲಿ 5 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.

ಸಿಂಗಾಪುರದಲ್ಲಿ ಪರರ ಹೆಸರಲ್ಲಿ ವಂಚನೆ ಮಾಡಿದರೆ 5 ವರ್ಷಗಳ ವರೆಗೆ ಜೈಲು ಹಾಗೂ ದಂಡ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT