ಪುಟಿನ್‌ಗೆ ಬಂಧನ ವಾರಂಟ್ ಹೊರಡಿಸಿದ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ

ದಿ ಹೇಗ್: ಯದ್ಧಾಪರಾಧಗಳು ಹಾಗೂ ಉಕ್ರೇನ್ ಮಕ್ಕಳ ಅಪಹರಣ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿರುವುದಾಗಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಶುಕ್ರವಾರ ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಹೊಂದಿರುವ ನಾಯಕರೊಬ್ಬರ ವಿರುದ್ಧ ಜಾಗತಿಕ ನ್ಯಾಯಾಲಯವು ಬಂಧನದ ವಾರಂಟ್ ಹೊರಡಿಸಿದ ಮೊದಲ ಪ್ರಕರಣ ಇದಾಗಿದೆ.
‘ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ಮಕ್ಕಳನ್ನು ಗಡೀಪಾರು ಮಾಡುವ ಹಾಗೂ ಅವರನ್ನು ಕಾನೂನುಬಾಹಿರವಾಗಿ ರಷ್ಯಾ ಒಕ್ಕೂಟಕ್ಕೆ ವರ್ಗಾಯಿಸಿರುವ ಯುದ್ಧಾಪರಾಧಕ್ಕೆ ಪುಟಿನ್ ಕಾರಣ ಎಂದು ಆರೋಪಿಸಲಾಗಿದೆ’ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಐಸಿಸಿಯ ಈ ನಿರ್ಧಾರವನ್ನು ಉಕ್ರೇನ್ ಸ್ವಾಗತಿಸಿದ್ದರೆ, ರಷ್ಯಾ ತೀವ್ರವಾಗಿ ಖಂಡಿಸಿದೆ.
ಆದರೆ, ಐಸಿಸಿ ನ್ಯಾಯಾಲಯದ ಕಾರ್ಯವ್ಯಾಪ್ತಿಗೆ ರಷ್ಯಾ ಮಾನ್ಯತೆ ನೀಡುವುದಿಲ್ಲ ಹೀಗಾಗಿ ಐಸಿಸಿಯಲ್ಲಿ ಪುಟಿನ್ ಅವರು ವಿಚಾರಣೆ ಎದುರಿಸುವ ಸಾಧ್ಯತೆ ತೀರ ಕಡಿಮೆ. ಆದರೆ ಈ ಕಳಂಕ ಅವರಿಗೆ ಜೀವನ ಪೂರ್ತಿ ಅಂಟಿಕೊಂಡಿರುತ್ತದೆ.
ಪುಟಿನ್ ಅವರನ್ನು ಬಂಧಿಸಲು ಬದ್ಧವಾಗಿರುವ ರಾಷ್ಟ್ರಗಳಲ್ಲಿ ನಡೆಯುವ ಅಂತರರಾಷ್ಟ್ರೀಯ ಶೃಂಗಸಭೆಗಳಲ್ಲಿ ಹಾಜರಾದ ಸಂದರ್ಭಗಳಲ್ಲಿಯೂ ಈ ಕಳಂಕ ಅವರನ್ನು ಬಾಧಿಸುತ್ತದೆ.
ಉಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ: ಐಸಿಸಿಯು ಪುಟಿನ್ ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾವು ತನ್ನ ದಾಳಿಯನ್ನು ತೀವ್ರಗೊಳಿಸಿದೆ.
‘ಶುಕ್ರವಾರ ರಾತ್ರಿ ರಷ್ಯಾದ 16 ಡ್ರೋನ್‌ಗಳು ಉಕ್ರೇನ್ ಮೇಲೆ ದಾಳಿ ನಡೆಸಿವೆ’ ಎಂದು ಉಕ್ರೇನ್ ವಾಯುಪಡೆ ಶನಿವಾರ ಬೆಳಿಗ್ಗೆ ಹೇಳಿದೆ.
‘ಕೀವ್, ಲ್ವಿವ್ ಪ್ರಾಂತ್ಯ ಸೇರಿದಂತೆ ಉಕ್ರೇನ್‌ನ ಮಧ್ಯ, ಪಶ್ಚಿಮ ಹಾಗೂ ಪೂರ್ವ ಭಾಗದ ಪ್ರದೇಶಗಳನ್ನು ಗುರಿಯಾಗಿಸಿ 16 ಡ್ರೋನ್ ಮೂಲಕ ರಷ್ಯಾ ದಾಳಿ ನಡೆಸಿತ್ತು. ಇವುಗಳಲ್ಲಿ 11 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ’ ಎಂದು ಉಕ್ರೇನ್ ವಾಯುಪಡೆ ಟೆಲಿಗ್ರಾಂನಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.