ಸೋಮವಾರ, ಆಗಸ್ಟ್ 8, 2022
21 °C

ಜಪಾನ್‌ನ ‘ಟ್ವಿಟರ್‌ ಕಿಲ್ಲರ್‌’ಗೆ ಮರಣ ದಂಡನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಜಪಾನ್‌ನಲ್ಲಿ ‘ಟ್ವಿಟರ್‌ ಕಿಲ್ಲರ್‌’ ಎಂದೇ ಖ್ಯಾತನಾಗಿದ್ದ ಟಕಹಿರೊ ಶಿರೈಸಿ ಎಂಬ ಹಂತಕನಿಗೆ ಇಲ್ಲಿನ ನ್ಯಾಯಾಲಯವು ಮಂಗಳವಾರ ಮರಣದಂಡನೆ ವಿಧಿಸಿದೆ.

ಒಂಬತ್ತು ಮಂದಿಯನ್ನು ಕೊಲೆ ಮಾಡಿದ್ದಲ್ಲದೇ ಅವರ ದೇಹದಿಂದ ಅಂಗಾಂಗಗಳನ್ನು ಬೇರ್ಪಡಿಸಿ ಅವುಗಳನ್ನು ಝಾಮಾದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನ ಶೀತಲೀಕರಣ ಘಟಕದಲ್ಲಿ ಸಂಗ್ರಹಿಸಿಟ್ಟಿರುವುದು ತನಿಖೆಯಿಂದ ಸಾಬೀತಾಗಿತ್ತು. ಇದರ ಆಧಾರದಲ್ಲಿ ಟೋಕಿಯೊ ಜಿಲ್ಲಾ ನ್ಯಾಯಾಲಯದ ಟಚಿಕಾವಾ ಶಾಖೆಯ ನ್ಯಾಯಾಧೀಶ ನೌಕುನಿ ಯಾನೊ ಅವರು ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ್ದಾರೆ.

ಕೊಲೆಗಳನ್ನು ತಾನೇ ಮಾಡಿರುವುದಾಗಿ ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡಿರುವ 30 ವರ್ಷ ವಯಸ್ಸಿನ ಟಕಹಿರೊ, ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದ್ದಾನೆ.

‘ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಅಂತಹವರನ್ನು ಟ್ವಿಟರ್‌ನಲ್ಲಿ ಸಂಪರ್ಕಿಸುತ್ತಿದ್ದ ಟಕಹಿರೊ, ನಿಮ್ಮ ಆಸೆ ಈಡೇರಲು ನಾನು ನೆರವು ನೀಡುತ್ತೇನೆ. ನನ್ನ ಅಪಾರ್ಟ್‌ಮೆಂಟ್‌ಗೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದ. ಮಹಿಳೆ ಹಾಗೂ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆತ ಬಳಿಕ ಇಬ್ಬರನ್ನೂ ಕೊಲೆ ಮಾಡಿದ್ದ. ಇದನ್ನು ನೋಡಿದ್ದ ಮಹಿಳೆಯ ಪ್ರಿಯಕರನನ್ನೂ ಹತ್ಯೆ ಮಾಡಿದ್ದ. 2017ರಲ್ಲಿ ಪೊಲೀಸರು ಆತನನ್ನು ಬಂಧಿಸಿದಾಗ, ಆತನ ಅಪಾರ್ಟ್‌ಮೆಂಟ್‌ನ ಶೀತಲೀಕರಣ ಘಟಕದಲ್ಲಿ ಎಂಟು ಮಹಿಳೆಯರು ಹಾಗೂ ಓರ್ವ ಪುರುಷನ ಮೃತದೇಹವು ಪತ್ತೆಯಾಗಿತ್ತು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಟಕಹಿರೊ, ಟ್ವಿಟರ್‌ನಲ್ಲಿ ‘ಹ್ಯಾಂಗ್‌ ಮ್ಯಾನ್‌’ ಹೆಸರಿನಲ್ಲಿ ಖಾತೆ ತೆರೆದಿದ್ದ’ ಎಂದೂ ಅವರು ಹೇಳಿದ್ದಾರೆ.

‘ನನ್ನ ಕಕ್ಷಿದಾರ ಜನರ ಬಯಕೆಯನ್ನ ಪೂರೈಸಲು ನೆರವಾಗಿದ್ದಾನೆ. ಆತ ಯಾವ ಅಪರಾಧವನ್ನೂ ಮಾಡಿಲ್ಲ’ ಎಂದು ಟಕಹಿರೊ ಪರ ವಕೀಲರು ವಾದಿಸಿದರು.

‘ಟಕಹಿರೊ, ಜನರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಹತ್ಯೆ ಮಾಡಿದ್ದಾನೆ. ಅದನ್ನು ಆತನೇ ಒಪ್ಪಿಕೊಂಡಿದ್ದಾನೆ. ಈ ಕೊಲೆಗಳಿಗೆಲ್ಲ ಆತನೇ ನೇರ ಹೊಣೆ. ಈತನ ಕೃತ್ಯದಿಂದ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅತಿ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗುವ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್‌ ಅಗ್ರಸ್ಥಾನದಲ್ಲಿದೆ. ಕೆಲ ದಿನಗಳಲ್ಲಿ ಕಡಿಮೆಯಾಗಿದ್ದ ಈ ಸಂಖ್ಯೆ ಕೊರೊನಾ ಬಿಕ್ಕಟ್ಟು ಸೃಷ್ಟಿಯಾದ ನಂತರ ಮತ್ತೆ ಏರುಗತಿಯಲ್ಲಿ ಸಾಗಿದೆ ಎಂದು ಹೇಳಲಾಗಿದೆ. ಜಪಾನ್‌ನಲ್ಲಿ ಅಪರಾಧ ಪ್ರಮಾಣವು ಅತಿ ಕಡಿಮೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು