ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಚೆನ್ನೈನಲ್ಲಿ ಅಜ್ಜನೊಂದಿಗೆ ಓಡಾಟ, ತಾಯಿಯ ಇಡ್ಲಿ ಪ್ರೀತಿ'- ಕಮಲಾ ಹ್ಯಾರಿಸ್

ಅಮೆರಿಕ ಚುನಾವಣೆ
Last Updated 16 ಆಗಸ್ಟ್ 2020, 3:58 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ–ಅಮೆರಿಕನ್‌ ಮತ್ತು ಜಮೈಕಾ–ಅಮೆರಿಕನ್‌ ಮಹಿಳೆ, ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ (55) ಅವರು ಚೆನ್ನೈ ದಿನಗಳ ನೆನಪು ಹಂಚಿಕೊಂಡಿದ್ದಾರೆ. ಚೆನ್ನೈನಲ್ಲಿ ಅವರ ಅಜ್ಜನೊಂದಿಗೆ 'ಸುದೀರ್ಘ ನಡಿಗೆ', ಅವರಿಗೆ ಮತ್ತು ಸೋದರಿ ಮಾಯಾಗೆ 'ಅತ್ಯುತ್ತಮ ಇಡ್ಲಿಯ ಪ್ರೀತಿ ತುಂಬುವ' ತಾಯಿಯ ಪ್ರಯತ್ನಗಳನ್ನು ಕಮಲಾ ನೆನಪು ಮಾಡಿಕೊಂಡಿದ್ದಾರೆ.

'ಸೌತ್‌ ಏಷಿಯನ್ಸ್‌ ಆಫ್‌ ಬಿಡನ್‌' ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಕಮಲಾ ಹ್ಯಾರಿಸ್‌, ಭಾರತದ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಇತಿಹಾಸ ಮತ್ತು ಸಂಸ್ಕೃತಿಗಳಿಗಿಂತಲೂ ಹೆಚ್ಚು ಭಾರತ ಮತ್ತು ಅಮೆರಿಕದ ಸಮುದಾಯಗಳು ಬೆರೆತು ಹೋಗಿವೆ ಎಂದಿದ್ದಾರೆ.

'19 ವರ್ಷ ವಯಸ್ಸಿನವರಿದ್ದಾಗ ನನ್ನ ತಾಯಿ ಶ್ಯಾಮಲಾ (ಗೋಪಾಲನ್) ಕ್ಯಾಲಿಫೋರ್ನಿಯಾದಲ್ಲಿ ವಿಮಾನದಿಂದ ಇಳಿದಾಗ ಅವರ ಬಳಿ ಹೆಚ್ಚಿನ ವಸ್ತುಗಳೇನೂ ಇರಲಿಲ್ಲ. ಆದರೆ, ಅವರು ತನ್ನ ಪಾಲಕರಿಂದ ಮನೆಯಲ್ಲಿ ಕಲಿತ ಪಾಠಗಳನ್ನು ಜೊತೆಗೆ ತಂದಿದ್ದರು. ಭಾರತೀಯ ತಮಿಳಿಯನ್‌–ಅಮೆರಿಕನ್‌ ಆದ ನನ್ನ ತಾಯಿ ಕ್ಯಾನ್ಸರ್‌ ಕುರಿತು ಪ್ರಮುಖ ಸಂಶೋಧನೆಗಳನ್ನು ನಡೆಸಿದರು ಹಾಗೂ ಹೋರಾಟಗಾರ್ತಿಯಾದರು. ನನ್ನನ್ನು ಮತ್ತು ಸೋದರಿ ಮಾಯಾಳನ್ನು ಅಮ್ಮ ಭಾರತಕ್ಕೆ ಕರೆದುಕೊಂಡು ಹೋಗಿದ್ದರು. ತಾನು ಬಂದಿದ್ದು ಎಲ್ಲಿಂದ ಎಂದು ಮಕ್ಕಳಿಗೆ ತಿಳಿಯಲಿ ಎಂಬುದು ಅವರ ಬಯಕೆಯಾಗಿತ್ತು' ಎಂದು ಕಮಲಾ ತಾಯಿಯ ನೆನಪುಗಳಿಗೆ ಜಾರಿದ್ದರು.

ಮದ್ರಾಸ್‌ನಲ್ಲಿ ತಮ್ಮ ತಾತನೊಂದಿಗೆ ಬೆಳಿಗ್ಗೆ ದೂರದವರೆಗೂ ನಡೆಯುತ್ತ, ಮಾತನಾಡುತ್ತ ಸಾಗುತ್ತಿದ್ದ ನೆನಪಿನೊಂದಿಗೆ, ಅವರು ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರ ಬಗ್ಗೆ ತಿಳಿಸುತ್ತಿದ್ದುದನ್ನು ಮೆಲುಕು ಹಾಕಿಕೊಂಡಿದ್ದಾರೆ. ನಾಗರಿಕ ಸೇವೆಗಳಲ್ಲಿದ್ದು ನಿವೃತ್ತರಾಗಿದ್ದ ತಾತ ಪಿ.ವಿ.ಗೋಪಾಲನ್‌ ಅವರಿಂದ ಪಡೆದ ತಿಳಿವಳಿಕೆಗಳೂ ಸಹ 'ಇಂದು ನಾನು ಎಲ್ಲಿದ್ದೇನೆ ಏಕೆ ಇದ್ದೇನೆ' ಎಂಬುದಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

'ಪೂರ್ವಜನರು, ತಾನು ಬೆಳೆದ ಸ್ಥಳವನ್ನು ತೋರಿಸುವುದಕ್ಕಾಗಿಯೇ ಅಮ್ಮ ನಮ್ಮನ್ನು ಮದ್ರಾಸ್‌ಗೆ ಕರೆದೊಯ್ಯುತ್ತಿದ್ದರು. ಯಾವಾಗಲೂ ನಮಗೆ ಅತ್ಯುತ್ತಮ ಇಡ್ಲಿ ಬಗೆಗೆ ಪ್ರೀತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಳು' ಎಂದು ಕಮಲಾ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡೆನ್‌ ಇತ್ತೀಚೆಗಷ್ಟೇ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕ್ಯಾಲಿಫೋರ್ನಿಯಾ ಸೆನೆಟರ್‌ ಆಗಿರುವ ಕಮಲಾ ಹ್ಯಾರಿಸ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಕಮಲಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಆ ಸ್ಥಾನಕ್ಕೇರಿದ ಮೊದಲ ಕಪ್ಪು ವರ್ಣೀಯ ಹಾಗೂ ಭಾರತ–ಅಮೆರಿಕನ್‌ ಮಹಿಳೆಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT