ಶುಕ್ರವಾರ, ಆಗಸ್ಟ್ 12, 2022
25 °C
ಎಪ್ಪತ್ತೈದು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವರ್ಚುವಲ್ ಸಭೆ

ಕೋವಿಡ್ ನಡುವೆ ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ಐತಿಹಾಸಿಕ 75ನೇ ವಿಶ್ವಸಂಸ್ಥೆಯ ಮಹಾ ಅಧಿವೇಶನ ಆರಂಭವಾಗಿದ್ದು, ವಿಶ್ವಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿವಿಧ ರಾಷ್ಟ್ರಗಳ ನಾಯಕರು ವರ್ಚುವಲ್‌ ಆಗಿ ಈ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

75ನೇ ವಿಶ್ವಸಂಸ್ಥೆಯ ಮಹಾ ಅಧಿವೇಶನದ ಅಧ್ಯಕ್ಷ ಸ್ಥಾನವನ್ನು ಟರ್ಕಿಷ್ ರಾಯಭಾರಿ ವೋಲ್ಕಾನ್ ಬೋಝ್ಕಿರ್ ಅವರಿಗೆ ವಹಿಸಲಾಗಿದೆ. ಕಳೆದ ಅಧಿವೇಶನದಲ್ಲಿ ಜೈಜೀರಿಯಾದ ತಿಜ್ಜಾನಿ ಮೊಹಮ್ಮದ್‌ ಬಂಡೆ ಅವರು ಅಧ್ಯಕ್ಷರಾಗಿದ್ದರು. 

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣ ವಿಶ್ವದ ಯಾವ ರಾಷ್ಟ್ರದ ನಾಯಕರು, ಸಚಿವರು, ಅಧಿಕಾರಿಗಳು ಈ ಬಾರಿ ಅಧಿವೇಶನಕ್ಕೆ ಹಾಜರಾಗುವುದಿಲ್ಲ. ಎಲ್ಲರೂ ತಾವು ಮಂಡಿಸಬೇಕಾದ ವಿಚಾರವನ್ನು ಅಧಿವೇಶನಕ್ಕೆ ಮುನ್ನವೇ ವಿಡಿಯೊ ರೆಕಾರ್ಡ್‌ ಮಾಡಿ ಕಳುಹಿಸಲಿದ್ದು, ಅವರೆಲ್ಲ ವರ್ಚುವಲ್ ಆಗಿ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥ ಪ್ರಕ್ರಿಯೆ ನಡೆಯುತ್ತಿದೆ.

ವಿಶ್ವಸಂಸ್ಥೆಯ ಮಹಾ ಅಧಿವೇಶನದ ಉದ್ಘಾಟನಾ ದಿನದಂದು ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌,’ಕೊರೊನಾ ಸೋಂಕಿನಿಂದಾಗಿ ವಿಶ್ವಸಂಸ್ಥೆಯ ಇತಿಹಾಸದಲ್ಲೇ ಈ ವರ್ಷ ಮತ್ತಷ್ಟು ಸಂಕಷ್ಟಗಳನ್ನು ಎದುರಿಸಲಿದ್ದೇವೆ. ಆರೋಗ್ಯ ವ್ಯವಸ್ಥೆಗಳನ್ನು ರೂಪಿಸುತ್ತಾ, ಲಸಿಕೆ ಅಭಿವೃದ್ಧಿ, ವಿತರಣೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡುವ ಮೂಲಕ ಎಲ್ಲ ರಾಷ್ಟ್ರಗಳು ತ್ವರಿತಗತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸುವುದನ್ನು ಮುಂದುವರಿಸಬೇಕು’ ಎಂದು ಹೇಳಿದರು. 

’ಏಳು ತಿಂಗಳುಗಳಿಂದ ಕೊರೊನಾ ಸೊಂಕಿನಿಂದ ಬಳಲುತ್ತಿರುವ ಜನರು ಬಹಳ ಕಷ್ಟಪಡುತ್ತಿದ್ದಾರೆ. ಅವರಿಗೆ ಸೇವೆ ಸಲ್ಲಿಸುತ್ತಿರುವ ನಾವು ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಸಂಕಷ್ಟ ಅನುಭವಿಸುತ್ತಿದ್ದೇವೆ. ಕೋವಿಡ್ 19 ಸಾಂಕ್ರಾಮಿಕ ರೋಗ ನಮ್ಮ ಜೀವನ ಮತ್ತು ಸಮುದಾಯಗಳನ್ನು ಛಿದ್ರವಾಗಿಸಿಬಿಟ್ಟಿದೆ. ಹೀಗಾಗಿ ನಾವೆಲ್ಲ ಬಹಳ ಗಂಭೀರವಾದ ಅನಿಶ್ಚತತೆಯೊಂದಿಗೆ ಬದುಕುವಂತಾಗಿದೆ’ ಎಂದು ಗುಟೆರೆಸ್ ಹೇಳಿದರು.

’ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟು ಜನರ ಸಾಮಾಜಿಕ ಮತ್ತು ಆರ್ತಿಕ ಪರಿಣಾಮವನ್ನು ಬೀರಿದೆ. ಪರಿಣಾಮವಾಗಿ ಜಾಗತಿಕವಾಗಿ ಉಂಟಾಗುತ್ತಿರುವ ಸವಾಲುಗಳು ನಮಗೆ ತಿಳಿಯುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ದುರ್ಬಲ ವರ್ಗದವರಿಗೆ ನೆರವಾಗುವಾಗ ಏಕತೆ ಮತ್ತು ಸಮಗ್ರತೆ ಪ್ರದರ್ಶಿಸುವುದೊಂದೇ ನಮಗೆ ಉಳಿದಿರುವ ಭರವಸೆ’ ಎಂದು ಅಭಿಪ್ರಾಯಪಟ್ಟರು.

ಅಧಿವೇಶನದಲ್ಲಿ ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವದ ನೆನಪಿನ ಸಾಮಾನ್ಯ ಸಭೆ ಸೆಪ್ಟೆಂಬರ್ 21 ರಂದು ನಡೆಯಲಿದೆ. ತಾತ್ಕಾಲಿಕ ಪಟ್ಟಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26 ರಂದು  ವಿಡಿಯೊ ರೆಕಾರ್ಡ್ ಮೂಲಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಹಾ ಅಧಿವೇಶನದ ಸಾಮಾನ್ಯ ಚರ್ಚೆ ಸೆ.22 ರಿಂದ 29ರವರೆಗೆ ನಡೆಯಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು