ಸೋಮವಾರ, ಸೆಪ್ಟೆಂಬರ್ 20, 2021
22 °C

ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ ಅಧ್ಯಕ್ಷ ಅಶ್ರಫ್‌ ಘನಿ ಫೇಸ್‌ಬುಕ್‌ ಪೋಸ್ಟ್‌...

ಪ್ರಜಾವಾಣಿ ವೆಬ್‌ಸೈಟ್‌ Updated:

ಅಕ್ಷರ ಗಾತ್ರ : | |

ಕಾಬೂಲ್‌: ಇಡೀ ಅಫ್ಗಾನಿಸ್ತಾನವನ್ನು ಕೈವಶ ಮಾಡಿಕೊಂಡು ಬರುತ್ತಿದ್ದ ತಾಲಿಬಾನಿ ಉಗ್ರ ಪಡೆಗಳು ಭಾನುವಾರ ರಾಜಧಾನಿ ಕಾಬೂಲ್‌ ಸುತ್ತುವರಿಯುತ್ತಲೇ ಅಧ್ಯಕ್ಷ ಆಶ್ರಫ್‌ ಗನಿ ಅವರು ದೇಶದಿಂದ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ.

ಮುಂದೆ ಸಂಭವಿಸಲಿರುವ ರಕ್ತಪಾತವನ್ನು ತಪ್ಪಿಸುವ ಸಲುವಾಗಿ ತಾವು ದೇಶ ತೊರೆಯುತ್ತಿರುವುದಾಗಿ ಅವರು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಗನಿ ಫೇಸ್‌ಬುಕ್‌ ಗೋಡೆಯಿಂದ...

ಇಂದು ನಾನು ಅತ್ಯಂತ ಕಠಿಣ ಆಯ್ಕೆಯನ್ನು ಎದುರಿಸಿದೆ.

ಅರಮನೆಯನ್ನು ಆಕ್ರಮಿಸಲು ಬರುತ್ತಿದ್ದ ತಾಲಿಬಾನ್‌ ಸಶಸ್ತ್ರ ಪಡೆಗಳನ್ನು ನಾನು ಎದುರಿಸಿ ನಿಲ್ಲಬೇಕೋ ಅಥವಾ ಕಳೆದ 20 ವರ್ಷಗಳಿಂದ ಯಾವುದನ್ನು ರಕ್ಷಣೆ ಮಾಡಲು ಮತ್ತು ಪೋಷಿಸಲು ನಾನು ನನ್ನ ಜೀವನವನ್ನು ಮುಡಿಪಾಗಿಟ್ಟೆನೋ ಅದನ್ನು (ಅಫ್ಗಾನಿಸ್ತಾನ) ತೊರೆಯಬೇಕಾದ ಆಯ್ಕೆಯನ್ನು ನಾನು ಎದುರಿಸಬೇಕಾಯಿತು.

ಹಾಗೇ ಬಿಟ್ಟರೆ, ಅಸಂಖ್ಯ ದೇಶಭಕ್ತರು ಹುತಾತ್ಮರಾಗುತ್ತಾರೆ ಮತ್ತು ಕಾಬೂಲ್ ನಗರವು ಹಾಳಾಗುತ್ತದೆ. ಇದರ ಪರಿಣಾಮವಾಗಿ 60 ಲಕ್ಷ ಜನ ಸಂಖ್ಯೆಯ ನಗರದಲ್ಲಿ ದೊಡ್ಡ ದುರಂತ ಸಂಭವಿಸುತ್ತದೆ. ನನ್ನನ್ನು ಪದಚ್ಯುತಗೊಳಿಸಲು ಕಾಬೂಲ್ ಮತ್ತು ಕಾಬೂಲ್ ಷರೀಫ್ ಜನರ ಮೇಲೆ ರಕ್ತಸಿಕ್ತ ದಾಳಿ ನಡೆಸಲು ತಾವು ಸಿದ್ಧ ಎಂದು ತಾಲಿಬಾನ್ ಹೇಳಿದೆ. ಹೀಗಾಗಿ ರಕ್ತಪಾತವನ್ನು ತಡೆಗಟ್ಟಲು, ನಾನು ಹೊರಡಲು ನಿರ್ಧರಿಸಿದೆ.

ತಾಲಿಬಾನಿಯರು ಖಡ್ಗ ಮತ್ತು ಬಂದೂಕುಗಳ ಮೂಲಕ ತೀರ್ಪು ಪಡೆದ್ದಾರೆ. ಈಗ ಅಫ್ಗಾನಿಸ್ತಾನದ ಜನರನ್ನು, ದೇಶದ ಗೌರವ, ಸಂಪತ್ತು ಮತ್ತು ಸ್ವಾಭಿಮಾನ ರಕ್ಷಿಸುವುದು ಅವರ ಕರ್ತವ್ಯವಾಗಿದೆ.

ದೇಶದ ನಾಗರಿಕರಲ್ಲಿ ಭಯ ತುಂಬಿದೆ. ಭವಿಷ್ಯದಲ್ಲಿ ನಂಬಿಕೆ ಇಲ್ಲವಾಗಿದೆ. ಅಫ್ಗಾನಿಸ್ತಾನದ ಎಲ್ಲಾ ಜನರು, ಜನಾಂಗಗಳು, ವಿವಿಧ ಸ್ತರಗಳು, ಸಹೋದರಿಯರು ಮತ್ತು ಮಹಿಳೆಯರಿಗೆ ನ್ಯಾಯವನ್ನು ಒದಗಿಸಲು, ಜನರ ಹೃದಯವನ್ನು ಗೆಲ್ಲಲು ತಾಲಿಬಾನ್ ಸ್ಪಷ್ಟವಾದ ಯೋಜನೆಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ನನ್ನ ಆಲೋಚನೆ, ಕಾರ್ಯಕ್ರಮಗಳಲ್ಲಿ ನಾನು ಯಾವಾಗಲೂ ನನ್ನ ಜನರ ಸೇವೆಯನ್ನು ಮುಂದುವರಿಸುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು