ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌: ಚರ್ಚ್‌ಗೆ ನುಗ್ಗಿ ಮೂವರನ್ನು ಇರಿದು ಕೊಲೆ

ಧಾರ್ಮಿಕ ಉಗ್ರರ ವಿರುದ್ಧ ದಿಟ್ಟ ಹೋರಾಟಕ್ಕೆ ಅಧ್ಯಕ್ಷ ಮ್ಯಾಕ್ರನ್‌ ಕರೆ
Last Updated 30 ಅಕ್ಟೋಬರ್ 2020, 8:34 IST
ಅಕ್ಷರ ಗಾತ್ರ

ನೈಸ್‌ (ಫ್ರಾನ್ಸ್‌): ಇಲ್ಲಿನ ಬೆಸಿಲಿಕಾ ಚರ್ಚ್‌ಗೆ ನುಗ್ಗಿದಟ್ಯುನಿಷಿಯಾದ ವಲಸೆಗಾರನೊಬ್ಬ ಪ್ರಾರ್ಥನಾ ನಿರತರ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಮೂವರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಆರೋಪಿಯನ್ನುಬ್ರಾಹಿಂ ಆವುಯಿಸಾವುಯಿ (21) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಚಾಕು ಹಿಡಿದಿದ್ದ ಬ್ರಾಹಿಂ, 60 ವರ್ಷದ ಮಹಿಳೆಯ ಗಂಟಲನ್ನು ಸೀಳಿ ಕೊಂದಿದ್ದಾನೆ. ಚರ್ಚ್‌ನೊಳಗೇ ಮಹಿಳೆಯ ಶವ ಪತ್ತೆಯಾಗಿದೆ. 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೃತದೇಹವು ಚರ್ಚ್‌ನ ಸಮೀಪದಲ್ಲಿ ಪತ್ತೆಯಾಗಿದ್ದು, ಅವರ ಗಂಟಲನ್ನೂ ಸೀಳಲಾಗಿದೆ. ಆ ವ್ಯಕ್ತಿಯು ಚರ್ಚ್‌ನ ಉದ್ಯೋಗಿಯಾಗಿದ್ದರು ಎಂಬುದು ಗೊತ್ತಾಗಿದೆ.

ಬ್ರೆಜಿಲ್‌ ಮೂಲದ44 ವರ್ಷ ವಯಸ್ಸಿನ ಮಹಿಳೆಯೊಬ್ಬರೂ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಾಣ ಉಳಿಸಿಕೊಳ್ಳಲು ಸಮೀಪದ ರೆಸ್ಟೊರೆಂಟ್‌ವೊಂದರ ಬಳಿ ಓಡಿ ಹೋಗಿದ್ದ ಅವರು ಅಲ್ಲಿಯೇ ಮೃತಪಟ್ಟಿದ್ದಾರೆ.

‘ಕಳೆದ ತಿಂಗಳು ಇಟಲಿಗೆ ಬಂದಿದ್ದ ಆರೋಪಿ ಬ್ರಾಹಿಂ, ಅಲ್ಲಿಂದ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ್ದ. ಆರೋಪಿಯ ಬಳಿ ಇದ್ದ ಬ್ಯಾಗ್‌ನಲ್ಲಿ ಕುರಾನ್ ಗ್ರಂಥ‌ ಹಾಗೂ ಎರಡು ಚಾಕುಗಳು ಪತ್ತೆಯಾಗಿವೆ. ಪೊಲೀಸರು ಆತನನ್ನು ಬಂಧಿಸಲು ಮುಂದಾದಾಗ ‘ಅಲ್ಲಾಹು ಅಕ್ಬರ್‌’ ಎಂಬ ಕೂಗುತ್ತಿದ್ದ’ ಎಂದು ಫ್ರಾನ್ಸ್‌ನ ಆಂಟಿ ಟೆರರ್‌ ಪ್ರಾಸಿಕ್ಯೂಟರ್‌ ಜೀನ್‌ ಫ್ರಾಂಕೊಯಿಸ್‌ ರಿಕಾರ್ಡ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ‘ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸುವಾಗಲೂ ಆತ ‘ಅಲ್ಲಾಹು ಅಕ್ಬರ್‌’ ಎಂದು ಕೂಗುತ್ತಲೇ ಇದ್ದ’ ಎಂದು ನೈಸ್‌ನ ಮೇಯರ್‌ ಕ್ರಿಸ್ಟಿಯನ್‌ ಎಸ್ಟ್ರೋಸಿ‌ ತಿಳಿಸಿದ್ದಾರೆ.

‘ಆಗ ಬೆಳಿಗ್ಗೆ 9 ಗಂಟೆ ಇರಬಹುದು. ಚರ್ಚ್‌ನಲ್ಲಿದ್ದವರೆಲ್ಲಾ ದಿಕ್ಕೆಟ್ಟು ಓಡುತ್ತಿದ್ದರು. ನಮ್ಮ ರೆಸ್ಟೊರೆಂಟ್‌ ಬಳಿ ಬಂದ ಮಹಿಳೆಯೊಬ್ಬರು ನನ್ನನ್ನು ಕಂಡೊಡನೆಯೇ ಇಲ್ಲಿ ನಿಲ್ಲಬೇಡಓಡು.. ಓಡು.. ಎಂದರು. ಚರ್ಚ್‌ನೊಳಗೆ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರನ್ನು ಇರಿದು ಕೊಲ್ಲುತ್ತಿದ್ದಾನೆ ಎಂದೂ ಕೂಗಿದರು’ ಎಂದು ಗ್ರ್ಯಾಂಡ್‌ ಕೇಫ್‌ ಡಿ ಲಿಯನ್‌ನ ಮಾಣಿ (ವೇಟರ್‌) ಡೇನಿಯಲ್‌ ಕೊನಿಲ್ಹ್‌ ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತ ತರಗತಿಯೊಂದರ ವೇಳೆ ಪ್ರವಾದಿ ಮೊಹಮ್ಮದ್‌ರ ವ್ಯಂಗ್ಯಚಿತ್ರ ಬಳಸಿದ ಕಾರಣಕ್ಕೆ ಇತಿಹಾಸ ಶಿಕ್ಷಕ ಸ್ಯಾಮುಯೆಲ್‌ ಪ್ಯಾಟಿ ಎಂಬುವವರನ್ನುಅ.16ರಂದು ಹತ್ಯೆ ಮಾಡಲಾಗಿತ್ತು. ಪ್ಯಾಟಿ ಅವರು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರುಪ್ಯಾಟಿಗೆ ಗೌರವ ಸಲ್ಲಿಸಿದ್ದರು. ಮೃತ ಶಿಕ್ಷಕ ವೀರ ಯೋಧರಾಗಿದ್ದರು ಎಂದೂ ಬಣ್ಣಿಸಿದ್ದರು.

ಪಾಕಿಸ್ತಾನ, ಟರ್ಕಿ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ಮ್ಯಾಕ್ರನ್‌ ನಡೆಯನ್ನು ಖಂಡಿಸಿದ್ದವು. ಫ್ರಾನ್ಸ್‌ನ ಉತ್ಪನ್ನಗಳ ಮೇಲೆ ನಿರ್ಬಂಧ ವಿಧಿಸುವ ಬೆದರಿಕೆಯನ್ನೂ ಹಾಕಿದ್ದವು.

ಇದು ಧಾರ್ಮಿಕ ಉಗ್ರಗಾಮಿಗಳ ಕೃತ್ಯ: ‘ಇದು ಧಾರ್ಮಿಕ ಉಗ್ರಗಾಮಿಗಳ ಕೃತ್ಯ. ಇದನ್ನು ನಾವು ಸಹಿಸುವುದಿಲ್ಲ. ಧಾರ್ಮಿಕ ಉಗ್ರಗಾಮಿ ಚಟುವಟಿಕೆಯನ್ನು ಮಟ್ಟಹಾಕಲು ನಾವೆಲ್ಲ ಒಟ್ಟಾಗಿ ಹೋರಾಡಬೇಕು’ ಎಂದುಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ತಿಳಿಸಿದ್ದಾರೆ.

‘ನಮ್ಮ ಮೌಲ್ಯವನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ಘಟನೆಯ ನಂತರ ನೈಸ್‌ನಲ್ಲಿರುವ ಎಲ್ಲಾ ಚರ್ಚ್‌ಗಳಿಗೂ ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶಾಲೆಗಳಲ್ಲಿ ಭದ್ರತೆ ಹೆಚ್ಚಿಸುವಂತೆಯೂ ಆದೇಶಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಧರ್ಮ ವಿರೋಧಿಗಳ ವಿರುದ್ಧ ಸಿಡಿದೇಳುವ ಹಾಗೂ ಫ್ರಾನ್ಸ್‌ನ ಲಕ್ಷಾಂತರ ಜನರನ್ನು ಹತ್ಯೆಮಾಡುವ ಹಕ್ಕು ಮತ್ತು ಶಕ್ತಿ ಮುಸ್ಲಿಂ ಸಮುದಾಯದವರಿಗೆ ಇದೆ’ ಎಂದು ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್‌ ಮೊಹಮ್ಮದ್‌, ಗುರುವಾರ ಟ್ವೀಟ್‌ ಮಾಡಿದ್ದರು. ಈ ವಿವಾದಾತ್ಮಕ ಟ್ವೀಟ್‌ ಅನ್ನು ಟ್ವಿಟರ್‌ನಿಂದ ತೆಗೆದುಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT