ಸೋಮವಾರ, ಅಕ್ಟೋಬರ್ 25, 2021
26 °C

ನ್ಯೂಯಾರ್ಕ್‌: ಗಗನಚುಂಬಿ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಅಸುನೀಗುತ್ತಿರುವ ಹಕ್ಕಿಗಳು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Twitter/@Melissa Breyer

ನ್ಯೂಯಾರ್ಕ್‌: ಆಕಾಶದೆತ್ತರಕ್ಕೆ ಏರಿದ ಗಾಜಿನ ಹೊದಿಕೆಯ ಕಟ್ಟಡಗಳಿಗೆ ವಲಸಿಗ ಪಕ್ಷಿಗಳು ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸಾಯುತ್ತಿರುವ ಪ್ರಕರಣಗಳು ನ್ಯೂಯಾರ್ಕ್‌ ನಗರದಲ್ಲಿ ಹೆಚ್ಚಾಗಿದ್ದು, ಪಕ್ಷಿ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ. ಸತ್ತುಬಿದ್ದಿರುವ ಪಕ್ಷಿಗಳ ಫೋಟೊಗಳು ಮನಕಲಕುವಂತಿವೆ.

ಕಳೆದ ಸೋಮವಾರ ಮತ್ತು ಮಂಗಳವಾರ ವಿಶ್ವ ವ್ಯಾಪಾರ ಕೇಂದ್ರದ ಕಟ್ಟಡಕ್ಕೆ ಡಿಕ್ಕಿ ಹೊಡೆದು ನೂರಾರು ಸಾಂಗ್‌ಬರ್ಡ್‌ಗಳು ಮೃತ ಪಟ್ಟಿವೆ ಎಂದು ಸಾಂಗ್‌ಬರ್ಡ್‌ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಮೆಲಿಸ್ಸಾ ಬ್ರೆಯರ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.


ಸಾಂಗ್‌ಬರ್ಡ್‌ ಹಕ್ಕಿ (ಚಿತ್ರ: ಟ್ವಿಟರ್ @kait_lorraine)

'ನ್ಯೂಯಾರ್ಕ್‌ ಸಿಟಿಯ ಅಡುಬನ್‌ ಕಟ್ಟಡದ ಗಾಜಿನ ಕಿಟಕಿಗಳಿಗೆ ಡಿಕ್ಕಿಯಾಗಿ ಅಸುನೀಗಿದ ಸುಮಾರು 226 ವಲಸಿಗ ಹಕ್ಕಿಗಳ ಮೃತ ದೇಹ ಸಂಗ್ರಹಿಸಿದ್ದೇನೆ. ವಿಶ್ವ ವ್ಯಾಪಾರ ಕೇಂದ್ರದ ಕಟ್ಟಡಕ್ಕೆ ಬಡಿದು ಸುಮಾರು 205 ಪಕ್ಷಿಗಳು ಮೃತಪಟ್ಟಿವೆ. ಇನ್ನೂ ಹೆಚ್ಚಿನ ಸಂಖ್ಯೆಯ ಹಕ್ಕಿಗಳು ಮೃತಪಟ್ಟಿರುವ ಸಾಧ್ಯತೆ ಇದೆ. ಆದರೆ ಎಲ್ಲವನ್ನು ನನಗೆ ಸಂಗ್ರಹಿಸಲು ಸಾಧ್ಯವಾಗಿಲ್ಲ' ಎಂದು ಮೆಲಿಸ್ಸಾ ಬ್ರೆಯರ್‌ ಟ್ವೀಟ್‌ ಮಾಡಿದ್ದಾರೆ.

ವರ್ಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಕ್ಕೆ ಡಿಕ್ಕಿ ಹೊಡೆದು ಸತ್ತು ಬಿದ್ದಿರುವ ಪುಟಾಣಿ ಸಾಂಗ್‌ಬರ್ಡ್‌ ಹಕ್ಕಿಗಳ ಮೃತದೇಹವನ್ನು ಸಂಗ್ರಹಿಸುತ್ತಿರುವ ವಿಡಿಯೊವನ್ನು ಮೆಲಿಸ್ಸಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಹತಾಶ ಭಾವವನ್ನು ಮೂಡಿಸುತ್ತಿದೆ. 'ಪಕ್ಷಿಗಳು ವಲಸೆ ಹೋಗುವ ಸಂದರ್ಭ ವಿದ್ಯುತ್‌ ದೀಪಗಳನ್ನು ಆರಿಸಬಹುದೇ?' ಎಂದು ಮೆಲಿಸ್ಸಾ ಕಳಕಳಿಯ ವಿನಂತಿಯನ್ನು ಮಾಡಿದ್ದಾರೆ.

ವೈಲ್ಡ್‌ ಬರ್ಡ್‌ ಫಂಡ್‌ಗೆ ಗಾಯಗೊಂಡ ಹಕ್ಕಿಗಳನ್ನು ಚಿಕಿತ್ಸೆಗಾಗಿ ಅವರು ಕಳುಹಿಸುತ್ತಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಕೆಳಗೆ ಬಿದ್ದಿರಬಹುದಾದ ಪುಟ್ಟ ಹಕ್ಕಿಗಳ ಬಗ್ಗೆ ಜಾಗ್ರತೆ ವಹಿಸಿ ಎಂದು ನ್ಯೂಯಾರ್ಕ್‌ ಸಿಟಿಯ ಪ್ರಜೆಗಳಿಗೆ ಮೆಲಿಸ್ಸಾ ವಿನಂತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು