ಪೆಗಾಸಸ್‌ನಿಂದ ಲಕ್ಷಾಂತರ ಮಂದಿ ನಿರಾಳರಾಗಿ ನಿದ್ರಿಸುತ್ತಿದ್ದಾರೆ: ಎನ್ಎಸ್ಒ

ಜೆರುಸಲೆಂ: ಪೆಗಾಸಸ್ ಎಂಬ ಕುತಂತ್ರಾಂಶದ (ಮಾಲ್‌ವೇರ್) ಮೂಲಕ ಭಾರತದ ಹಲವು ಪ್ರಮುಖ ವ್ಯಕ್ತಿಗಳ ಮೇಲೆ ಗೂಢಚರ್ಯೆ ನಡೆಸಲು ಯತ್ನಿಸಿದ ಬಗ್ಗೆ ಸಾಕಷ್ಟು ವಿವಾದ ನಡೆಯುತ್ತಿರುವ ಸಂದರ್ಭದಲ್ಲೇ, ಪೆಗಾಸಸ್‌ನಿಂದ ಲಕ್ಷಾಂತರ ಮಂದಿ ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತಿದ್ದಾರೆ ಎಂದು ಇಸ್ರೇಲ್‌ನ ಎನ್‌ಎಸ್‍ಒ ಗ್ರೂಪ್ ಹೇಳಿಕೊಂಡಿದೆ.
ಗುಪ್ತಚರ ಇಲಾಖೆ ಮತ್ತು ಕಾನೂನು ಜಾರಿ ಸಂಸ್ಥೆಗಳ ಬಳಿ ಪೆಗಾಸಸ್‌ನಂತಹ ತಂತ್ರಜ್ಞಾನ ಇರುವುದರಿಂದ ಲಕ್ಷಾಂತರ ಮಂದಿ ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತಾರೆ. ಬೀದಿಯಲ್ಲಿ ಸುರಕ್ಷಿತವಾಗಿ ಸಂಚಾರ ಮಾಡುತ್ತಾರೆ. ಇದಕ್ಕಾಗಿ ಪೆಗಾಸಸ್‌ಗೆ ಧನ್ಯವಾದ ಹೇಳಬೇಕು. ವಿಶ್ವದಲ್ಲಿ ಅಪರಾಧ, ಭಯೋತ್ಪಾದನೆ ತಡೆ ನಿಟ್ಟಿನಲ್ಲಿ ಹಾಗೂ ತನಿಖೆ ನಡೆಸಲು ಇದರಿಂದ ಸಾಧ್ಯವಾಗುತ್ತಿದೆ ಎಂದು ಎನ್‌ಎಸ್‌ಒ ಗ್ರೂಪ್ ಸಮಜಾಯಿಷಿ ನೀಡಿದೆ.
ಈ ತಂತ್ರಜ್ಞಾನದ ನಿರ್ವಹಣೆಯನ್ನು ನಾವು ಮಾಡುವುದಿಲ್ಲ. ಗ್ರಾಹಕರು ಗೂಢಚರ್ಯೆ ಮೂಲಕ ಕಲೆ ಹಾಕುವ ಯಾವುದೇ ಮಾಹಿತಿಯೂ ನಮಗೆ ಸಿಗುವುದಿಲ್ಲ. ವಿಶ್ವದ ಸುರಕ್ಷತೆಗೆ ನಮ್ಮಿಂದ ಸಾಧ್ಯವಾದ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಎನ್‌ಎಸ್‌ಒ 'ಪಿಟಿಐ'ಗೆ ತಿಳಿಸಿದೆ.
ಕೇರಳದ ಕಡಲಲ್ಲಿ ಭೂಮಿಯ ಅತಿದೊಡ್ಡ ಪ್ರಾಣಿ ನೀಲಿ ತಿಮಿಂಗಿಲ!
ಗೂಢಚರ್ಯೆ ನಡೆಸಲು ಗ್ರಾಹಕರಿಗೆ ಪೆಗಾಸಸ್ ಕುತಂತ್ರಾಂಶವನ್ನು ನೀಡುವ ಬಗ್ಗೆ ಬಹಿರಂಗವಾಗೇ ತಿಳಿಸುತ್ತಿರುವ ಎನ್‌ಎಸ್‌ಒ ತನ್ನ ಗ್ರಾಹಕರು ಯಾರು ಎಂಬುದನ್ನು ಮಾತ್ರ ಬಯಲು ಮಾಡಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭ ಅಂದಿನ ಸಿಎಂ ಎಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಫೋನ್‌ಗಳು ಪೆಗಾಸಸ್ ಸಹಾಯದಿಂದ ಕದ್ದಾಲಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹಾಗೂ ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಹೆಸರು ಗೂಢಚರ್ಯೆಗೆ ಒಳಗಾದವರ ಪಟ್ಟಿಯಲ್ಲಿ ಸೇರಿದೆ. ವಿರೋಧ ಪಕ್ಷಗಳಿಗೆ ಚುನಾವಣಾ ಕಾರ್ಯತಂತ್ರ ನಿಪುಣನಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಕಿಶೋರ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. 2019ರ ಚುನಾವಣೆಗೂ ಮೊದಲು ಮತ್ತು ನಂತರ ಇವರ ಮೇಲೆ ಕಣ್ಗಾವಲು ನಡೆಸಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.