ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ: ಹಿಂದೂ ದೇವಾಲಯಗಳು, ಅಲ್ಪಸಂಖ್ಯಾತರ ಮನೆಗಳ ಮೇಲೆ ದಾಳಿ; 10ಮಂದಿ ಬಂಧನ

Last Updated 9 ಆಗಸ್ಟ್ 2021, 6:37 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಹಿಂದೂ ದೇವಾಲಯಗಳು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮನೆಗಳು ಹಾಗೂ ಅಂಗಡಿಗಳ ಮೇಲೆ ದುರ್ಷ್ಕಮಿಗಳು ದಾಳಿ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್‌ ವರದಿ ಮಾಡಿದೆ.

‘ಈ ಘಟನೆಯು ರೂಪ್ಶಾ ಉಪಜಿಲಾದ ಶಿಯಾಲಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಹಿಂದೂ ಮತ್ತು ಮುಸ್ಲಿಂ ನಿವಾಸಿಗಳ ನಡುವೆ ಶುಕ್ರವಾರ ರಾತ್ರಿ ತೀವ್ರ ವಾಗ್ವಾದ ನಡೆದಿತ್ತು. ಇದರ ಬೆನ್ನಲ್ಲೇ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ವರದಿ ಹೇಳಿದೆ.

‘ಕಿಡಿಗೇಡಿಗಳು ಮೊದಲು ಶಿಯಾಲಿ ಮಹಾಸ್ಮಶಾನ್‌ ದೇವಾಲಯಕ್ಕೆ ದಾಳಿ ನಡೆಸಿದರು. ಬಳಿಕ ಶಿಯಾಲಿ ಪುರ್ಬಪರ ಪ್ರದೇಶದಲ್ಲಿರುವ ಹರಿ ಮಂದಿರ, ದುರ್ಗಾ ಮಂದಿರ, ಗೋವಿಂದ ಮಂದಿರಗಳ ದೇವರ ಪ್ರತಿಮೆಗಳನ್ನು ವಿರೂಪಗಳಿಸಿದ್ದಾರೆ. ಹಿಂದೂ ಸಮುದಾಯಕ್ಕೆ ಸೇರಿದವರ ಆರು ಅಂಗಡಿಗಳು ಮತ್ತು ಎರಡು ಮನೆಗಳಿಗೂ ಹಾನಿಯುಂಟು ಮಾಡಿದ್ದಾರೆ’ ಎಂದು ವರದಿ ತಿಳಿಸಿದೆ.

‘ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚುವರಿ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ’ ಎಂದು ರೂಪ್ಶಾ ಪೊಲೀಸ್‌ ಠಾಣೆಯ ಅಧಿಕಾರಿ ಸರ್ದಾರ್‌ ಮುಶ್ರಫ್ ಹೊಸೈನ್‌ ತಿಳಿಸಿದರು.

‘ನಾಲ್ಕು ದೇವಾಲಯಗಳಲ್ಲಿ ಕನಿಷ್ಠ 10 ಪ್ರತಿಮೆಗಳನ್ನು ವಿರೂಪಗೊಳಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶೇಖಪುರ, ಬಮಂಡಂಗ ಮತ್ತು ಚಂದಪುರದ ಪ್ರದೇಶದ ನಿವಾಸಿಗಳು ಈ ದಾಳಿ ನಡೆಸಿದ್ದಾರೆ ಎಂಬುದಾಗಿ ಸ್ಥಳೀಯರು ಹೇಳಿದ್ಧಾರೆ. ಆದರೆ ಅವರ ಗುರುತನ್ನು ದೃಢೀಕರಿಸಲು ಸಾಧ್ಯವಾಗಿಲ್ಲ.

ಮುಸ್ಲಿಂರ ಪ್ರಾರ್ಥನಾ ಅವಧಿಯಲ್ಲಿ ಹಿಂದೂ ಸಮುದಾಯದವರು ದೇವಾಲಯಕ್ಕೆ ಭಜನೆಗಳನ್ನು ಹಾಡುತ್ತಾ ಹೋಗುತ್ತಿದ್ದರು. ಇದರಿಂದಾಗಿ ಎರಡೂ ಸಮುದಾಯದ ನಡುವೆ ವಾಗ್ವಾದ ನಡೆದಿದೆ. ಆದರೆ ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT