ಮಂಗಳವಾರ, ಡಿಸೆಂಬರ್ 7, 2021
23 °C

ಅಫ್ಗಾನಿಸ್ತಾನದಲ್ಲಿ ಲಕ್ಷಾಂತರ ಮಂದಿ ಹಸಿವಿನಿಂದ ಸಾಯುವ ಸಾಧ್ಯತೆ– ವಿಶ್ವಸಂಸ್ಥೆ

ಎಎಫ್‌ಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್: ವಿಶ್ವದಲ್ಲೇ ಅತ್ಯಂತ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಅಫ್ಗಾನಿಸ್ತಾನದಲ್ಲಿ ಈ ಚಳಿಗಾಲದ ಹೊತ್ತಿಗೆ ಅಲ್ಲಿನ 2.2 ಕೋಟಿಗೂ ಹೆಚ್ಚು ಮಂದಿ ತೀವ್ರ ಆಹಾರ ಸಮಸ್ಯೆ ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್‌ ಬೀಸ್ಲೆ ಎಚ್ಚರಿಸಿದ್ದಾರೆ.

ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಈಗಾಗಲೇ ಯೆಮೆನ್ ಅಥವಾ ಸಿರಿಯಾ ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟಿಗಿಂತ ದೊಡ್ಡ ಬಿಕ್ಕಟ್ಟು ಅಫ್ಗನ್‌ನಲ್ಲಿ ಎದುರಾಗಿದೆ. ಕಾಂಗೋದಲ್ಲಿ ಎದುರಾಗಿರುವ ಆಹಾರ ಭದ್ರತೆಯ ಬಿಕ್ಕಟ್ಟಿಗಿಂತಲೂ ಭೀಕರ ಪರಿಸ್ಥಿತಿ ಅಫ್ಗನ್‌ನಲ್ಲಿ ನಿರ್ಮಾಣವಾಗಿದೆ’ ಎಂದು ಹೇಳಿದ್ದಾರೆ.

‘ವಿಶ್ವದಾದ್ಯಂತ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ರಾಷ್ಟ್ರಗಳ ಪೈಕಿ ಅಫ್ಗಾನಿಸ್ತಾನವೂ ಒಂದು. ಅಲ್ಲಿ ಮಾನವೀಯ ಬಿಕ್ಕಟ್ಟು ಕೆಟ್ಟದಾಗಿದೆ ಎನ್ನುವುದಕ್ಕಿಂತ ಆಹಾರ ಅಭದ್ರತೆ ತೀವ್ರವಾಗುತ್ತಿದೆ ಎಂದು ಹೇಳಬಹುದು‘ ಎಂದು ಬೀಸ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದುಬೈನಲ್ಲಿ ರಾಯಿಟರ್ಸ್‌ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬೀಸ್ಲೆ, ‘ಅಫ್ಗಾನಿಸ್ತಾನದಲ್ಲಿ ಉಂಟಾಗುತ್ತಿರುವ ಆಹಾರ ಕೊರತೆ ಕುರಿತು ತುರ್ತು ಕೈಗೊಳ್ಳದಿದ್ದರೆ, ಆ ದೇಶದಲ್ಲಿ ಮಕ್ಕಳು ಸೇರಿದಂತೆ ಲಕ್ಷಾಂತರ ಪ್ರಜೆಗಳು ಹಸಿವಿನಿಂದ ಸಾಯುವ ಸಾಧ್ಯತೆ ಇದೆ‘ ಎಂದು ಎಚ್ಚರಿಸಿದ್ದಾರೆ.

‘ಅಫ್ಗಾನಿಸ್ತಾನದಲ್ಲಿರುವ ಒಟ್ಟು 3.9 ಕೋಟಿ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು, ಅಂದರೆ 2.2 ಕೋಟಿಯಷ್ಟು ಜನರು ತೀವ್ರ ಆಹಾರ ಅಭದ್ರತೆ ಎದುರಿಸುತ್ತಿದ್ದು, ಕಳೆದ ಎರಡು ತಿಂಗಳಿನಿಂದ 1.4 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ’ ಎಂದು ಹೇಳಿದರು. ‘ಮಕ್ಕಳು ಸಾಯುತ್ತಾರೆ. ಜನರು ಹಸಿವಿನಿಂದ ಬಳಲುತ್ತಾರೆ. ದೇಶದಲ್ಲಿ ಪರಿಸ್ಥಿತಿ ತೀರ ಹದಗೆಡುತ್ತದೆ‘ ಎಂದು ಬೀಸ್ಲೆ ಆತಂಕ ವ್ಯಕ್ತಪಡಿಸಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ಆಗಸ್ಟ್‌ ತಿಂಗಳಲ್ಲಿ ತಾಲಿಬಾನ್ ಅಫ್ಗಾನಿಸ್ತಾನವನ್ನು ವಶಪಡಿಸಿಕೊಳ್ಳವ ಮೊದಲೇ ಆಹಾರದ ಬಿಕ್ಕಟ್ಟು ಉಲ್ಬಣಗೊಂಡಿತ್ತು. ತಾಲಿಬಾನ್‌ ಆಡಳಿತವನ್ನು ವಿಶ್ವ ಸಮುದಾಯ ಒಪ್ಪಿಕೊಂಡಿಲ್ಲ. ಹೀಗಾಗಿ ಮಾನವೀಯ ನೆರವು ಸಹ ಅಲ್ಲಿಗೆ ಅಷ್ಟು ಸುಲಭವಾಗಿ ದೊರಕದು ಎಂದು ಹೇಳಲಾಗುತ್ತಿದೆ. ಹೀಗಾಗಿ ಜನರು ಹಸಿವಿನಿಂದ ಸಾಯುವ ಅಪಾಯ ಇದ್ದು, ಜಾಗತಿಕ ಸಮುದಾಯ ತುರ್ತಾಗಿ ನೆರವಿಗೆ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು