ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಲೆಕ್ಕಿಸದೇ ತೈವಾನ್‌ ತಲುಪಿದ ಪೆಲೋಸಿ

Last Updated 2 ಆಗಸ್ಟ್ 2022, 20:52 IST
ಅಕ್ಷರ ಗಾತ್ರ

ತೈಪೆ:ಚೀನಾ ತನ್ನದೆಂದು ವಾದಿಸುತ್ತಿರುವ ಸ್ವತಂತ್ರ ದ್ವೀಪ ರಾಷ್ಟ್ರ ತೈವಾನ್‌ ರಾಜ ಧಾನಿ ತೈಪೆಗೆ ಅಮೆರಿಕ ಸಂಸತ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ಮಂಗಳವಾರ ಅಧಿಕೃತ ಭೇಟಿ ನೀಡಿದ್ದು ನಿರೀಕ್ಷೆಯಂತೆಯೇ ತೈವಾನ್‌– ಚೀನಾ ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದೆ.

ಪೆಲೋಸಿ ಅವರ ಭೇಟಿಗೆ ಚೀನಾ ವ್ಯಗ್ರಗೊಂಡಿದ್ದು, ಚೀನಾದ ಯುದ್ಧ ವಿಮಾನಗಳು ತೈವಾನ್ ಜಲಸಂಧಿ ಬಳಿ ವಾಯು ಗಡಿ ದಾಟಿ ಹಾರಾಟ ನಡೆಸಿವೆ. ಜಲಸಂಧಿಯ ಬಳಿ ಸಮುದ್ರದಲ್ಲಿ ಚೀನಾದ ಹಲವು ಯುದ್ಧನೌಕೆಗಳೂ ಬೀಡುಬಿಟ್ಟಿವೆ. ಸೇನಾ ತಾಲೀಮು, ಕ್ಷಿಪಣಿ ಪ್ರಯೋಗ ನಡೆಸುವುದಾಗಿ ಘೋಷಿಸಿದೆ. ಯಾವುದೇ ಕ್ಷಣದಲ್ಲಿ ಡ್ರ್ಯಾಗನ್‌ ಪಡೆ ದ್ವೀಪ ರಾಷ್ಟ್ರದ ಮೇಲೆ ಮುಗಿಬೀಳುವ ಬೆದರಿಕೆ ಇದೆ.

‘ಪೆಲೋಸಿ ಅವರು ತೈಪೆಗೆ ಬಂದಿಳಿಯುವುದಕ್ಕೂ ಮುನ್ನ, ತೈವಾನ್‌ ವಾಯುಪ್ರದೇಶದ ಗಡಿಯಲ್ಲಿ ಚೀನಿ ಯುದ್ಧ ವಿಮಾನಗಳ ಹಾರಾಟ, ಭೂ ಗಡಿಯಲ್ಲಿ ಸೇನಾ ಟ್ಯಾಂಕ್‌ಗಳ ಓಡಾಟ ದಿನವಿಡೀ ಕಂಡುಬಂತು.ಚೀನಾ ಸೇನೆಯ ಚಲನವಲನ ಅತ್ಯಂತ ಅಸಹಜ ಮತ್ತು ಪ್ರಚೋದನಕಾರಿಯೂ ಆಗಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ತೈವಾನ್ ಸೇನೆ ಕೂಡ ತನ್ನ ಯುದ್ಧ ವಿಮಾನಗಳನ್ನು ಪ್ರತಿ ದಾಳಿಗೆ ಸನ್ನದ್ಧವಾಗಿರಿಸಿದೆ ಎಂದು ಮೂಲಗಳು ಹೇಳಿವೆ. ‘ಯಾವುದೇ ಶತ್ರುವಿನಿಂದ ಅಪಾಯ ಕಂಡುಬಂದರೆ, ಅದಕ್ಕೆ ತಕ್ಕ ಉತ್ತರ ನೀಡಲು ಸೇನೆಸಂಪೂರ್ಣ ಸನ್ನದ್ಧವಾಗಿದೆ’ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿದೆ.

ಅಪರಿಚಿತ ಹ್ಯಾಕರ್‌ಗಳಿಂದ ತೈವಾನ್‌ ಮೇಲೆ ಸೈಬರ್‌ ದಾಳಿ ನಡೆದಿದ್ದು, ತೈವಾನ್‌ ಅಧ್ಯಕ್ಷರ ಕಚೇರಿಯ ವೆಬ್‌ಸೈಟ್‌ ಸೈಬರ್‌ ದಾಳಿಗೆ ತುತ್ತಾಗಿದೆ. ಮಂಗಳವಾರ ಸಂಜೆ ಈ ವೆಬ್‌ಸೈಟ್‌ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ನಾಗರಿಕ ಯುದ್ಧದಿಂದಾಗಿ 1949ರಲ್ಲಿ ಚೀನಾದಿಂದ ತೈವಾನ್‌ ಬೇರ್ಪಟ್ಟು ಸ್ವತಂತ್ರ ಆಡಳಿತ ನಡೆಸುತ್ತಿದೆ. ಅಮೆರಿಕ ಜತೆಗೆ ರಕ್ಷಣಾ ಸಹಕಾರ ಸಂಬಂಧ ಹೊಂದಿದೆ.ತೈವಾನ್‌ಗೆ ಶಸ್ತ್ರಾಸ್ತ್ರ ಪೂರೈಕೆ, ಸೇನಾ ನೆರವು ವಿರೋಧಿಸುತ್ತಾ ಬಂದಿದ್ದ ಚೀನಾ,ಅಮೆರಿಕದ ಉನ್ನತ ನಾಯಕರು ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡುವುದನ್ನು ವಿರೋಧಿಸುತ್ತಿತ್ತು.

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಜತೆಗೆ ಖಾಸಗಿ ದೂರವಾಣಿ ಸಂಭಾಷಣೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು, ‘ತೈವಾನ್‌ ಬೆಂಬಲಕ್ಕೆ ನಿಲ್ಲುವುದು ‘ಉರಿಯುವ ಬೆಂಕಿಗೆ ಇಂಧನ ಸುರಿದಂತೆ’. ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ನೇರ ಎಚ್ಚರಿಕೆ ನೀಡಿದ್ದರು.

ಉಕ್ರೇನ್‌ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ‘ತೈವಾನ್‌ ಅನ್ನುಬಲಪ್ರಯೋಗಿಸಿಯಾದರೂ ವಶಪಡಿಸಿಕೊಳ್ಳುವ ದಿನಗಳು ಬರಬಹುದು’ ಎಂದು ಷಿ ಜಿನ್‌ಪಿಂಗ್‌ ಬಹಿರಂಗವಾಗಿಯೇ ಹೇಳಿದ್ದರು.

ಚೀನಾ ಬೆದರಿಕೆಗೆ ಮಣಿಯಲ್ಲ:ನ್ಯಾನ್ಸಿ ಪೆಲೋಸಿ

ಚೀನಾದ ನಿರಂತರ ಎಚ್ಚರಿಕೆಗೆ ಮಣಿಯದೇ ನ್ಯಾನ್ಸಿ ಪೆಲೋಸಿ ಅವರುಅಮೆರಿಕ ವಾಯುಪಡೆಯ ಬೋಯಿಂಗ್‌ ಸಿ–40ಸಿ ವಿಮಾನದಲ್ಲಿ ತೈಪೆ ವಿಮಾನ ನಿಲ್ದಾಣಕ್ಕೆ ಸ್ಥಳೀಯ ಕಾಲಮಾನ ರಾತ್ರಿ 10.40ಕ್ಕೆ ಬಂದಿಳಿದರು.

ತೈವಾನ್‌ಗೆ ಕಳೆದ 25 ವರ್ಷಗಳಲ್ಲಿ ಅಮೆರಿಕದ ಅತ್ಯುನ್ನತ ನಾಯಕರೊಬ್ಬರು ಭೇಟಿ ನೀಡಿರುವುದು ಇದೇ ಮೊದಲು. ‘ಚೀನಾ ತನ್ನ ಸೇನೆಯಿಂದ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ’ ಎಂದು ಅಮೆರಿಕವು ಇದೇ ವೇಳೆ ಏಷ್ಯಾದ ಶಕ್ತಿಶಾಲಿ ರಾಷ್ಟ್ರ ಎನಿಸಿಕೊಂಡಿರುವ ಚೀನಾಕ್ಕೆ ಖಡಕ್‌ ಆಗಿ ಹೇಳಿದೆ.

ತೈಪೆಗೆ ಬಂದಿಳಿಯುತ್ತಿದ್ದಂತೆ ನ್ಯಾನ್ಸಿ ಪೆಲೋಸಿಯವರು ಮೊದಲ ಪ್ರತಿಕ್ರಿಯೆಯಾಗಿ ‘ನಮ್ಮ ಭೇಟಿ ತೈವಾನ್‌ಗೆ ಕಾಂಗ್ರೆಸ್ ನಿಯೋಗಗಳ ಪೈಕಿ ಒಂದಾಗಿದೆ. ಇದು ಅಮೆರಿಕ ಅನುಸರಿಸಿಕೊಂಡು ಬಂದಿರುವದೀರ್ಘಕಾಲದ ನೀತಿಗೆ ವಿರುದ್ಧವಾದುದಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT