ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ವಿಸರ್ಜನೆ: ನೇಪಾಳ ಸರ್ಕಾರಕ್ಕೆ ಷೋಕಾಸ್‌ ನೋಟಿಸ್‌

Last Updated 25 ಡಿಸೆಂಬರ್ 2020, 12:12 IST
ಅಕ್ಷರ ಗಾತ್ರ

ಕಠ್ಮಂಡು: ಪ್ರಧಾನಿಕೆ.ಪಿ.ಶರ್ಮಾ ಒಲಿ ನೇತೃತ್ವದ ನೇಪಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ಷೋಕಾಸ್‌ ನೋಟಿಸ್‌ ನೀಡಿದೆ.

ತುರ್ತಾಗಿ ಸಂಸತ್‌ ವಿಸರ್ಜಿಸಿರುವ ಕುರಿತು ಲಿಖಿತ ವಿವರಣೆ ನೀಡುವಂತೆಯೂ ನ್ಯಾಯಾಲಯ ಸೂಚಿಸಿದೆ.

‘ಸಂಸತ್‌ ವಿಸರ್ಜಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ರಿಟ್‌ ಅರ್ಜಿಗಳು ಸಲ್ಲಿಕೆಯಾಗಿದ್ದು,ಮುಖ್ಯ ನ್ಯಾಯಮೂರ್ತಿ ಚೋಲೆಂದ್ರ ಶಂಷರ್‌ ರಾಣಾ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠವು ಶುಕ್ರವಾರ ಇವುಗಳ ವಿಚಾರಣೆ ನಡೆಸಿತು’ ಎಂದು ರಿಪಬ್ಲಿಕಾ ದಿನಪತ್ರಿಕೆ ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ವಿಶ್ವಾಂಭರ ಪ್ರಸಾದ್‌ ಶ್ರೇಷ್ಠ, ತೇಜ್‌ ಬಹದ್ದೂರ್‌ ಕೆ.ಸಿ, ಅನಿಲ್‌ ಕುಮಾರ್‌ ಸಿನ್ಹಾ ಮತ್ತು ಹರಿಕೃಷ್ಣ ಕರ್ಕಿ ಅವರಿದ್ದ ಪೀಠವು ಲಿಖಿತ ವಿವರಣೆ ನೀಡುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಿಯವರ ಕಾರ್ಯಾಲಯ ಮತ್ತು ಸಚಿವರ ಪರಿಷತ್ತಿಗೆ ನಿರ್ದೇಶಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಸತ್‌ ವಿಸರ್ಜಿಸುವಂತೆ ಕೋರಿ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಶಿಫಾರಸು ಪತ್ರದ ಮೂಲ ಪ್ರತಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದೂ ಪೀಠವು ಸರ್ಕಾರಕ್ಕೆ ಆದೇಶಿಸಿದೆ.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 13 ರಿಟ್‌ ಅರ್ಜಿಗಳನ್ನು ರಾಣಾ ನೇತೃತ್ವದ ಏಕಸದಸ್ಯ ಪೀಠವು ಬುಧವಾರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.

‘ತಮ್ಮ ವಿರೋಧಿ ಪಾಳಯದ ನಾಯಕ ಪುಷ್ಪ ಕಮಲ್‌ ದಹಾಲ್‌ (ಪ್ರಚಂಡ) ಅವರಿಗೆ ಆಪ್ತರಾಗಿದ್ದ ಏಳು ಮಂದಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆಗೆ ಮುಂದಾಗಿರುವ ಒಲಿ ಅವರು ಈ ಸಂಬಂಧ ಚರ್ಚಿಸಲು ಸಂಪುಟ ಸಭೆ ಕರೆದಿದ್ದಾರೆ’ ಎಂದೂ ಪತ್ರಿಕೆಯ ವರದಿಯಲ್ಲಿ ವಿವರಿಸಲಾಗಿದೆ.

ಗುರುವಾರ ನಡೆದಿದ್ದ ಸ್ಥಾಯಿ ಸಮಿತಿ ಸಭೆಯಲ್ಲಿ ತಮ್ಮ ಆಪ್ತರ ಜೊತೆ ಚರ್ಚಿಸಿದ್ದ ಒಲಿ ಅವರು ನೇಪಾಳ ಕಮ್ಯುನಿಸ್ಟ್‌ ಪಕ್ಷದ (ಎನ್‌ಸಿಪಿ) ಕಾರ್ಯಕಾರಿ ಮುಖ್ಯಸ್ಥ ಸ್ಥಾನದಿಂದ ಪ್ರಚಂಡ ಅವರನ್ನು ವಜಾಗೊಳಿಸಿದ್ದರು.

ಇದಕ್ಕೂ ಮುನ್ನ ಎನ್‌ಸಿಪಿಯ ಮತ್ತೊಂದು ಬಣವು ಸಂಸದೀಯ ನಾಯಕ ಸ್ಥಾನದಿಂದ ಒಲಿ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಪ್ರಚಂಡ ಅವರನ್ನು ಆಯ್ಕೆಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT