ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ಸಂಸತ್‌ ವಿಸರ್ಜನೆ: ಎರಡು ಹಂತದಲ್ಲಿ ಚುನಾವಣೆ

ಪ್ರಧಾನಿ ಕೆ.ಪಿ.ಶರ್ಮಾ ಒಲಿ ಶಿಫಾರಸು ಆಧರಿಸಿ ರಾಷ್ಟ್ರಪತಿ ವಿದ್ಯಾದೇವಿ ಕ್ರಮ
Last Updated 20 ಡಿಸೆಂಬರ್ 2020, 13:01 IST
ಅಕ್ಷರ ಗಾತ್ರ

ಕಠ್ಮಂಡು: ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಭಾನುವಾರ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದಾರೆ. ಇದರ ಬೆನ್ನಲ್ಲೇ ಮಧ್ಯಂತರ ಚುನಾವಣೆಯನ್ನೂ ಘೋಷಿಸಿದ್ದಾರೆ.

‘ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಶಿಫಾರಸು ಆಧರಿಸಿ ವಿದ್ಯಾದೇವಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಏಪ್ರಿಲ್‌ 30ರಂದು ಮೊದಲ ಹಂತ ಹಾಗೂ ಮೇ 10ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

‘ನೇಪಾಳ ಸಂವಿಧಾನದ 76ನೇ ವಿಧಿ (ಅನುಚ್ಛೇದ 1 ಮತ್ತು 7) ಹಾಗೂ 85ನೇ ವಿಧಿಗಳ ಅಡಿಯಲ್ಲಿ ಸಂಸತ್‌ ವಿಸರ್ಜಿಸಲಾಗಿದೆ’ ಎಂದೂ ಪ್ರಕಟಣೆ ಹೇಳಿದೆ.

ಒಲಿ ಹಾಗೂ ಪುಷ್ಪ ಕಮಲ್‌ ದಹಾಲ್‌ (ಪ್ರಚಂಡ) ಅವರ ನಡುವೆ ಕೆಲ ದಿನಗಳಿಂದ ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಿತ್ತು. ಹೀಗಾಗಿ ಒಲಿ ಅವರು ಅಚ್ಚರಿಯ ತೀರ್ಮಾನ ಕೈಗೊಂಡಿದ್ದು, ಅವರ ನಡೆಯನ್ನು ಹಲವರು ಟೀಕಿಸಿದ್ದಾರೆ.

‘ಒಲಿ ಅವರ ನೇತೃತ್ವದಲ್ಲಿ ನಡೆದ ತುರ್ತು ಸಂಪುಟ ಸಭೆಯಲ್ಲಿ ಸಂಸತ್‌ ವಿಸರ್ಜನೆಗೆ ಶಿಫಾರಸು ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು’ ಎಂದು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಕ್ಷದ (ಎನ್‌ಸಿಪಿ) ಸ್ಥಾಯಿ ಸಮಿತಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

275 ಸದಸ್ಯ ಬಲದ ನೇಪಾಳ ಸಂಸತ್‌ಗೆ 2017ರಲ್ಲಿ ಚುನಾವಣೆ ನಡೆದಿತ್ತು. ಚುನಾಯಿತ ಸರ್ಕಾರವು ಐದು ವರ್ಷಗಳ ಅಧಿಕಾರಾವಧಿ ಹೊಂದಿತ್ತು.

‘ಒಲಿ ಅವರ ನಡೆ ಅಸಾಂವಿಧಾನಿಕವಾದುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಒಲಿ ಅವರ ನಿರಂಕುಶಾಧಿಕಾರಕ್ಕೆ ಹಿಡಿದ ಕೈಗನ್ನಡಿ. ಈ ಸಂಬಂಧ ಸ್ಥಾಯಿ ಸಮಿತಿ ಸಭೆ ಕರೆದು ಚರ್ಚಿಸುತ್ತೇವೆ’ ಎಂದು ಎನ್‌ಸಿಪಿ ವಕ್ತಾರ ನಾರಾಯಣ ಕಾಜಿ ಶ್ರೇಷ್ಠ ಅವರು ಹೇಳಿದ್ದಾರೆ.

ಎನ್‌ಸಿಪಿಯ ಹಿರಿಯ ಮುಖಂಡ ಹಾಗೂ ಮಾಜಿ ಪ್ರಧಾನಿ ಮಾಧವಕುಮಾರ್‌ ನೇಪಾಳ್‌ ಕೂಡ ಒಲಿ ಅವರ ನಡೆ ‘ಅಸಾಂವಿಧಾನಿಕ’ ಎಂದು ಟೀಕಿಸಿದ್ದಾರೆ.

ಒಲಿ ಅವರು ಸಂಸತ್‌ ವಿಸರ್ಜನೆಗೆ ಶಿಫಾರಸು ಮಾಡಿದ ಬೆನ್ನಲ್ಲೇ ಎನ್‌ಸಿಬಿ ಮುಖಂಡರು ದಹಾಲ್‌ ಅವರ ನಿವಾಸದಲ್ಲಿ ಸಭೆ ಸೇರಿ ಚರ್ಚಿಸಿದ್ದಾರೆ.

‘ಮಾಧವ ನೇಪಾಳ್‌, ಜಲನಾಥ್‌ ಖನಾಲ್‌ ಮತ್ತು ನಾರಾಯಣ ಕಾಜಿ ಸೇರಿದಂತೆ ಕೆಲ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು’ ಎಂದು ದಹಾಲ್‌ ಅವರ ಮಾಧ್ಯಮ ಸಲಹೆಗಾರ ವಿಷ್ಣು ಸಪಕೋಟಾ ಹೇಳಿದ್ದಾರೆ.

ಬರಿಗೈಲಿ ವಾಪಾಸಾಗಿದ್ದ ಪ್ರಚಂಡ

‘ಪ್ರಚಂಡ ಅವರು ಭಾನುವಾರ ಬೆಳಿಗ್ಗೆ ಪ್ರಧಾನಿ ಒಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ’ ಎಂದು ದಿ ರೈಸಿಂಗ್‌ ನೇಪಾಳ ಪತ್ರಿಕೆ ವರದಿ ಮಾಡಿದೆ.

‘ಪಕ್ಷವೊಂದಕ್ಕೆ ಸ್ಪಷ್ಟ ಬಹುಮತವಿದ್ದಾಗ ಪ್ರಧಾನಿ ಅವರು ಸಂಸತ್‌ ವಿಸರ್ಜನೆಗೆ ಶಿಫಾರಸು ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಒಲಿ ಅವರ ಈ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಇದೊಂದು ಬೇಜವಾಬ್ದಾರಿಯುತ ನಿರ್ಧಾರ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ನಡೆ. ಈ ಹಿಂದೆ ಇದ್ದ ರಾಜಕೀಯ ಅಸ್ಥಿರತೆಯನ್ನು ದೂರಮಾಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಬೇಕೆಂಬ ನಮ್ಮ ಪಕ್ಷದ ಪ್ರಯತ್ನಕ್ಕೆ ಇದರಿಂದ ತೀವ್ರ ಹಿನ್ನಡೆ ಉಂಟಾಗಿದೆ’ ಎಂದು ಮಾಜಿ ‍ಪ್ರಧಾನಿ ಬಾಬುರಾಮ್‌ ಭಟ್ಟಾರಾಜ್‌ ಹೇಳಿದ್ದಾರೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್‌ (ಎನ್‌ಸಿ) ಭಾನುವಾರ ತುರ್ತು ಸಭೆ ನಡೆಸಿ ಚರ್ಚಿಸಿದೆ.

‘ಒಲಿ ಅವರು ದೇಶದಲ್ಲಿ ನಿರಂಕುಶ ಆಡಳಿತ ಹೇರಲು ಮುಂದಾಗಿದ್ದಾರೆ’ ಎಂದು ಎನ್‌ಸಿ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಶೇರ್‌ ಬಹದ್ದೂರ್‌ ದೆವುಬಾ ಅವರು ಇತ್ತೀಚೆಗೆ ಕಿಡಿಕಾರಿದ್ದರು.

ಬಿಕ್ಕಟ್ಟಿನ ಹಿನ್ನೆಲೆ

ಒಲಿ ಆಡಳಿತದ ಬಗ್ಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಪ್ರಚಂಡ ಹಾಗೂ ಮಾಧವ ನೇಪಾಳ್‌ ಬಣದವರು ಒಲಿ ಅವರ ಮೇಲೆ ಒತ್ತಡ ಹೇರುತ್ತಿದ್ದರು.

ನವೆಂಬರ್‌ 13ರಂದು ನಡೆದಿದ್ದ ಸಚಿವಾಲಯದ ಸಭೆಯ ಮುಂದೆ 19 ಪುಟಗಳ ವರದಿಯೊಂದನ್ನು ಇಟ್ಟಿದ್ದ ಪ್ರಚಂಡ, ‘ಒಲಿ ಅವರು ಸರ್ಕಾರ ಹಾಗೂ ಪಕ್ಷವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ವಿಫಲರಾಗಿದ್ದಾರೆ. ಹಲವು ಭ್ರಷ್ಟಾಚಾರಗಳಲ್ಲೂ ಭಾಗಿಯಾಗಿದ್ದಾರೆ’ ಎಂದು ದೂರಿದ್ದರು.

ಇದನ್ನು ವಿರೋಧಿಸಿದ್ದ ಒಲಿ, ತಮ್ಮ ಮೇಲಿನ ಆರೋಪವನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಈ ಸಂಬಂಧ ಅವರು 38 ಪುಟಗಳ ವರದಿಯೊಂದನ್ನು ಸಭೆಯ ಮುಂದಿಟ್ಟಿದ್ದರು.

ದೇಶದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಾಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ನೇಪಾಳ ಸಂಸತ್‌ನ ಕೆಳಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.

ಭಾರತದ ಜೊತೆಗಿನ ವಿವಾದಿತ ಗಡಿಯಲ್ಲಿರುವ ಲಿಪುಲೇಖ್‌, ಕಾಲಾಪಾನಿ, ಲಿಂಪಿಯಾಧೂರಾ ಪ್ರದೇಶಗಳು ತನ್ನದೆಂದು ಪ್ರತಿಪಾದಿಸಿದ್ದ ನೇಪಾಳ, ಮಾರ್ಪಡಿಸಿದ ಭೂಪಟದಲ್ಲಿ ಈ ಪ್ರದೇಶಗಳನ್ನೂ ಸೇರಿಸಿತ್ತು.

ಈ ನಿರ್ಧಾರವನ್ನು ಸಹಿಸದ ಕೆಲವರು ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಒಲಿ ಅವರು ಈ ವರ್ಷದ ಜೂನ್‌ನಲ್ಲಿ ಹೇಳಿದ್ದರು. ಬಳಿಕ ಪಕ್ಷದೊಳಗೆ ಸಂಘರ್ಷ ಹೆಚ್ಚಾಗಿ ಒಲಿ ಹಾಗೂ ಪ್ರಚಂಡ ಬಣಗಳಾಗಿ ಹೋಳಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT