ಸೋಮವಾರ, ಸೆಪ್ಟೆಂಬರ್ 27, 2021
25 °C

ನ್ಯೂಯಾರ್ಕ್‌ನಲ್ಲಿ ಪ್ರವಾಹ: 8 ಮಂದಿ ಸಾವು, ತುರ್ತು ಪರಿಸ್ಥಿತಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಐಡಾ ಚಂಡಮಾರುತ ತಂದೊಡ್ಡಿದ ಮಹಾಮಳೆಗೆ ನ್ಯೂಯಾರ್ಕ್‌ ನಗರದಲ್ಲಿ ಪ್ರವಾಹ ಉಂಟಾಗಿದ್ದು, ಇಡೀ ನಗರ ಅಕ್ಷರಶಃ ತತ್ತರಗೊಂಡಿದೆ. ಭಾರೀ ಮಳೆಯಿಂದ ಈ ವರೆಗೆ 8 ಮಂದಿ ಸಾವಿಗೀಡಾಗಿದ್ದು, ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.

ಬಿರುಗಾಳಿಯು ನ್ಯೂಜೆರ್ಸಿಯಲ್ಲಿ ಮನೆಗಳನ್ನು ನಾಶಪಡಿಸಿದೆ. ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಸಬ್‌ವೇ ರೈಲು ಮಾರ್ಗಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವಿಮಾನಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.

ನ್ಯೂಯಾರ್ಕ್ ನಗರದಲ್ಲಿ ಏಳು ಮಂದಿ ಮತ್ತು ನ್ಯೂಜೆರ್ಸಿಯ ಪಾಸೈಕ್‌ನಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ನ್ಯಾಷನಲ್ ವೆದರ್ ಸರ್ವೀಸ್ ಪ್ರಕಾರ, ನ್ಯೂಯಾರ್ಕ್ ನಗರದಲ್ಲಿ ಸಾಮಾನ್ಯವಾಗಿ ಒಂದು ತಿಂಗಳ ಅವಧಿಯಲ್ಲಿ ಸುರಿಯುವ ಮಳೆ ಬುಧವಾರ ಒಂದೇ ದಿನ ಸುರಿದಿದೆ. ಸೆಂಟ್ರಲ್ ಪಾರ್ಕ್‌ನಲ್ಲಿ ಒಂದು ಗಂಟೆಯ ಅವಧಿಯಲ್ಲಿ 3.1 ಇಂಚು ಮಳೆ ಸುರಿದು, ಕಳೆದ ವಾರವಷ್ಟೇ ಸುರಿದಿದ್ದ ಮಳೆಯ ದಾಖಲೆ ಮುರಿದಿದೆ.

ಬುಧವಾರ ರಾತ್ರಿ ಸುರಿದ ಮಹಾಮಳೆಗೆ ನ್ಯೂಯಾರ್ಕ್‌ನಲ್ಲಿ ಪ್ರವಾಹ ಉಂಟಾಗಿದ್ದರಿಂದ ರಾಜ್ಯದ ಗವರ್ನರ್ ಕ್ಯಾತಿ ಹೊಚುಲ್ ತುರ್ತು ಪರಿಸ್ಥಿತಿ ಘೋಷಿಸಿದರು.

‘ಇದೊಂದು ಐತಿಹಾಸಿಕ ಹವಾಮಾನ ದುರಂತ’ ಎಂದು ಬಣ್ಣಿಸಿದ ನ್ಯೂಯಾರ್ಕ್‌ ಮೇಯರ್ ಬಿಲ್ ಡಿ ಬ್ಲೇಸಿಯೊ, ಪ್ರವಾಹದಿಂದ ರಸ್ತೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಮನೆ ಬಿಟ್ಟು ಹೊರಗೆ ಬರದಂತೆ ನ್ಯೂಯಾರ್ಕ್‌ ನಗರ ನಿವಾಸಿಗಳಿಗೆ ಎಚ್ಚರಿಸಿದರು.

ನ್ಯೂಜೆರ್ಸಿಯ ಗವರ್ನರ್ ಫಿಲ್ ಮರ್ಫಿ ಕೂಡ ಬುಧವಾರ ತಡರಾತ್ರಿ ತುರ್ತು ಪರಿಸ್ಥಿತಿ ಘೋಷಿಸಿದರು. ನಗರದ ನಿವಾಸಿಗಳಿಗೆ ರಸ್ತೆಗಳಿಯದೆ, ಮನೆಯಲ್ಲೇ ಸುರಕ್ಷಿತವಾಗಿರುವಂತೆ ಅವರು ಮನವಿ ಮಾಡಿದರು.

ವಾರಾಂತ್ಯದಲ್ಲಿ ಐಡಾ ಚಂಡ ಮಾರುತ ದಕ್ಷಿಣದ ಲೂಯಿಸಿಯಾನಕ್ಕೆ ಅಪ್ಪಳಿಸಿತು. ಇದು ಪ್ರವಾಹ ಮತ್ತು ಸುಂಟರಗಾಳಿಯನ್ನು ಸೃಷ್ಟಿಸಿ, ಉತ್ತರ ಅಮೆರಿಕದಲ್ಲಿ ದೊಡ್ಡ ವಿನಾಶವನ್ನೇ ಮಾಡಿದೆ. ಬ್ರೂಕ್ಲಿನ್ ಮತ್ತು ಕ್ವೀನ್ಸ್ ಪ್ರಾಂತ್ಯಗಳಲ್ಲೂ ಭಾರಿ ಹಾನಿ ಸಂಭವಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು