ಗುರುವಾರ , ಅಕ್ಟೋಬರ್ 22, 2020
21 °C
ರಹಸ್ಯ ಕಾಪಾಡಿಕೊಂಡು ಬಂದಿರುವ ಶ್ವೇತ ಭವನ

ಅಮೆರಿಕ ಅಧ್ಯಕ್ಷರ ಆರೋಗ್ಯವೂ ಮತ್ತು ಸುಳ್ಳುಗಳು!

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷರ ಆರೋಗ್ಯದ ವಿಷಯ ಅತಿ ಹೆಚ್ಚು ಚರ್ಚೆಗೆ ಒಳಗಾಗಿದೆ. ಬಹುತೇಕ ಅಧ್ಯಕ್ಷರು ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತುಗಳು.

ಕೆಲವರ ಆರೋಗ್ಯವಂತೂ ಗಂಭೀರ ಸ್ಥಿತಿಗೆ ತಲುಪಿತ್ತು. ಕೆಲವರು ಚಿಕ್ಕಪುಟ್ಟ ಸಮಸ್ಯೆಗೆ ಒಳಗಾಗಿದ್ದರು. ಹಲವರ ಆರೋಗ್ಯ ಸ್ಥಿತಿಯ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲು ಸಾರ್ವಜನಿಕರಿಗೆ ದಶಕಗಳೇ ಬೇಕಾದವು.

ಈಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಆರಂಭದಲ್ಲಿ ಟ್ರಂಪ್‌ ಅವರಿಗೆ ಸೋಂಕಿನ ಲಕ್ಷಣಗಳಿದ್ದರೂ ಗಂಭೀರವಾಗಿಲ್ಲ ಎಂದು ಮಾಹಿತಿ ನೀಡಲಾಯಿತು. ಬಳಿಕ, ಶುಕ್ರವಾರದ ಸಂಜೆ ವೇಳೆಗೆ, ಟ್ರಂಪ್‌ ಅವರನ್ನು ವಾಲ್ಟರ್‌ ರೀಡ್‌ ನ್ಯಾಷನಲ್‌ ಮಿಲಿಟರಿ ಮೆಡಿಕಲ್‌ ಸೆಂಟರ್‌ಗೆ ದಾಖಲಿಸಲಾಯಿತು.

‘ಟ್ರಂಪ್‌ ಅವರು ಶುಕ್ರವಾರ ಆತಂಕದ ಕ್ಷಣಗಳನ್ನು ಎದುರಿಸಿದರು. ಅವರ ಆರೋಗ್ಯ ಸುಧಾರಿಸಲು ಮುಂದಿನ 48 ಗಂಟೆಗಳ ಕಾಲ ಮಹತ್ವದ್ದಾಗಿವೆ’ ಎಂದು ಶ್ವೇತ ಭವನದ ಸಿಬ್ಬಂದಿ ಮುಖ್ಯಸ್ಥ ಮಾರ್ಕ್‌ ಮಿಡೋವ್ಸ್‌ ತಿಳಿಸಿದ್ದರು.

ಅಮೆರಿಕದ 28ನೇ ಅಧ್ಯಕ್ಷರಾಗಿದ್ದ ವೂಡ್ರೊವ್‌ ವಿಲ್ಸನ್‌  ಅವರ ಅವಧಿಯಲ್ಲೂ ಸಾಂಕ್ರಾಮಿಕ ಕಾಯಿಲೆ ಹಬ್ಬಿತ್ತು. ಟ್ರಂಪ್‌ ಅವರ ರೀತಿಯಲ್ಲೇ ವಿಲ್ಸನ್‌ ಅವರು ಸಾಂಕ್ರಾಮಿಕ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆಗಲೂ ಸಾವಿರಾರು ಅಮೆರಿಕನ್ನರು ಸಾವಿಗೀಡಾಗಿದ್ದರು. ವಿಲ್ಸನ್‌ ಅವರು ಸಹ ಅನಾರೋಗ್ಯಕ್ಕೀಡಾಗಿದ್ದರು. ಶ್ವೇತಭವನದ ಅಧಿಕಾರಿಗಳು ವಿಲ್ಸನ್‌ ಅವರ ಅನಾರೋಗ್ಯದ ಮಾಹಿತಿಯನ್ನು ಮುಚ್ಚಿಡಲು ಯತ್ನಿಸಿದ್ದರು.

ಮೊದಲನೇ ವಿಶ್ವ ಯುದ್ಧವನ್ನು ಮುಕ್ತಾಯಗೊಳಿಸುವ ಕುರಿತು 1919ರ ಏಪ್ರಿಲ್‌ನಲ್ಲಿ ಪ್ಯಾರಿಸ್‌ನಲ್ಲಿ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲೇ ವಿಲ್ಸನ್‌ ಅನಾರೋಗ್ಯಕ್ಕೆ ಒಳಗಾಗಿದ್ದರು. ಅನಾರೋಗ್ಯದ ಲಕ್ಷಣಗಳು ಗಂಭೀರವಾಗಿದ್ದವು. ವಿಲ್ಸನ್‌ ಅವರಿಗೆ ವಿಷ ನೀಡಲಾಗಿದೆ ಎಂದು ಅವರ ತಜ್ಞ ವೈದ್ಯ ಕೇರಿ ಗ್ರೇಸನ್‌ ಭಾವಿಸಿದ್ದರು. ಅಧ್ಯಕ್ಷರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಗ್ರೇಸನ್‌ ಶ್ವೇತಭವನಕ್ಕೆ ಪತ್ರ ಸಹ ಬರೆದಿದ್ದರು.

‘ವಿವಿಧ ಕಾರಣಗಳಿಗೆ ವಿಲ್ಸನ್‌ ಆಡಳಿತ ಸಾಂಕ್ರಾಮಿಕ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ’ ಎಂದು ಟುಲಾನೆ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಜಾನ್‌ ಬೇರಿ ಅವರು ಬರೆದಿರುವ ‘ದ ಗ್ರೇಟ್‌ ಇನ್‍ಫ್ಲೂಂಜಾ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

1918–19ರ ಅವಧಿಯಲ್ಲಿ ಹಬ್ಬಿದ ಸಾಂಕ್ರಾಮಿಕ ಕಾಯಿಲೆಯಿಂದ 6.75 ಲಕ್ಷ ಅಮೆರಿಕದ ನಾಗರಿಕರು ಸಾವಿಗೀಡಾಗಿದ್ದರು.

ಈಗ 100 ವರ್ಷಗಳ ಬಳಿಕ ಇದೇ ರೀತಿಯ ಸನ್ನಿವೇಶ ಪುನರಾವರ್ತನೆಯಾಗಿದೆ. ಟ್ರಂಪ್‌ ಅವರ ಅರೋಗ್ಯದ ಬಗ್ಗೆ ಕೆಲವೇ ಮಾಹಿತಿಗಳನ್ನು ನೀಡಲಾಯಿತು. ಹಲವು ಗಂಟೆಗಳ ಬಳಿಕವೇ ಟ್ರಂಪ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕೆಲೆಘ್‌ ಮ್ಯಾಕ್‌ಎನಾನಿ ಮಾಹಿತಿ ನೀಡಿದ್ದರು.

ಜನರು ಆತಂಕಕ್ಕೆ ಒಳಗಾಗಬಾರದು ಎನ್ನುವ ಉದ್ದೇಶದಿಂದ ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಟ್ರಂಪ್‌ ಹೇಳಿದ್ದರು. ಆದರೆ, ಇದಕ್ಕೆ ರಾಜಕೀಯ ಕಾರಣವೇ ಮುಖ್ಯವಾಗಿತ್ತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ನಾಲ್ಕು ವರ್ಷಗಳ ಕಾಲ ಮತ್ತೆ ಅಧಿಕಾರದಲ್ಲಿ ಮುಂದುವರಿಯುವ ಇಚ್ಛೆ ಹೊಂದಿರುವ ಟ್ರಂಪ್‌, ಅಮೆರಿಕದ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಗಂಭೀರ ಪರಿಣಾಮ ಬೀರದಂತೆ ಎಚ್ಚರವಹಿಸಿದ್ದಾರೆ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ.

ಇದೇ ರೀತಿ ಹಲವು ಅಧ್ಯಕ್ಷರು ತಮ್ಮ ಆರೋಗ್ಯದ ವಿಷಯ ಸಾರ್ವಜನಿಕರಿಗೆ ತಿಳಿಯದಂತೆ ಎಚ್ಚರವಹಿಸಿದ್ದ ಪ್ರಕರಣಗಳು ಅಮೆರಿಕ ಇತಿಹಾಸದಲ್ಲಿ ಮರುಕಳಿಸಿವೆ.

ಅಮೆರಿಕದ 22ನೇ ಅಧ್ಯಕ್ಷರಾಗಿದ್ದ ಅಧ್ಯಕ್ಷ ಗ್ರೊವರ್‌ ಕ್ಲೆವ್‌ಲ್ಯಾಂಡ್‌ ಅನಾರೋಗ್ಯಕ್ಕೆ ಒಳಗಾಗಿದ್ದರು. ರಾತ್ರೋ ರಾತ್ರಿ ರಹಸ್ಯವಾಗಿ ಬಾಯಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ, ಈ ವಿಷಯ ಆಗ ಬಹಿರಂಗವಾಗಲೇ ಇಲ್ಲ. ನಂತರ 2000ನೇ ಇಸ್ವಿಯಲ್ಲಿ ಕಾಲೇಜ್‌ ಆಫ್‌ ಫಿಜಿಸಿಯನ್ಸ್‌ ಆಯೋಜಿಸಿದ್ದ ಪ್ರದರ್ಶನದಲ್ಲಿ ಗ್ರೊವರ್‌ ಅವರ ಬಾಯಿಯಲ್ಲಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಅಂಗವನ್ನು ಇಡಲಾಗಿತ್ತು.

36ನೇ ಅಧ್ಯಕ್ಷರಾಗಿದ್ದ ಲಿಂಡನ್‌ ಬಿ ಜಾನ್ಸನ್‌ ಅವರು 1967ರಲ್ಲಿ ತಮ್ಮ ಕೈಯಲ್ಲಿನ ಚರ್ಮವನ್ನು ತೆಗೆಸಲು ರಹಸ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

32ನೇ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್‌ ಡಿ ರೂಸ್‌ವೆಲ್ಟ್‌  1944ರಲ್ಲಿ ತೀವ್ರ ರಕ್ತದ ಒತ್ತಡ ಮತ್ತು ಹೃದ್ರೋಗದಿಂದ ಬಳಲುತ್ತಿದ್ದರು. ಹೀಗಾಗಿ, ಹೆಚ್ಚು ಉಪ್ಪು ಸೇವಿಸದಂತೆ ಮತ್ತು ಧೂಮಪಾನ ಮಾಡದಂತೆ ವೈದ್ಯರು ಸೂಚಿಸಿದ್ದರು. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ರೂಸ್‌ವೆಲ್ಟ್‌ ಅವರಿಗೆ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಶ್ವೇತ ಭವನದ ಸಿಬ್ಬಂದಿ ಹೇಳಿಕೆ ನೀಡಿದ್ದರು. ಅವರ ವೈದ್ಯರು ಸಹ ಆರೋಗ್ಯದ ಮಾಹಿತಿಯನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದರು.

ರೂಸವೆಲ್ಟ್‌ ಚುನಾವಣೆಯಲ್ಲಿ ಜಯಶಾಲಿಯಾದರು.  ಆದರೆ, ಕೆಲವೇ ತಿಂಗಳಲ್ಲಿ ಅಂದರೆ 1945 ಏಪ್ರಿಲ್‌ 12ರಂದು ಪಾರ್ಶ್ವವಾಯುನಿಂದ ಸಾವಿಗೀಡಾದರು.

‘35ನೇ ಅಧ್ಯಕ್ಷರಾಗಿದ್ದ ಜಾನ್‌ ಎಫ್‌ ಕೆನಡಿ ಅವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಪ್ರತಿ ದಿನ ಎಂಟು ರೀತಿಯ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು. ನೋವು ನಿವಾರಕಗಳು, ನಿದ್ರೆ ಮತ್ತು ಹಾರ್ಮೋನ್‌ಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ಸೇವಿಸುತ್ತಿದ್ದರು’ ಎಂದು ಇತಿಹಾಸಕಾರ ರಾಬರ್ಟ್‌ ಡಲ್ಲೆಕ್‌ ಹೇಳುತ್ತಾರೆ.

34ನೇ ಅಧ್ಯಕ್ಷ ಡ್ವೈಟ್ ಡಿ ಐಸೆನ್‌ಹೋವರ್ ಅವರಿಗೆ 1955ರಲ್ಲಿ ಹೃದಯಾಘಾತವಾಗಿತ್ತು. ಆರು ವಾರಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡನೇ ಅವಧಿಗೆ ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸುವ ಬದಲು ಅಧ್ಯಕ್ಷರಾದರೆ ಮತ್ತೆ ಆರೋಗ್ಯ ಸುಧಾರಿಸುತ್ತದೆ ಎಂದು ವೈದ್ಯರು ಅವರಿಗೆ ಸಲಹೆ ನೀಡಿದ್ದರು.

ಅಮೆರಿಕ 9ನೇ ಅಧ್ಯಕ್ಷರಾಗಿದ್ದ ವಿಲಿಯಮ್‌ ಹೆನ್ರಿ ಹ್ಯಾರಿಸನ್‌ 1841ರಲ್ಲಿ ನ್ಯೂಮೆನಿಯಾಗೆ ತುತ್ತಾಗಿದ್ದರು. ಈ ಬಗ್ಗೆ ಶ್ವೇತಭವನದಿಂದ ಸಾರ್ವಜನಿಕರಿಗೆ ಯಾವುದೇ ರೀತಿ ಮಾಹಿತಿ ನೀಡಿರಲಿಲ್ಲ. ಅನಾರೋಗ್ಯಕ್ಕೀಡಾದ ಒಂಬತ್ತು ದಿನಗಳಲ್ಲೇ ಹ್ಯಾರಿಸನ್‌ ಸಾವಿಗೀಡಾದರು.  ಆಗ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಕೇವಲ ಒಂದು ತಿಂಗಳಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು