ಶನಿವಾರ, ಮೇ 21, 2022
28 °C
ಪಿಡುಗು ಕಾಣಿಸಿಕೊಂಡಾಗಿನಿಂದ ವರದಿಯಾದ ಗರಿಷ್ಠ ಪ್ರಕರಣಗಳಿವು

ಕೋವಿಡ್‌: ವಿಶ್ವದಲ್ಲಿ ಕಳೆದ ವಾರ 2 ಕೋಟಿಗೂ ಅಧಿಕ ಹೊಸ ಪ್ರಕರಣಗಳು ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ/ಜಿನಿವಾ: ವಿಶ್ವದೆಲ್ಲೆಡೆ ಕಳೆದ ವಾರ ಕೋವಿಡ್‌–19ನ 2.1 ಕೋಟಿಗೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಪಿಡುಗು ಕಾಣಿಸಿಕೊಂಡಾಗಿನಿಂದ ಒಂದು ವಾರದ ಅವಧಿಯಲ್ಲಿ ವರದಿಯಾಗಿರುವ ಗರಿಷ್ಠ ಸಂಖ್ಯೆಯ ಪ್ರಕರಣಗಳು ಇವು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ 50 ಸಾವಿರ ಎಂದೂ ಹೇಳಿದೆ.

ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಸೋಂಕಿನ ಬಗ್ಗೆ ಎಚ್ಚರಿಕೆ ಅಗತ್ಯ ಎಂದೂ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ತಳಿ ವೇಗವಾಗಿ ಪ್ರಸರಣವಾಗುವ ಜೊತೆಗೆ ತ್ವರಿತವಾಗಿ ಬೆಳವಣಿಗೆ ಹೊಂದುತ್ತಿದೆ. ಡೆಲ್ಟಾ ತಳಿಗೆ ಹೋಲಿಸಿದರೆ, ಮತ್ತೊಮ್ಮೆ ಸೋಂಕು ಉಂಟು ಮಾಡುವ ಪ್ರಮಾಣ ಅಧಿಕವಾಗಿರುವ ಕಾರಣ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯ ಎಂದು ಕೋವಿಡ್‌–19 ಕುರಿತ ವಾರದ ವರದಿಯಲ್ಲಿ ಪ್ರತಿಪಾದಿಸಲಾಗಿದೆ.

ಪ್ರಯಾಣಿಕರಲ್ಲಿ ಓಮೈಕ್ರಾನ್ ತಳಿ ಸೋಂಕು ಪತ್ತೆಯಾಗುತ್ತಿದೆ. ಹೀಗಾಗಿ ಅನೇಕ ರಾಷ್ಟ್ರಗಳಲ್ಲಿ ಈಗ ಸಮುದಾಯ ಮಟ್ಟದಲ್ಲಿ ಸೋಂಕು ಪ್ರಸರಣವಾಗುತ್ತಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

* ಜ. 23ರ ವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 34.6 ಕೋಟಿ ಹಾಗೂ ಮೃತಪಟ್ಟವರ ಸಂಖ್ಯೆ 50.5 ಲಕ್ಷ

* ಡೆಲ್ಟಾಕ್ಕೆ ಹೋಲಿಸಿದರೆ ಓಮೈಕ್ರಾನ್‌ ತಳಿ ಸೋಂಕು ತಗುಲಿದವರಲ್ಲಿ ಲಕ್ಷಣರಹಿತ ಕೋವಿಡ್‌ ಇರುವುದು ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಧ್ಯಯನದಿಂದ ತಿಳಿದು ಬಂದಿದೆ.

* ಸೋಂಕಿತರಲ್ಲಿ ಲಕ್ಷಣಗಳು ಕಾಣಿಸಿಕೊಳ್ಳದ ಕಾರಣ ಪತ್ತೆಯೂ ಕಡಿಮೆಯಾಗುತ್ತಿದೆ. ಇದರಿಂದ ಪ್ರಸರಣ ಹೆಚ್ಚುತ್ತಿದೆ.

ದೇಶದಲ್ಲಿ 2.85 ಲಕ್ಷ ಹೊಸ ಪ್ರಕರಣಗಳು ವರದಿ: ಬುಧವಾರ ಬೆಳಿಗ್ಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,85,914 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,00,85,116ಕ್ಕೆ ಏರಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 665 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 4,91,127 ಎಂದು ಸಚಿವಾಲಯದ ವರದಿ ತಿಳಿಸಿದೆ.‌

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, 22,23,018 ಪ್ರಕರಣಗಳಿವೆ. ದೈನಂದಿನ ಕೋವಿಡ್ ದೃಢ ಪ್ರಮಾಣವು ಶೇಕಡ 16.16 ರಷ್ಟಿದೆ.

ದೇಶದಲ್ಲಿ ಇದುವರೆಗೆ 163.58 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು