ಭಾನುವಾರ, ಜೂನ್ 20, 2021
28 °C

ಜಾಧವ್‌ ಪ್ರಕರಣ: ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸುವಂತೆ ಭಾರತಕ್ಕೆ ಪಾಕ್‌ ಮನವಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳಲ್ಲಿ ಭಾರತವು ಸಹಕಾರ ನೀಡಬೇಕು. ಇದರಿಂದ ಭಾರತದ ಸಾರ್ವಭೌಮತ್ವಕ್ಕೆ ಯಾವುದೇ ದಕ್ಕೆ ಉಂಟಾಗುವುದಿಲ್ಲ ಎಂದು ಪಾಕಿಸ್ತಾನದ ಉನ್ನತ ನ್ಯಾಯಾಲಯವು ಹೇಳಿದೆ.

ಜಾಧವ್‌ ಪರ ವಕೀಲರನ್ನು ನೇಮಕ ಮಾಡಲು ಸೂಚಿಸುವಂತೆ ಕೋರಿ ಪಾಕಿಸ್ತಾನದ ಕಾನೂನು ಮತ್ತು ನ್ಯಾಯ ಸಚಿವಾಲಯವು ಇಸ್ಲಾಮಾಬಾದ್‌ ಹೈಕೋರ್ಟ್‌ನಲ್ಲಿ(ಐಎಚ್‌ಸಿ) ಅರ್ಜಿ ಸಲ್ಲಿಸಿದೆ.

ಮುಖ್ಯ ನ್ಯಾಯಮೂರ್ತಿ ಅಥರ್ ಮಿನಾಲಾ, ನ್ಯಾಯಮೂರ್ತಿಗಳಾದ ಅಮರ್‌ ಫಾರೂಕ್ ಮತ್ತು ಮಿಯಾಂಗುಲ್ ಹಸನ್ ಔರಂಗಜೇಬ್‌ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿತು.

‘ಕಳೆದ ವರ್ಷ ‌ಅಂತರರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಜಾಧವ್‌ಗೆ ಕಾನೂನುಬದ್ಧ ಪರಿಹಾರವನ್ನು ಪಡೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಸುಗ್ರೀವಾಜ್ಞೆ ಹೊರಡಿಸಿತ್ತು’ ಎಂದು ಅಟಾರ್ನಿ ಜನರಲ್‌ ಖಾಲೀದ್‌ ಜಾವೇದ್‌ ಖಾನ್‌ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಬಗ್ಗೆ ಅಲ್ಲಿನ ಡೌನ್‌ ಪತ್ರಿಕೆಯು ವರದಿ ಮಾಡಿದೆ.

‘ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳಲ್ಲಿ ಭಾಗಿಯಾಗಲು ಭಾರತ ಸರ್ಕಾರ ಹಿಂದೇಟು ಹಾಕುತ್ತಿದೆ. ‍ಪಾಕಿಸ್ತಾನದಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವುದರ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಪಾಕಿಸ್ತಾನದಲ್ಲಿ ವಿಚಾರಣೆಗೆ ಹಾಜರಾಗುವುದು ದೇಶದ ಸಾರ್ವಭೌಮತೆಯನ್ನು ತ್ಯಜಿಸುವುದಕ್ಕೆ ಸಮಾನವಾಗಿದೆ ಎಂಬ ಕಾರಣ ನೀಡಿರುವ ಭಾರತ, ಐಎಚ್‌ಸಿ ಪ್ರಕ್ರಿಯೆಗಳಿಗಾಗಿ ವಕೀಲರನ್ನು ನೇಮಕ ಮಾಡಲು ನಿರಾಕರಿಸಿದೆ’ ಎಂದು ಖಾಲೀದ್‌ ಜಾವೇದ್‌ ಖಾನ್‌ ಪೀಠಕ್ಕೆ ತಿಳಿಸಿದ್ದಾರೆ.

‘ಈ ರೀತಿ ವಿರೋಧ ವ್ಯಕ್ತಪಡಿಸುವ ಮೂಲಕ ಭಾರತವು ಈ ಪ್ರಕರಣವನ್ನು ಐಸಿಜೆಗೆ ತೆಗೆದುಕೊಂಡು ಹೋಗಲು ‍ಪ್ರಯತ್ನಿಸುತ್ತಿದೆ’ ಎಂದು ಅವರು ದೂರಿದ್ದಾರೆ.

‘ಈ ಹಿಂದೆ ಭಾರತದ ರಾಯಭಾರ ಕಚೇರಿ, ಐವರು ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಆಗ ನ್ಯಾಯಾಲಯವು ಅವರ ಪರವಾಗಿಯೇ ತೀರ್ಪು ನೀಡಿತ್ತು. ಆದರೆ ಈಗ ಭಾರತವು ಅದೇ ನ್ಯಾಯಾಲಯದ ನ್ಯಾಯಸಮ್ಮತ ತೀರ್ಪನ್ನು ಪ್ರಶ್ನಿಸುತ್ತಿರುವುದು ಅಶ್ಚರ್ಯಕರ’ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿ‍ಪ್ರಾಯಪಟ್ಟರು.

‘ನಾವು ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿಲ್ಲ. ಆದರೆ ಐಸಿಜೆ ನಿರ್ಧಾರವನ್ನು ಪಾಲಿಸಲು ನಾವು ಯಾವ ರೀತಿಯ ಪ್ರಕ್ರಿಯೆಯನ್ನು ನಡೆಸಬೇಕು ಎಂಬುದನ್ನು ಭಾರತವೇ ಹೇಳಲಿ’ ಎಂದು ಅವರು ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಜೂನ್‌ 15ಕ್ಕೆ ನಿಗದಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು