ಶನಿವಾರ, ಜನವರಿ 28, 2023
15 °C

ನನ್ನ ಕೊಲೆಗೆ ಸಂಚು ನಡೆಯುತ್ತಿದೆ ಎಂದು 6 ತಿಂಗಳ ಹಿಂದೆಯೇ ಹೇಳಿದ್ದ ಇಮ್ರಾನ್ ಖಾನ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದ್ದು, ಅವರ ಕಾಲಿಗೆ ಪೆಟ್ಟು ಬಿದ್ದಿದೆ. ಅವರ ಮೇಲೆ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ದೇಶದ ಜನರ ದಾರಿತಪ್ಪಿಸುತ್ತಿದ್ದ ಕಾರಣಕ್ಕೆ ಇಮ್ರಾನ್‌ ಅವರನ್ನು ಕೊಲ್ಲಲು ಬಂದಿದ್ದೆ’ ಎಂದು ದಾಳಿಕೋರ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 

ಕುತೂಹಲಕಾರಿ ಸಂಗತಿ ಎಂದರೆ, ಈ ದಾಳಿ ನಡೆಯುವುದಕ್ಕೆ ಆರು ತಿಂಗಳ ಮೊದಲು, ಮೇನಲ್ಲಿ ಇಮ್ರಾನ್‌ ತಮ್ಮ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದರು.

‘ನನ್ನ ಕೊಲೆಯಾಗಿದ್ದೇ ಆದರೆ, ಕೃತ್ಯ ಯಾರು ಮಾಡಿರಬಲ್ಲರು ಎಂಬುದರ ಬಗ್ಗೆ ನಾನು ವಿಡಿಯೊ ರೆಕಾರ್ಡ್‌ ಮಾಡಿ ಸುರಕ್ಷಿತ ಸ್ಥಳದಲ್ಲಿ ಇಟ್ಟಿದ್ದೇನೆ. ಆ ಸಂದೇಶದಿಂದ ಜನರಿಗೆ ಸತ್ಯ ತಿಳಿಯಲಿದೆ’ ಎಂದು ಇಮ್ರಾನ್‌ ಖಾನ್‌ ಹೇಳಿದ್ದರು.

‘ಕೊಲೆಯ ಸಂಚಿನ ಬಗ್ಗೆ ನನಗೆ ಗೊತ್ತಾಗಿದೆ. ರಾಷ್ಟ್ರದ ಒಳಗೆ ಮತ್ತು ಹೊರಗೆ ರಹಸ್ಯವಾಗಿ ಸಂಚು ನಡೆದಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರ ಹೆಸರನ್ನು ವಿಡಿಯೊ ಸಂದೇಶದಲ್ಲಿ ದಾಖಲಿಸಿಟ್ಟಿದ್ದೇನೆ. ನನಗೆ ಏನಾದರೂ ಸಂಭವಿಸಿದರೆ ಜನರಿಗೆ ವಿಡಿಯೊ ಸಂದೇಶದ ಮೂಲಕ ಅಪರಾಧಿಗಳು ಯಾರು ಎಂಬುದು ತಿಳಿಯಲಿದೆ’ ಎಂದಿದ್ದರು.

'ರೆಕಾರ್ಡ್‌ ಮಾಡಲಾಗಿರುವ ವಿಡಿಯೊ ಸಂದೇಶವನ್ನು ಸುರಕ್ಷಿತವಾಗಿ ಇಡಲಾಗಿದೆ' ಎಂದು ಇಮ್ರಾನ್‌ ಹೇಳಿದ್ದರು.

ಅವರು ಹಾಗೆ ಹೇಳಿದ ಎರಡು ದಿನಗಳ ನಂತರ, ಅವರ ಫೋನ್‌ ಅನ್ನು ಕದಿಯಲಾಗಿತ್ತು. ನಾನು ರೆಕಾರ್ಡ್‌ ಮಾಡಿರುವ ವಿಡಿಯೊಗಾಗಿಯೇ ನನ್ನ ಫೋನ್‌ ಕದಿಯಲಾಗಿದೆ ಎಂದು ಇಮ್ರಾನ್‌ ಆರೋಪ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು