ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ರಫೇಲ್ ಎದುರಿಸಲು ಚೀನಾದಿಂದ ಜೆ-10ಸಿ ಯುದ್ಧ ವಿಮಾನ ಖರೀದಿಸಿದ ಪಾಕಿಸ್ತಾನ

Last Updated 13 ಮಾರ್ಚ್ 2022, 12:41 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಎದುರಿಸಲು ತನ್ನ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲವೃದ್ಧಿಸಿಕೊಂಡಿರುವಪಾಕಿಸ್ತಾನ, ಚೀನಾದಿಂದ ಅತ್ಯಾಧುನಿಕ ಬಹು ಸಾಮರ್ಥ್ಯದ ಜೆ-10ಸಿ ಯುದ್ದ ವಿಮಾನಗಳನ್ನು ಖರೀದಿಸಿವೆ.

ಪಾಕಿಸ್ತಾನದ ಪಂಜಾಬ್‌ನ ಅಟಾಕ್ ಜಿಲ್ಲೆಯ ವಾಯನೆಲೆಯಲ್ಲಿ ಶುಕ್ರವಾರ ಪ್ರಧಾನಿ ಇಮ್ರಾನ್ ಖಾನ್, ಯುದ್ಧ ವಿಮಾನಗಳನ್ನು ಔಪಚಾರಿಕವಾಗಿ ವಾಯುಪಡೆಗೆ (ಪಿಎಎಫ್) ಸೇರ್ಪಡೆಗೊಳಿಸಿದರು.

ಇಮ್ರಾನ್ ಎಚ್ಚರಿಕೆ...
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್, ಯಾವುದೇ ದೇಶ ಪಾಕಿಸ್ತಾನದ ವಿರುದ್ಧ ಆಕ್ರಮಣ ಮಾಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗುತ್ತದೆ. ಸಶಸ್ತ್ರ ಪಡೆಗಳು ಸುಸಜ್ಜಿತವಾಗಿದ್ದು, ಯಾವುದೇ ಬೆದರಿಕೆಯನ್ನು ಎದುರಿಸಲು ತರಬೇತಿಯನ್ನು ಪಡೆದಿವೆ ಎಂದು ಎಚ್ಚರಿಸಿದ್ದಾರೆ.

ದುರದೃಷ್ಟವಶಾತ್, ಈ ಪ್ರದೇಶದಲ್ಲಿ ಅಸಮತೋಲನವನ್ನು ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಇದನ್ನು ಎದುರಿಸಲು ರಕ್ಷಣಾ ವ್ಯವಸ್ಥೆಗೆ ಹೊಸ ಯುದ್ಧ ವಿಮಾನಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಹೇಳಿದರು.

ಅಮೆರಿಕವು ಎಫ್-16 ಯುದ್ಧ ವಿಮಾನಗಳನ್ನು ಒದಗಿಸಿದ ಸುಮಾರು 40 ವರ್ಷಗಳ ಬಳಿಕ ಪಾಕಿಸ್ತಾನವು ರಕ್ಷಣಾ ವಿಭಾಗದಲ್ಲಿ ಸಾಧಿಸಿದ ದೊಡ್ಡ ಪ್ರಗತಿ ಇದಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಕೇವಲ ಎಂಟು ತಿಂಗಳ ಅವಧಿಯಲ್ಲಿ ಅತ್ಯಾಧುನಿಕ ವಿಮಾನ ಒದಗಿಸಿದ್ದಕ್ಕಾಗಿ ಚೀನಾಕ್ಕೆ ಪಾಕ್ ಪ್ರಧಾನಿ ಧನ್ಯವಾದ ಸಲ್ಲಿಸಿದ್ದಾರೆ.

ಜೆ-10ಸಿ ಯುದ್ಧ ವಿಮಾನವು 4.5ನೇ ತಲೆಮಾರಿನ ಮಧ್ಯಮ ಗಾತ್ರದ ಯುದ್ಧ ವಿಮಾನ ಆಗಿದ್ದು, ಚೀನಾ-ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿದ ಜೆಎಫ್-17 ಫೈಟರ್ ಜೆಟ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.

ಮಾರ್ಚ್ 23ರಂದು ನಡೆಯಲಿರುವ ಪಾಕಿಸ್ತಾನ ರಕ್ಷಣಾ ದಿನದ ಪರೇಡ್‌ನಲ್ಲಿ ಇದನ್ನು ಪ್ರದರ್ಶಿಸಲಾಗುವುದು. ಚೀನಾದ ಚೆಂಗ್ಡು ಏರ್‌ಕ್ರಾಫ್ಟ್ ಕಾರ್ಪೋರೇಷನ್ (ಸಿಎಸಿ) ಇದನ್ನು ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT