ಸೋಮವಾರ, ಅಕ್ಟೋಬರ್ 25, 2021
25 °C

ಪಾಕ್ 'ಅಗ್ನಿಶಾಮಕ' ವೇಷ ತೊಟ್ಟು ಭಯೋತ್ಪಾದಕರನ್ನು ಪೋಷಿಸುತ್ತಿರುವ ದೇಶ: ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಭಯೋತ್ಪಾದಕರಿಗೆ ಮುಕ್ತ ಅವಕಾಶ ಕೊಟ್ಟಿರುವ ಪಾಕಿಸ್ತಾನವು, ಅಗ್ನಿಶಾಮಕ ವೇಷ ತೊಟ್ಟು ತನ್ನ ಹಿತ್ತಲಲ್ಲಿ ಭಯೋತ್ಪಾದಕರನ್ನು ಪೋಷಿಸುತ್ತಿದೆ. ಅದರ ಈ ನೀತಿಯಿಂದಾಗಿ ಇಡೀ ಪ್ರಪಂಚವು ತೊಂದರೆ ಅನುಭವಿಸಿದೆ ಎಂದು ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತೀಕ್ಷ್ಣ ಎದಿರೇಟು ಕೊಟ್ಟಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ರಾಯಭಾರ ಕಚೇರಿಯ ಕಾರ್ಯದರ್ಶಿ ಸ್ನೇಹಾ ದುಬೆ, ನಮ್ಮ ದೇಶದ ಆಂತರಿಕ ವಿಷಯವನ್ನು ಎಳೆದು ತಂದು, ವಿಶ್ವ ವೇದಿಕೆಯಲ್ಲಿ ಸುಳ್ಳನ್ನು ಹೇಳುವ ಮೂಲಕ ಈ ವೇದಿಕೆಯ ಘನತೆ ಹಾಳು ಮಾಡಲು ಯತ್ನಿಸಿದ ಪಾಕಿಸ್ತಾನದ ನಾಯಕನ ವಿರುದ್ಧ ನಮ್ಮ ಪ್ರತಿಕ್ರಿಯೆ ಹಕ್ಕನ್ನು ಬಳಸುತ್ತೇನೆ ಎಂದು ಸ್ನೇಹಾ ದುಬೆ ಹೇಳಿದ್ದಾರೆ.

‘ಅಂತಹ ಹೇಳಿಕೆಗಳು ನಮ್ಮ ಸಾಮೂಹಿಕ ವಿರೋಧಕ್ಕೆ ಅರ್ಹವಾಗಿವೆ ಮತ್ತು ಆ ಹೇಳಿಕೆ ಕೊಟ್ಟ ವ್ಯಕ್ತಿಯ ನಿರಂತರ ಸುಳ್ಳು ಹೇಳುವ ಮನಸ್ಥಿತಿ ಬಗ್ಗೆ ನಾವು ಕನಿಕರಪಡಬೇಕಿದೆ’ಎಂದಿದ್ದಾರೆ

‘ಪಾಕಿಸ್ತಾನವು 'ಭಯೋತ್ಪಾದನೆಯ ಬಲಿಪಶು' ಎಂದು ನಾವು ಕೇಳುತ್ತಲೇ ಇದ್ದೇವೆ. ಆದರೆ, ವಾಸ್ತವವಾಗಿ ಅದು ಅಗ್ನಿಶಾಮಕ ವೇಷಧಾರಿ ದೇಶ ಮತ್ತು ಅವರ ನೀತಿಗಳಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಂದೆಡೆ, ಅವರು ತಮ್ಮ ದೇಶದಲ್ಲಿ ನಡೆಯುತ್ತಿರುವ ಮತೀಯ ಹಿಂಸೆಯನ್ನು ಮುಚ್ಚಿಡಲು ಭಯೋತ್ಪಾದಕ ಕೃತ್ಯಗಳೆಂದು ಹೇಳುತ್ತಿದ್ದಾರೆ’ ಎಂದು ದುಬೆ ಹೇಳಿದರು.

ತಮ್ಮ ಭಾಷಣದಲ್ಲಿ ಇಮ್ರಾನ್ ಖಾನ್, ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿ ರದ್ದು ಕುರಿತ ಭಾರತದ ಸರ್ಕಾರದ ನಿರ್ಧಾರ ಹಾಗೂ ಪಾಕಿಸ್ತಾನದ ಪರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿಯ ಸಾವಿನ ಕುರಿತು ಮಾತನಾಡಿದ್ದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತವೆ ಎಂದು ದುಬೆ ಬಲವಾಗಿ ಪುನರುಚ್ಚರಿಸಿದ್ದಾರೆ. ಇದರಲ್ಲಿ, ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳೂ ಸೇರಿವೆ. ಪಾಕಿಸ್ತಾನವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಖಾನ್ ಮತ್ತು ಇತರ ಪಾಕಿಸ್ತಾನಿ ನಾಯಕರು ಮತ್ತು ರಾಜತಾಂತ್ರಿಕರು ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಇತರ ಆಂತರಿಕ ವಿಷಯಗಳನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ವಿಶ್ವ ಸಂಸ್ಥೆಯ ಇತರ ವೇದಿಕೆಗಳಲ್ಲಿ ತಮ್ಮ ಭಾಷಣದಲ್ಲಿ ನಿರಂತರವಾಗಿ ಪ್ರಸ್ತಾಪಿಸಿದ್ದಾರೆ.

ಕಾಶ್ಮೀರ ವಿಷಯವನ್ನು ಅಂತರರಾಷ್ಟ್ರೀಯಗೊಳಿಸುವ ಪಾಕಿಸ್ತಾನದ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಸಮುದಾಯ ಮತ್ತು ಸದಸ್ಯ ರಾಷ್ಟ್ರಗಳಿಂದ ಯಾವುದೇ ಮಾನ್ಯತೆ ಸಿಕ್ಕಿಲ್ಲ.

‘ನನ್ನ ದೇಶದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡಲು ಮತ್ತು ಭಯೋತ್ಪಾದಕರಿಗೆ ಮುಕ್ತವಾಗಿರುವ ಪಾಕಿಸ್ತಾನದಲ್ಲಿಸಾಮಾನ್ಯ ಜನರ ಜೀವನ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರ ದಯನೀಯ ಸ್ಥಿತಿಯ ವಿಷಯಗಳ ಗಮನೆ ಬೇರೆಡೆ ಸೆಳೆಯಲು ವಿಶ್ವಸಂಸ್ಥೆಯು ಒದಗಿಸಿದ ವೇದಿಕೆಗಳನ್ನು ಬಳಸಿಕೊಳ್ಳುತ್ತಿರುವುದುವಿಷಾಧನೀಯ’ ಎಂದು ದುಬೆ ಹೇಳಿದ್ದಾರೆ.

‘ದುರಾದೃಷ್ಟಕರ 9/11 ಭಯೋತ್ಪಾದಕ ದಾಳಿಗೆ 20 ವರ್ಷ ಆಗುತ್ತಿದೆ. ಆ ದುಷ್ಕೃತ್ಯದ ಸೂತ್ರಧಾರಿ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದನ್ನು ಜಗತ್ತು ಮರೆಯುವುದಿಲ್ಲ. ಇಂದಿಗೂ ಸಹ, ಪಾಕಿಸ್ತಾನದ ನಾಯಕತ್ವವು ಅವನನ್ನು 'ಹುತಾತ್ಮ' ಎಂದು ವೈಭವೀಕರಿಸುತ್ತದೆ’ಎಂದು ಕಿಡಿ ಕಾರಿದ್ದಾರೆ.

‘ವಿಷಾದನೀಯವಾಗಿ, ಇಂದಿಗೂ ಪಾಕಿಸ್ತಾನದ ನಾಯಕ ಭಯೋತ್ಪಾದಕ ಕೃತ್ಯಗಳನ್ನು ಸಮರ್ಥಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಕೇಳಿದ್ದೇವೆ. ಭಯೋತ್ಪಾದನೆಗೆ ಇಂತಹ ರಕ್ಷಣೆ ಆಧುನಿಕ ಜಗತ್ತಿನಲ್ಲಿ ಸ್ವೀಕಾರಾರ್ಹವಲ್ಲ’ಎಂದು ಸ್ನೇಹಾ ದುಬೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು