ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ: ಬೈಡನ್

Last Updated 15 ಅಕ್ಟೋಬರ್ 2022, 10:34 IST
ಅಕ್ಷರ ಗಾತ್ರ

ವಾಷಿಂಗ್ಟನ್: ಇತರದೇಶಗಳ ಜೊತೆ ಹೊಂದಾಣಿಕೆ ಕಾಯ್ದುಕೊಳ್ಳದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಗುರುವಾರ, ಡೆಮಾಕ್ರಟಿಕ್ ಪಕ್ಷದ ಪ್ರಚಾರ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಅವರು,‘... ಮತ್ತು ನಾನು ಯೋಚಿಸುವುದು ಏನೆಂದರೆ, ಇತರ ದೇಶಗಳ ಜೊತೆ ಹೊಂದಾಣಿಕೆ ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ ಬಹುಶಃ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನ ಒಂದಾಗಿದೆ’ ಎಂದುಹೇಳಿದರು.

ಜಾಗತಿಕವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಮೆರಿಕದ ಆಡಳಿತ ಪಕ್ಷದ ಕಾರ್ಯಕ್ರಮದಲ್ಲಿ ಬೈಡನ್ ಮಾತನಾಡಿದರು.

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಕಳವಳಗೊಂಡಿವೆ. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಭಯೋತ್ಪಾದಕರು ಅಥವಾ ಜಿಹಾದಿ ಘಟಕಗಳ ಕೈಗೆ ಸಿಗಬಹುದು ಎಂದು ಪಶ್ಚಿಮದ ಹಲವು ದೇಶಗಳು ಆತಂಕ ವ್ಯಕ್ತಪಡಿಸಿವೆ.

‘ಪಾಕಿಸ್ತಾನವು ತನ್ನ ರಾಷ್ಟ್ರೀಯ ಭದ್ರತೆಗೆ ಅಗತ್ಯವಿದೆ ಎಂದು ಹೇಳಿಕೊಂಡು ಮೇ 1998ರಿಂದ ಅಣ್ವಸ್ತ್ರಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಆಗಿನಿಂದ, ಅಲ್ಲಿನ ಅಣ್ವಸ್ತ್ರಗಳ ದಾಸ್ತಾನು ದುಷ್ಕರ್ಮಿಗಳ ಕೈಗೆ ಸಿಗಬಹುದು ಎಂಬ ಆತಂಕ ಅಮೆರಿಕ ಅಧ್ಯಕ್ಷರನ್ನು ಕಾಡುತ್ತಿದೆ. ಇದೀಗ, ಪಾಕಿಸ್ತಾನದ ಜಿಹಾದಿಗಳ ಕೈಗೂ ಪರಮಾಣು ಶಸ್ತ್ರಾಸ್ತ್ರಗಳು ಸಿಗುವ ಆತಂಕ ಎದುರಾಗಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ವಿಜಯದಿಂದ ಸ್ಫೂರ್ತಿ ಪಡೆದಿರುವ ಜಿಹಾದಿಗಳು ಪಾಕಿಸ್ತಾನದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸಬಹುದು’ಎಂದು ಬ್ರೂಕಿಂಗ್ಸ್‌ನಲ್ಲಿನ ವಿದೇಶಾಂಗ ನೀತಿ ನಿರೂಪಣೆಯ ಹಿರಿಯ ಅಧಿಕಾರಿ ಮಾರ್ವಿನ್ ಕಲ್ಬ್ ಕಳೆದ ವರ್ಷವೇ ಬರೆದಿದ್ದಾರೆ.

ಅಫ್ಗಾನಿಸ್ತಾನದಿಂದ ಅಮೆರಿಕದ ಭದ್ರತಾ ಪಡೆಗಳನ್ನು ತ್ವರಿತವಾಗಿ ಹಿಂತೆಗೆದುಕೊಳ್ಳುವುದು ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಭದ್ರತೆಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ ಎಂದು ಅಮೆರಿಕದ ಉನ್ನತ ಜನರಲ್ ಮಾರ್ಕ್ ಮಿಲ್ಲಿ ಸಹ ಎಚ್ಚರಿಸಿದ್ದರು.

ಈ ನಡುವೆ, ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ದೇಶಗಳು ತಮ್ಮ ಮೈತ್ರಿಗಳನ್ನು ಪುನರ್ ವಿಮರ್ಶಿಸುತ್ತಿವೆ ಎಂದು ಬೈಡನ್ ತಮ್ಮ ಭಾಷಣದಲ್ಲಿ ಹೇಳಿದರು.

ಭಯೋತ್ಪಾದನೆ ಮತ್ತು ಮತೀಯ ಹಿಂಸಾಚಾರದಿಂದ ತುಂಬಿರುವ ಪಾಕಿಸ್ತಾನ ಮತ್ತು ವಿಶೇಷವಾಗಿ ಪ್ರಕ್ಷುಬ್ಧ ವಾತಾವರಣವಿರುವ ಅದರ ಪ್ರಾಂತ್ಯಗಳಿಗೆ ಭೇಟಿ ನೀಡುವುದನ್ನು ಮರುಪರಿಶೀಲಿಸುವಂತೆ ಅಮೆರಿಕ ಈ ತಿಂಗಳ ಆರಂಭದಲ್ಲಿ ತನ್ನ ಪ್ರಜೆಗಳಿಗೆ ಸೂಚಿಸಿತ್ತು.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ಗೆ ಪಾಕಿಸ್ತಾನದ ಬೆಂಬಲ ಮತ್ತು ಅದರ ನೆಲದಲ್ಲಿ ಹೆಚ್ಚಿನ ಸಂಖ್ಯೆಯ ಜಿಹಾದಿ ಉಗ್ರಗಾಮಿಗಳ ಉಪಸ್ಥಿತಿ ಕಂಡುಬಂದ ಬಳಿಕ ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ. ಅಲ್ಲದೆ, ಅಲ್ ಖೈದಾ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಪತ್ತೆಯಾಗಿ ಕೊಲ್ಲಲ್ಪಟ್ಟ ನಂತರ ಅಮೆರಿಕ, ಪಾಕಿಸ್ತಾನವನ್ನು ತೀವ್ರ ಅನುಮಾನದಿಂದ ನೋಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT