ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2017ರ ಭಾರತ– ಇಸ್ರೇಲ್ ಒಪ್ಪಂದದಲ್ಲಿ ‘ಪೆಗಾಸಸ್’ ಖರೀದಿ: ನ್ಯೂಯಾರ್ಕ್ ಟೈಮ್ಸ್

Last Updated 29 ಜನವರಿ 2022, 20:50 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಇಸ್ರೇಲ್‌ನಿಂದ ಪೆಗಾಸಸ್‌ ಬೇಹುಗಾರಿಕೆ ಕುತಂತ್ರಾಂಶವನ್ನುಭಾರತವು ಖರೀದಿಸಿದೆ ಎಂಬ ‘ದ ನ್ಯೂಯಾರ್ಕ್‌ ಟೈಮ್ಸ್‌’ (ಟಿಎನ್‌ವೈ) ವರದಿಯು ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಭಾರತ ಮತ್ತು ಇಸ್ರೇಲ್‌ ನಡುವೆ 2017ರಲ್ಲಿ ನಡೆದ ರಕ್ಷಣಾ ಸಾಮಗ್ರಿ ಮತ್ತು ಗುಪ್ತಚರ ಸಾಧನಗಳ ಖರೀದಿ ಒಪ್ಪಂದದಲ್ಲಿ ಪೆಗಾಸಸ್‌ ಕುತಂತ್ರಾಂಶವು ಮುಖ್ಯವಾಗಿತ್ತು ಎಂದು ಟಿಎನ್‌ವೈ ತನಿಖಾ ವರದಿಯು ಹೇಳಿದೆ. ಇದು ಸುಮಾರು ₹15,000 ಕೋಟಿಯ ಒಪ್ಪಂದವಾಗಿತ್ತು.

ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಇಸ್ರೇಲ್‌ ನಿರ್ಮಿತ ಪೆಗಾಸಸ್‌ ಕುತಂತ್ರಾಂಶ ಬಳಸಿ ಪತ್ರಕರ್ತರು, ರಾಜಕಾರಣಿಗಳು, ನ್ಯಾಯಮೂರ್ತಿಗಳು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಇತರರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ತನಿಖಾ ವರದಿಯು ಕಳೆದ ವರ್ಷ ಪ್ರಕಟವಾಗಿತ್ತು. ಇದು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ನಾಯಕರು ಮತ್ತು ಜನರ ಖಾಸಗಿತನದ ಉಲ್ಲಂಘನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

‘ಬ್ಯಾಟಲ್‌ ಫಾರ್‌ ದ ವರ್ಲ್ಡ್ಸ್‌ ಮೋಸ್ಟ್‌ ಪವರ್‌ಫುಲ್‌ ಸೈಬರ್‌ವೆಪನ್‌’ ಎಂಬ ಹೆಸರಿನಲ್ಲಿ ದ ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನು ಪ್ರಕಟಿಸಿದೆ. ‘ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಎಂಬ ಕಂಪನಿಯು ಜಗತ್ತಿನ ವಿವಿಧ ಗುಪ್ತಚರ ಸಂಸ್ಥೆಗಳಿಗೆ ಬೇಹುಗಾರಿಕೆ ಸಾಫ್ಟ್‌ವೇರ್ ಅನ್ನು ಚಂದಾದಾರಿಕೆ ಆಧಾರದಲ್ಲಿ ಸುಮಾರು ಒಂದು ದಶಕದಿಂದ ಮಾರಾಟ ಮಾಡುತ್ತಿದೆ. ಯಾವುದೇ ಖಾಸಗಿ ಕಂಪನಿ, ಯಾವುದೇ ದೇಶದ ಗುಪ್ತಚರ ಸಂಸ್ಥೆಗೆ ಸಾಧ್ಯವಿಲ್ಲದ ಕೆಲಸವನ್ನು ಈ ಕುತಂತ್ರಾಂಶವು ಮಾಡಬಲ್ಲುದು. ಐಫೋನ್‌ ಅಥವಾ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮೂಲಕ ನಡೆಯುವ ಯಾವುದೇ ರೀತಿಯ ಗೂಢಲಿಪಿಯ ಸಂವಹನಗಳನ್ನು ಕೂಡ ನಿರಂತರವಾಗಿ ಮತ್ತು ವಿಶ್ವಾಸಾರ್ಹವಾಗಿ ತಿಳಿಸುತ್ತದೆ’ ಎಂದು ಎನ್‌ಎಸ್‌ಒ ಕಂಪನಿಯು ಹೇಳುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2017ರ ಜುಲೈನಲ್ಲಿ ಇಸ್ರೇಲ್‌ಗೆ ನೀಡಿದ್ದ ಭೇಟಿಯ ಬಗ್ಗೆಯೂ ಟಿಎನ್‌ವೈ ವರದಿಯಲ್ಲಿ ಉಲ್ಲೇಖ ಇದೆ. ಇಸ್ರೇಲ್‌ಗೆ ಭಾರತದ ಪ್ರಧಾನಿಯ ಮೊದಲ ಭೇಟಿ ಅದಾಗಿತ್ತು. ಆ ಭೇಟಿಯು ಅತ್ಯಂತ ಸೌಹಾರ್ದಯುತವಾಗಿತ್ತು ಮತ್ತು ಭಾರತವು ಪ್ಯಾಲೆಸ್ಟೀನ್‌ಗೆ ಸಂಬಂಧಿಸಿ ತನ್ನ ನಿಲುವನ್ನೇ ಬದಲಿಸಿಕೊಂಡಿತು ಎಂದು ವರದಿಯಲ್ಲಿ ಹೇಳಲಾಗಿದೆ.

‘ಆ ಸೌಹಾರ್ದಕ್ಕೆ ಕಾರಣ ಇದೆ. ಪೆಗಾಸಸ್‌ ಕುತಂತ್ರಾಂಶ ಮತ್ತು ಕ್ಷಿಪಣಿ ವ್ಯವಸ್ಥೆ ಒಳಗೊಂಡಂತೆ ಸುಮಾರು ₹ 15,000 ಕೋಟಿ ಮೌಲ್ಯದ ರಕ್ಷಣಾ ಖರೀದಿ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದವು. 2019ರ ಜೂನ್‌ನಲ್ಲಿ, ಪ್ಯಾಲೆಸ್ಟೀನ್‌ ಮಾನವ ಹಕ್ಕು ಸಂಘಟನೆಯೊಂದಕ್ಕೆ ವೀಕ್ಷಕ ಸ್ಥಾನಮಾನ ನಿರಾಕರಿಸುವುದಕ್ಕಾಗಿ ವಿಶ್ವ ಸಂಸ್ಥೆಯಲ್ಲಿ ಭಾರತವು ಇಸ್ರೇಲ್‌ ಪರವಾಗಿ ಮತ ಹಾಕಿತು. ಭಾರತವು ಇಸ್ರೇಲ್‌ ಪರವಾದ ನಿಲುವು ತಳೆದದ್ದು ಅದೇ ಮೊದಲು’ ಎಂದೂ ವರದಿಯಲ್ಲಿ ಹೇಳಲಾಗಿದೆ.

ದ ನ್ಯೂಯಾರ್ಕ್‌ ಟೈಮ್ಸ್‌ ವರದಿಗೆ ಸಂಬಂಧಿಸಿ ಪ್ರತಿಕ್ರಿಯೆಗಾಗಿ ಸರ್ಕಾರವನ್ನು ಪಿಟಿಐ ಸಂಪರ್ಕಿಸಿದೆ. ಆದರೆ, ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ರಾಜಕೀಯ ಪಕ್ಷಗಳ ವಿವಿಧ ನಾಯಕರು, ನ್ಯಾಯಮೂರ್ತಿಗಳು, ಪತ್ರಕರ್ತರು ಮತ್ತು ಇತರರ ಮೇಲೆ ಸರ್ಕಾರವು ಬೇಹುಗಾರಿಕೆ ನಡೆಸಿದೆ ಎಂಬ ವಿಚಾರವು ಕಳೆದ ವರ್ಷ ಭಾರಿ ಸದ್ದು ಮಾಡಿತ್ತು. ಆದರೆ, ಯಾವುದೇ ವ್ಯಕ್ತಿಯ ಮೇಲೆ ಬೇಹುಗಾರಿಕೆ ನಡೆಸಿದ ಆರೋಪವನ್ನು ಸರ್ಕಾರವು ತಳ್ಳಿ ಹಾಕಿತ್ತು. ಇಂತಹ ಆರೋಪಕ್ಕೆ ಆಧಾರ ಇಲ್ಲ ಮತ್ತು ಅದು ಸತ್ಯಕ್ಕೆ ದೂರ ಎಂದು ಸರ್ಕಾರ ಹೇಳಿತ್ತು. ಸುಪ್ರೀಂ ಕೋರ್ಟ್‌ ಮತ್ತು ಸಂಸತ್ತಿಗೆ ಇದೇ ಮಾಹಿತಿಯನ್ನು ಸರ್ಕಾರ ನೀಡಿತ್ತು.

ಪೆಗಾಸಸ್‌ ಕುತಂತ್ರಾಂಶವನ್ನು ಸರ್ಕಾರವು ಬಳಸಿದೆಯೇ ಎಂಬುದರ ತನಿಖೆಗೆ ಮೂವರು ಪರಿಣತರ ಸ್ವತಂತ್ರ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಕಳೆದ ಅಕ್ಟೋಬರ್‌ನಲ್ಲಿ ರಚಿಸಿತ್ತು. ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಸರ್ಕಾರವು ಪ್ರತಿ ಬಾರಿಯೂ ಮುಕ್ತ ಅವಕಾಶ ಪಡೆದುಕೊಳ್ಳುವಂತಿಲ್ಲ ಎಂದು ಕೋರ್ಟ್‌ ಹೇಳಿತ್ತು. ಇಂತಹ ಸನ್ನಿವೇಶದಲ್ಲಿ ಸುಪ್ರೀಂ ಕೋರ್ಟ್‌ ಮೂಕಪ್ರೇಕ್ಷಕ ಆಗಿರುವುದು ಸಾಧ್ಯವಿಲ್ಲ ಎಂದೂ ಹೇಳಿತ್ತು.

ಅಮೆರಿಕ, ಮೆಕ್ಸಿಕೊ, ಸೌದಿ ಅರೇಬಿಯಾ, ಪನಾಮಾ ಸೇರಿದಂತೆ ಹಲವು ದೇಶಗಳು ಪೆಗಾಸಸ್‌ ಕುತಂತ್ರಾಂಶವನ್ನು ಬಳಸಿವೆ ಎನ್ನಲಾಗಿದೆ.

ಮೆಕ್ಸಿಕೊ ಮತ್ತು ಪನಾಮಾದಂತಹ ದೇಶಗಳು ಇಸ್ರೇಲ್‌ ಬಗೆಗಿನ ನಿಲುವನ್ನುಪೆಗಾಸಸ್‌ ಲಭ್ಯವಾದ ಬಳಿಕ ಬದಲಿಸಿಕೊಂಡಿವೆ. ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪರವಾಗಿ ಮತ ಹಾಕಿವೆ’ ಎಂದು ದ ನ್ಯೂಯಾರ್ಕ್‌ ಟೈಮ್ಸ್‌ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT