ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ರಾಷ್ಟ್ರಗಳ ಪ್ರಧಾನಿ ಮೋದಿ ಪ್ರವಾಸ ಫಲದಾಯಕ: ವಿದೇಶಾಂಗ ಸಚಿವಾಲಯ

Last Updated 5 ಮೇ 2022, 5:22 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತ–ನಾರ್ಡಿಕ್‌ ದೇಶಗಳ ಶೃಂಗದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡಿ, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ಭೇಟಿ ಮಾಡಿದರು. ಗುರುವಾರ ಪ್ರಧಾನಿ ಪ್ಯಾರಿಸ್‌ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಈ ಮೂಲಕ ಪ್ರಧಾನಿ ಮೋದಿ ಅವರ ಯುರೋಪ್‌ನ ಮೂರು ರಾಷ್ಟ್ರಗಳ ಪ್ರವಾಸ ಪೂರ್ಣಗೊಂಡಿದೆ. ದ್ವಿಪಕ್ಷೀಯ ಸರಣಿ ಸಭೆಗಳಲ್ಲಿ ವ್ಯಾಪಾರ, ಇಂಧನ ಹಾಗೂ ಹಸಿರು ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳಿಗೆ ಪುಷ್ಠಿ ಸಿಕ್ಕಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಟ್ವೀಟಿಸಿದ್ದು, 'ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ, 3 ರಾಷ್ಟ್ರಗಳ ಪ್ರವಾಸವು ಅತ್ಯಂತ ಫಲದಾಯಕವಾಗಿದೆ. ಹೂಡಿಕೆ ಮತ್ತು ವ್ಯಾಪಾರ ಒಪ್ಪಂದಗಳು, ಶುದ್ಧ ಇಂಧನಗಳಿಗೆ ಸಂಬಂಧಿಸಿದ ಹೊಸ ಪಾಲುದಾರಿಕೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ನಾವಿನ್ಯತೆಯ ಸಹಭಾಗಿತ್ವ ಹಾಗೂ ಯುರೋಪ್‌ನ ಪಾಲುದಾರರೊಂದಿಗೆ ಸಹಕಾರ ಬಲಗೊಂಡಿದೆ' ಎಂದಿದ್ದಾರೆ.

ಫ್ರಾನ್ಸ್‌ ಭೇಟಿಯ ಬಗ್ಗೆ ಟ್ವೀಟಿಸಿರುವ ಪ್ರಧಾನಿ ಮೋದಿ, 'ನನ್ನ ಫ್ರಾನ್ಸ್‌ ಭೇಟಿಯು ಕಡಿಮೆ ಅವಧಿಯದ್ದಾಗಿತ್ತು. ಆದರೆ, ಅತ್ಯಂತ ಫಲಪ್ರದವಾಗಿದೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ನನಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ಸಿಕ್ಕಿತು. ಆತಿಥ್ಯಕ್ಕೆ ಅವರು ಮತ್ತು ಫ್ರೆಂಚ್‌ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದು ಪ್ರಕಟಿಸಿದ್ದಾರೆ.

ವಾರದ ಹಿಂದೆಯಷ್ಟೇ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಫ್ರಾನ್ಸ್‌ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾಗಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ, ಪರಸ್ಪರ ಹಿತಾಸಕ್ತಿಗಳ ಜೊತೆಗೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಯ ವಿಷಯಗಳ ಕುರಿತು ಚರ್ಚೆ ನಡೆಸಿದರು. ಎರಡೂ ರಾಷ್ಟ್ರಗಳ ನಿಯೋಗದ ಮಟ್ಟದ ಮಾತುಕತೆಗೂ ಮುನ್ನ ಮ್ಯಾಕ್ರಾನ್‌ ಮತ್ತು ಮೋದಿ ಪರಸ್ಪರ ಚರ್ಚಿಸಿದರು.

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮುಂದುವರಿಸಿರುವ ಸಮಯದಲ್ಲಿ ಪ್ರಧಾನಿ ಮೋದಿ ಅವರ ಯುರೋಪ್‌ ಭೇಟಿ ಮಹತ್ವ ಪಡೆದಿದೆ. ರಷ್ಯಾ ವಿರುದ್ಧ ಯುರೋಪ್‌ನ ರಾಷ್ಟ್ರಗಳು ಒಗ್ಗೂಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೇ 16ರಂದು ನೇಪಾಳಕ್ಕೆ ಸಂಕ್ಷಿಪ್ತ ಭೇಟಿ ನೀಡಲಿದ್ದಾರೆ.

ನೇಪಾಳ ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ಅವರ ಆಹ್ವಾನದ ಮೇರೆಗೆ ಮೋದಿ ಅವರು ಪಶ್ಚಿಮ ನೇಪಾಳದ ಲುಂಬಿನಿಗೆ ಭೇಟಿ ನೀಡಿ, ಬುದ್ಧಪೂರ್ಣಿಮೆಯಲ್ಲಿ ಪಾಲ್ಗೊಳ್ಳುವರು ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT