ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಪ್ರಧಾನಿ ಬೋರಿಸ್ ಸೇರಿ ಹಲವು ಅಧಿಕಾರಿಗಳಿಗೆ ರಷ್ಯಾ ಪ್ರವೇಶ ನಿರ್ಬಂಧ

Last Updated 16 ಏಪ್ರಿಲ್ 2022, 10:42 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್‌ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾದ ಮೇಲೆ ಲಂಡನ್ ನಿರ್ಬಂಧಗಳನ್ನು ಹೇರಿದ ನಂತರ, ಬ್ರಿಟಿಷ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಇತರ ಹಲವಾರು ಅಧಿಕಾರಿಗಳಿಗೆ ಪ್ರವೇಶವನ್ನು ನಿಷೇಧಿಸುವುದಾಗಿ ರಷ್ಯಾ ಶನಿವಾರ ಘೋಷಿಸಿದೆ.

'ರಷ್ಯಾವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಿಸಲು, ನಮ್ಮ ದೇಶವನ್ನು ನಿರ್ಬಂಧಿಸಲು ಮತ್ತು ದೇಶೀಯ ಆರ್ಥಿಕತೆಯ ಕತ್ತು ಹಿಸುಕುವಂತ ಪರಿಸ್ಥಿತಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಲಂಡನ್‌ನ ಕಡಿವಾಣವಿಲ್ಲದ ಮಾಹಿತಿ ಮತ್ತು ರಾಜಕೀಯ ಅಭಿಯಾನಕ್ಕೆ ಪ್ರತಿಯಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ' ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.

ಲಂಡನ್ 'ಹಿಂದೆಂದೂ ಕಂಡಿಲ್ಲದ ಹಗೆತನದ' ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಪಿಸಿರುವ ಸಚಿವಾಲಯವು, ನಿರ್ದಿಷ್ಟವಾಗಿ ರಷ್ಯಾದ ಹಿರಿಯ ಅಧಿಕಾರಿಗಳ ಮೇಲೆ ವಿಧಿಸಿದ ನಿರ್ಬಂಧಗಳನ್ನು ಉಲ್ಲೇಖಿಸಿದೆ.

'ಬ್ರಿಟಿಷ್ ನಾಯಕತ್ವವು ಉದ್ದೇಶಪೂರ್ವಕವಾಗಿ ಉಕ್ರೇನ್ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಿದೆ. ಕೀವ್ ಆಡಳಿತವನ್ನು ಮಾರಕ ಶಸ್ತ್ರಾಸ್ತ್ರಗಳೊಂದಿಗೆ ನಮ್ಮ ವಿರುದ್ಧ ಚೂ ಬಿಡುತ್ತಿದೆ ಮತ್ತು ನ್ಯಾಟೊ ಪರವಾಗಿ ಇದೇ ರೀತಿಯ ಪ್ರಯತ್ನಗಳನ್ನು ಸಂಘಟಿಸುತ್ತಿದೆ' ಎಂದು ಸಚಿವಾಲಯ ಹೇಳಿದೆ.

ರಷ್ಯಾದ ಪ್ರವೇಶ ಕಪ್ಪುಪಟ್ಟಿಯಲ್ಲಿ ಇಂಗ್ಲೆಂಡ್‌ನ ಉಪ ಪ್ರಧಾನಿ ಡೊಮಿನಿಕ್ ರಾಬ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಮಾಜಿ ಪ್ರಧಾನಿ ತೆರೇಸಾ ಮೇ ಮತ್ತು ಸ್ಕಾಟ್ಲೆಂಡ್‌ನ ಮೊದಲ ಮಂತ್ರಿ ನಿಕೋಲಾ ಸ್ಟರ್ಜನ್ ಸೇರಿದ್ದಾರೆ.

ಫೆಬ್ರುವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ ಮೇಲೆ ವಿಶೇಷ ಸೇನಾ ಕಾರ್ಯಾಚರಣೆಯನ್ನು ಕೈಗೊಂಡಾಗಿನಿಂದಲೂ, ರಷ್ಯಾದ ಆಸ್ತಿ ಜಪ್ತಿ, ಪ್ರಯಾಣ ನಿಷೇಧ ಮತ್ತು ಆರ್ಥಿಕ ನಿರ್ಬಂಧಗಳನ್ನು ಬ್ರಿಟನ್ ವಿಧಿಸಿದೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಪಾಶ್ಚಿಮಾತ್ಯ ದೇಶಗಳು ಖಂಡಿಸಿವೆ ಮತ್ತು ರಷ್ಯಾ ಮೇಲೆ ಹಲವಾರು ಕಠಿಣ ನಿರ್ಬಂಧಗಳನ್ನು ಹೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT